IND vs AUS: ‘ಸುಳ್ಳು ಹೇಳುತ್ತಿದ್ದಾರೆ’; ಹೆಡ್ ಜೊತೆಗಿನ ಜಗಳದ ಬಗ್ಗೆ ಸಿರಾಜ್ ಪ್ರತಿಕ್ರಿಯೆ

IND vs AUS: ‘ಸುಳ್ಳು ಹೇಳುತ್ತಿದ್ದಾರೆ’; ಹೆಡ್ ಜೊತೆಗಿನ ಜಗಳದ ಬಗ್ಗೆ ಸಿರಾಜ್ ಪ್ರತಿಕ್ರಿಯೆ

ಪೃಥ್ವಿಶಂಕರ
|

Updated on: Dec 08, 2024 | 5:12 PM

Siraj vs Head: ಅಡಿಲೇಡ್‌ನಲ್ಲಿ ನಡೆದ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಸೋಲಿಗಿಂತಲೂ ಮೊಹಮ್ಮದ್ ಸಿರಾಜ್ ಮತ್ತು ಟ್ರಾವಿಸ್ ಹೆಡ್ ನಡುವಿನ ಮಾತಿನ ಚಕಮಕಿ ಹೆಚ್ಚು ಚರ್ಚೆಯಾಯಿತು. ಹೆಡ್ ಅವರನ್ನು ಔಟ್ ಮಾಡಿದ ನಂತರ ಸಿರಾಜ್‌ರ ಆಚರಣೆಯಿಂದ ಹೆಡ್ ಅಸಮಾಧಾನಗೊಂಡಿದ್ದರು. ಹೆಡ್ ನೀಡಿದ ಹೇಳಿಕೆಗೆ ಸಿರಾಜ್ ಪ್ರತಿಕ್ರಿಯಿಸಿದ್ದು, ಹೆಡ್ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಅಡಿಲೇಡ್​ನಲ್ಲಿ ನಡೆದ ಡೇ ನೈಟ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ 10 ವಿಕೆಟ್​ಗಳ ಹೀನಾಯ ಸೋಲು ಕಂಡಿದೆ. ಹೀಗಾಗಿ ಉಭಯ ತಂಡಗಳ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ 1-1 ರಿಂದ ಸಮಬಲಗೊಂಡಿದೆ. ಆಸೀಸ್ ವಿರುದ್ಧ ಟೀಂ ಇಂಡಿಯಾದ 10 ವಿಕೆಟ್​ಗಳ ಸೋಲು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಆದರೆ ಈ ಸೋಲಿನ ಹೊರತಾಗಿಯೂ ಈ ಟೆಸ್ಟ್ ಪಂದ್ಯದಲ್ಲಿ ಹೆಚ್ಚು ಚರ್ಚೆಯಾದ ವಿಷಯವೆಂದರೆ ಅದು ಮೊಹಮ್ಮದ್ ಸಿರಾಜ್ ಮತ್ತು ಟ್ರಾವಿಸ್ ಹೆಡ್ ನಡುವಿನ ಮಾತಿನ ಚಕಮಕಿ. ವಾಸ್ತವವಾಗಿ ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್‌ನಲ್ಲಿ ಹೆಡ್ ಅ ರನ್ನು ಔಟ್ ಮಾಡಿದ ನಂತರ, ಸಿರಾಜ್ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದರು. ಇದರಿಂದಾಗಿ ಅಸಮಾಧಾನಗೊಂಡಿದ್ದ ಹೆಡ್, ದಿನದಾಟ ಮುಗಿದ ಬಳಿಕ ನಾನು ಸಿರಾಜ್​ಗೆ ಉತ್ತಮವಾಗಿ ಬೌಲ್ ಮಾಡಿದೆ ಎಂದು ಹೇಳಿದೆ. ಆದರೆ, ಸಿರಾಜ್ ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಪೆವಿಲಿಯನ್​ಗೆ ಹೋಗುವಂತೆ ಕೈಸನ್ನೆ ಮಾಡಿದರು. ಇದರಿಂದ ನನಗೆ ಬೇಸರವಾಯಿತು ಎಂದಿದ್ದರು. ಇದೀಗ ಹೆಡ್ ಹೇಳಿಕೆಯ ಬಗ್ಗೆ ಸಿರಾಜ್ ಪ್ರತಿಕ್ರಿಯೆ ನೀಡಿದ್ದು, ಅವರು ಸುಳ್ಳು ಹೇಳುತ್ತಿದ್ದಾರೆ ಎಂದಿದ್ದಾರೆ.

ಸಿರಾಜ್ ಹೇಳಿದ್ದೇನು?

ಅಡಿಲೇಡ್‌ ಟೆಸ್ಟ್​ನ ಮೂರನೇ ದಿನದಾಟಕ್ಕೂ ಮುನ್ನ ಈ ಬಗ್ಗೆ ಮಾತನಾಡಿದ ಸಿರಾಜ್, ಹೆಡ್ ಸುಳ್ಳು ಹೇಳುತ್ತಿದ್ದಾರೆ. ಭಾರತ ತಂಡವು ಪ್ರತಿಯೊಬ್ಬ ಆಟಗಾರನನ್ನು ಗೌರವಿಸುತ್ತದೆ. ಹೆಡ್ ಅವರೇ ನನ್ನನ್ನು ನಿಂದಿಸಿದ್ದಾರೆ. ಆದ್ದರಿಂದಲೇ ನಾನು ಇಂತಹ ಆಕ್ರಮಣಕಾರಿ ಶೈಲಿಯನ್ನು ಪ್ರತಿಕ್ರಿಯಿಸಬೇಕಾಯಿತು. ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದ ಹೆಡ್​ರನ್ನು ಔಟ್ ಮಾಡಿದರಿಂಧ ನಾನು ಸಾಮಾನ್ಯವಾಗಿಯೇ ಸಂಭ್ರಮಿಸಿದೆ. ಆದರೆ ಹೆಡ್ ಅವರೇ ನನ್ನನ್ನು ಮೊದಲು ನಿಂದಿಸಿದರು. ನೀವು ಟಿವಿಯಲ್ಲೂ ವೀಕ್ಷಿಸಬಹುದು.

ಆರಂಭದಲ್ಲಿ ನಾನು ಸುಮ್ಮನೆ ಸಂಭ್ರಮಿಸುತ್ತಿದ್ದೆ. ನಾನು ಮೊದಲು ಹೆಡ್​ಗೆ ಏನನ್ನೂ ಹೇಳಲಿಲ್ಲ. ಆದರೆ ಹೆಡ್​ ಅವಾಚ್ಯ ಶಬ್ದವನ್ನು ಬಳಸಿದಕ್ಕಾಗಿಯೇ ನಾನು ಆ ರೀತಿಯಾಗಿ ಸಂಭ್ರಮಿಸಬೇಕಾಯಿತು. ಆದರೆ ಹೆಡ್ ಸುದ್ದಿಗೋಷ್ಠಿಯಲ್ಲಿ ಸುಳ್ಳು ಹೇಳಿದ್ದಾರೆ. ನಾವು ಎಲ್ಲರನ್ನೂ ಗೌರವಿಸುತ್ತೇವೆ. ನಾನು ಯಾವಾಗಲೂ ಎಲ್ಲರನ್ನು ಗೌರವಿಸುತ್ತೇನೆ ಏಕೆಂದರೆ ಕ್ರಿಕೆಟ್ ಸಜ್ಜನರ ಆಟವಾಗಿದೆ ಎಂದು ಸಿರಾಜ್ ಪ್ರತಿಕ್ರಿಯೆ ನೀಡಿದರು.

ಪಂದ್ಯದಲ್ಲಿ ಏನಾಯ್ತು?

ಅಡಿಲೇಡ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 10 ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿತು. ಈ ಗೆಲುವಿನೊಂದಿಗೆ ಕಾಂಗರೂ ತಂಡ ಸರಣಿಯಲ್ಲಿ ಪುನರಾಗಮನ ಮಾಡಿದ್ದು, ಸದ್ಯ ಐದು ಪಂದ್ಯಗಳ ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಿದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 180 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 337 ರನ್ ಗಳಿಸಿ 157 ರನ್‌ಗಳ ಮುನ್ನಡೆ ಸಾಧಿಸಿತು. ಭಾರತದ ಎರಡನೇ ಇನ್ನಿಂಗ್ಸ್ 175 ರನ್‌ಗಳಿಗೆ ಅಂತ್ಯಗೊಂಡಿತು. ಹೀಗಾಗಿ ಗೆಲುವಿಗೆ 19 ರನ್‌ಗಳ ಗುರಿ ಪಡೆದ ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೆ ಜಯದ ನಗೆಬೀರಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ