‘ಸೆಂಟರ್ ಆಫ್ ಎಕ್ಸಲೆನ್ಸ್’ನಲ್ಲಿ ತುರ್ತು ಸಭೆ ಕರೆದ ಬಿಸಿಸಿಐ

ಭಾರತೀಯ ಕ್ರಿಕೆಟ್ ತಂಡ ಸದ್ಯ ತೀವ್ರ ಗಾಯದ ಸಮಸ್ಯೆಯಿಂದ ಕಂಗಾಲಾಗಿದ್ದು, ಪ್ರಮುಖ ಆಟಗಾರರು ಕಣಕ್ಕಿಳಿಯದಂತೆ ಮಾಡಿದೆ. ಜಸ್​ಪ್ರೀತ್ ಬುಮ್ರಾ, ಸಾಯಿ ಸುದರ್ಶನ್ ಮತ್ತು ಹರ್ಷಿತ್ ರಾಣಾ ಸೇರಿದಂತೆ ಹತ್ತಕ್ಕೂ ಹೆಚ್ಚು ಸ್ಟಾರ್ ಆಟಗಾರರು ಗಾಯಗೊಂಡು ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ (CoE) ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ತುರ್ತು ಸಭೆ ಕರೆದಿದೆ.

‘ಸೆಂಟರ್ ಆಫ್ ಎಕ್ಸಲೆನ್ಸ್’ನಲ್ಲಿ ತುರ್ತು ಸಭೆ ಕರೆದ ಬಿಸಿಸಿಐ
Vvs Laxman - Devajit Saikia
Image Credit source: BCCI

Updated on: Aug 09, 2026 | 9:59 AM

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಇಂದು (ಭಾನುವಾರ) ಬೆಂಗಳೂರಿನ ‘ಸೆಂಟರ್ ಆಫ್ ಎಕ್ಸಲೆನ್ಸ್’ (CoE) ಕ್ರೀಡಾ ಸಂಕೀರ್ಣದಲ್ಲಿ ಹೆಡ್ ಆಫ್ ಕ್ರಿಕೆಟ್ ವಿವಿಎಸ್ ಲಕ್ಷ್ಮಣ್ ಅವರನ್ನು ಭೇಟಿಯಾಗಿ ಮಹತ್ವದ ಸಭೆ ನಡೆಸಲಿದ್ದಾರೆ. ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಸರಣಿ ಗಾಯದ ಸಮಸ್ಯೆಗೆ ತುತ್ತಾಗುತ್ತಿರುವುದು ಮತ್ತು ಚೇತರಿಕೆ ಪ್ರಕ್ರಿಯೆಯಲ್ಲಿ ಉಂಟಾಗಿರುವ ಗೊಂದಲಗಳ ಹಿನ್ನೆಲೆಯಲ್ಲಿ ಈ ಹಠಾತ್ ಸಭೆಯನ್ನು ಕರೆಯಲಾಗಿದೆ.

ಮಿನಿ ಆಸ್ಪತ್ರೆ’ಯಾದ ಕ್ರೀಡಾ ಸಂಕೀರ್ಣ:

ಪ್ರಸ್ತುತ ಬೆಂಗಳೂರಿನ CoE ನಲ್ಲಿ ಜಸ್​ಪ್ರೀತ್ ಬುಮ್ರಾ ಸೇರಿದಂತೆ ಭಾರತ ತಂಡದ 10 ಕ್ಕೂ ಹೆಚ್ಚು ಮುಂಚೂಣಿಯ ಆಟಗಾರರು ಗಾಯಾಳುಗಳಾಗಿ ರಿಹ್ಯಾಬ್ ಶಿಬಿರದಲ್ಲಿದ್ದಾರೆ. ತಂಡದ ಪ್ರಮುಖ ಆಸ್ತಿಯಾಗಿರುವ ಬೌಲರ್‌ಗಳು ಮತ್ತು ಆಲ್‌ರೌಂಡರ್‌ಗಳು ಒಂದಾದ ಮೇಲೊಂದರಂತೆ ಗಾಯದ ಸಮಸ್ಯೆಗೆ ಸಿಲುಕುತ್ತಿರುವುದು ಬಿಸಿಸಿಐ ಮಂಡಳಿಯನ್ನು ತೀವ್ರ ಚಿಂತೆಗೀಡು ಮಾಡಿದೆ. ಹೀಗಾಗಿಯೇ ಇದೀಗ ಇದೀಗ ‘ಸೆಂಟರ್ ಆಫ್ ಎಕ್ಸಲೆನ್ಸ್’ ನಲ್ಲಿ ತುರ್ತು ಸಭೆ ಕರೆದಿದೆ.

ಆಯ್ಕೆ ಸಮಿತಿ ಮತ್ತು CoE ನಡುವೆ ಸಮನ್ವಯದ ಕೊರತೆ?

ಇತ್ತೀಚಿನ ವರದಿಗಳ ಪ್ರಕಾರ, ಆಟಗಾರರ ಫಿಟ್‌ನೆಸ್ ಮತ್ತು ಲಭ್ಯತೆಯ ವಿಚಾರದಲ್ಲಿ ಆಯ್ಕೆ ಸಮಿತಿ ಹಾಗೂ ಸಿಒಇ ನಡುವೆ ಸರಿಯಾದ ಸಂವಹನ ನಡೆದಿಲ್ಲ ಎಂಬ ಆರೋಪ ಕೇಳಿಬಂದಿದೆ. ಜಸ್​ಪ್ರೀತ್ ಬುಮ್ರಾ ಮತ್ತು ಸಾಯಿ ಸುದರ್ಶನ್ ಅವರು ಮುಂಬರುವ ಸರಣಿಗೆ ಲಭ್ಯರಿರುತ್ತಾರೆ ಎಂದು ಆಯ್ಕೆಗಾರರು ಭಾವಿಸಿದ್ದರು.  ಆದರೆ, ಅವರ ಚೇತರಿಕೆಯ ಅವಧಿ ಮತ್ತಷ್ಟು ವಿಸ್ತರಣೆಯಾಗಿರುವುದು ಆಯ್ಕೆ ಸಮಿತಿಗೆ ದೊಡ್ಡ ಹಿನ್ನಡೆಯಾಗಿದೆ. ಅಲ್ಲದೆ, ಸ್ಪೋರ್ಟ್ಸ್ ಸೈನ್ಸ್​  ವಿಭಾಗದ ಮುಖ್ಯಸ್ಥರ ಹುದ್ದೆ ಖಾಲಿ ಇರುವುದು ಕೂಡ ಈ ಬಿಕ್ಕಟ್ಟಿಗೆ ಪ್ರಮುಖ ಕಾರಣ ಎನ್ನಲಾಗಿದೆ.

ಗಾಯಾಳುಗಳ ಪಟ್ಟಿಯಲ್ಲಿರುವ ಪ್ರಮುಖ ಆಟಗಾರರು:

  • ಜಸ್​ಪ್ರೀತ್  ಬುಮ್ರಾ: ಮೊಣಕಾಲು ನೋವಿನ ಸಮಸ್ಯೆ.
  • ಸಾಯಿ ಸುದರ್ಶನ್: ಕಾಲಿನ ಹೆಬ್ಬೆರಳಿನ ತೀವ್ರ ನೋವು.
  • ಹರ್ಷಿತ್ ರಾಣಾ: ಹ್ಯಾಮ್‌ಸ್ಟ್ರಿಂಗ್ ಸಮಸ್ಯೆ ಮತ್ತು ಫಿಟ್‌ನೆಸ್ ಏರುಪೇರು.
  • ನಿತೀಶ್ ಕುಮಾರ್ ರೆಡ್ಡಿ: ಹ್ಯಾಮ್‌ಸ್ಟ್ರಿಂಗ್ ಮತ್ತು ಕ್ವಾಡ್ರಿಸೆಪ್ಸ್ ನೋವು.
  • ವಾಷಿಂಗ್ಟನ್ ಸುಂದರ್ ಹಾಗೂ ಆಕಾಶ್ ದೀಪ್: ಸ್ನಾಯು ಸೆಳೆತ ಮತ್ತು ಬೆನ್ನುನೋವಿನ ಚಿಕಿತ್ಸೆ.
  • ಹಾರ್ದಿಕ್ ಪಾಂಡ್ಯ ಮತ್ತು ವರುಣ್ ಚಕ್ರವರ್ತಿ: ಫಿಟ್​ನೆಸ್ ಮತ್ತು ಗಾಯದ ಸಮಸ್ಯೆ.

ಗಂಭೀರ್ ಮತ್ತು ಅಗರ್ಕರ್ ಭಾಗಿ ಸಾಧ್ಯತೆ:

ಈ ಮಹತ್ವದ ಪರಾಮರ್ಶನಾ ಸಭೆಯಲ್ಲಿ ಟೀಮ್ ಇಂಡಿಯಾ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ವರ್ಚುವಲ್ (ಆನ್‌ಲೈನ್) ಮೂಲಕ ಭಾಗವಹಿಸುವ ಸಾಧ್ಯತೆಯಿದೆ. ಆಟಗಾರರು ಪದೇ ಪದೇ ಗಾಯದ ಸಮಸ್ಯೆಗೆ ತುತ್ತಾಗುವುದನ್ನು ತಡೆಯಲು ಹೊಸದೊಂದು ಕಟ್ಟುನಿಟ್ಟಿನ ನಿಯಮಾವಳಿಯನ್ನು ರೂಪಿಸುವುದು ಈ ಸಭೆಯ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: ಬರೋಬ್ಬರಿ 8 ವಿಕೆಟ್​… ಆಸ್ಟ್ರೇಲಿಯಾದ ಯುವ ವೇಗಿಯ ಮಿಂಚಿನ ದಾಳಿ!

ಒಟ್ಟಾರೆಯಾಗಿ ಹೇಳುವುದಾದರೆ, ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ  ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮತ್ತು ವಿವಿಎಸ್ ಲಕ್ಷ್ಮಣ್ ನಡುವೆ ನಡೆಯಲಿರುವ ಈ ತುರ್ತು ಸಭೆಯು ಕೇವಲ ಒಂದು ಸಾಮಾನ್ಯ ಪರಾಮರ್ಶೆಯಲ್ಲ. ಇದು ಭಾರತೀಯ ಕ್ರಿಕೆಟ್‌ನ ಆಟಗಾರರ ಫಿಟ್‌ನೆಸ್ ನಿರ್ವಹಣೆಯಲ್ಲಿ ಎದುರಾಗಿರುವ ಗಂಭೀರ ಬಿಕ್ಕಟ್ಟನ್ನು ನಿವಾರಿಸಲು ಕೈಗೊಂಡಿರುವ ಅತ್ಯಂತ ನಿರ್ಣಾಯಕ ಹೆಜ್ಜೆಯಾಗಿದೆ.

 

Published On - 9:57 am, Sun, 9 August 26

Loading...
Unable to load recommendations.
Follow Us