
ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾ (Rohit Sharma) ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಈಗ ಈ ಇಬ್ಬರು ಆಟಗಾರರು ಏಕದಿನ ಮಾದರಿಯಿಂದಲೂ ನಿವೃತ್ತರಾಗುತ್ತಿದ್ದಾರೆ ಎಂಬ ವರದಿಗಳಿವೆ. ಆದರೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈ ಬಗ್ಗೆ ಮೌನ ಮುರಿದಿದ್ದು, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸದ್ಯಕ್ಕೆ ಈ ಮಾದರಿಯಿಂದ ನಿವೃತ್ತಿ ಹೊಂದುವುದಿಲ್ಲ ಎಂದು ಮಂಡಳಿಯ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದಾರೆ. ಈ ಮೂಲಕ ಕೆಲವು ದಿನಗಳಿಂದ ಕೇಳಿಬರುತ್ತಿದ್ದ ಊಹಾಪೋಹಗಳಿಗೆ ತೆರೆ ಎಳಿದಿದ್ದಾರೆ.
ಯುಪಿ ಟಿ20 ಲೀಗ್ ಸಂದರ್ಭದಲ್ಲಿ ನಡೆದ ಟಾಕ್ ಶೋವೊಂದರಲ್ಲಿ, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಾರೆ ಎಂಬ ವದಂತಿಗಳನ್ನು ತಳ್ಳಿಹಾಕಿದರು. ಟಾಕ್ ಶೋ ಸಮಯದಲ್ಲಿ, ನಿರೂಪಕರೊಬ್ಬರು ರಾಜೀವ್ ಶುಕ್ಲಾ ಅವರ ಬಳಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಸಚಿನ್ ತೆಂಡೂಲ್ಕರ್ ಅವರಂತೆ ವಿದಾಯ ಸಿಗುತ್ತದೆಯೇ ಎಂದು ಕೇಳಿದರು.
ಈ ಪ್ರಶ್ನೆಗೆ ಉತ್ತರಿಸಿದ ರಾಜೀವ್ ಶುಕ್ಲಾ, ‘ಜನರು ಇಬ್ಬರೂ ಆಟಗಾರರ ಬಗ್ಗೆ ಏಕೆ ಇಷ್ಟೊಂದು ಚಿಂತಿತರಾಗಿದ್ದಾರೆ?. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಇನ್ನೂ ಏಕದಿನ ಪಂದ್ಯಗಳನ್ನು ಆಡುತ್ತಿದ್ದಾರೆ. ಹೀಗಿರುವಾಗ ನಿವೃತ್ತಿಯ ಬಗ್ಗೆ ಏಕೆ ಚರ್ಚೆ ನಡೆಯುತ್ತಿದೆ? ನೀವು ಈಗಾಗಲೇ ಏಕೆ ಚಿಂತಿಸುತ್ತಿದ್ದೀರಿ?.
ಮುಂದುವರೆದು ಮಾತನಾಡಿದ ಅವರು, ‘ಬಿಸಿಸಿಐ ಎಂದಿಗೂ ಯಾವುದೇ ಆಟಗಾರನನ್ನು ನಿವೃತ್ತಿ ಹೊಂದುವಂತೆ ಕೇಳುವುದಿಲ್ಲ. ಈ ನಿರ್ಧಾರವನ್ನು ಅವರೇ ತೆಗೆದುಕೊಳ್ಳಬೇಕು. ನಮ್ಮ ನೀತಿ ತುಂಬಾ ಸ್ಪಷ್ಟವಾಗಿದೆ. ಮಂಡಳಿಯು ಯಾವುದೇ ಆಟಗಾರನನ್ನು ನಿವೃತ್ತಿ ಹೊಂದುವಂತೆ ಎಂದಿಗೂ ಕೇಳುವುದಿಲ್ಲ. ಅವರು ತಮ್ಮದೇ ಆದ ನಿರ್ಧಾರ ತೆಗೆದುಕೊಳ್ಳಬೇಕು. ಅಲ್ಲದೆ ವಿರಾಟ್ ಕೊಹ್ಲಿ ಇನ್ನೂ ಅತ್ಯಂತ ಫಿಟ್ ಆಟಗಾರರಲ್ಲಿ ಒಬ್ಬರು ಮತ್ತು ರೋಹಿತ್ ಶರ್ಮಾ ಒಬ್ಬ ಶ್ರೇಷ್ಠ ಏಕದಿನ ಆಟಗಾರ. ಈ ಇಬ್ಬರು ಆಟಗಾರರ ನಿವೃತ್ತಿಯ ಬಗ್ಗೆ ಯೋಚಿಸಬೇಡಿ. ನೀವು ಈಗ ನಿವೃತ್ತಿಯ ಬಗ್ಗೆ ಮಾತನಾಡುತ್ತಿದ್ದೀರಿ, ಆದರೆ ಕೊಹ್ಲಿ ಈಗ ತುಂಬಾ ಫಿಟ್ ಆಗಿದ್ದಾರೆ ಮತ್ತು ಅವರು ಉತ್ತಮವಾಗಿ ಪ್ರದರ್ಶನ ನೀಡುತ್ತಿದ್ದಾರೆ. ರೋಹಿತ್ ಶರ್ಮಾ ತುಂಬಾ ಚೆನ್ನಾಗಿ ಆಡುತ್ತಿದ್ದಾರೆ. ನೀವು ಅವರ ನಿವೃತ್ತಿಯ ಬಗ್ಗೆ ಅನಗತ್ಯವಾಗಿ ಚಿಂತಿಸುತ್ತಿದ್ದೀರಿ ಎಂದಿದ್ದಾರೆ.
ICC Rankings: ಕಳೆದ ವಾರ ಟಾಪ್ 5 ರೊಳಗಿದ್ದ ರೋಹಿತ್, ಕೊಹ್ಲಿ ಹೆಸರು ಇದ್ದಕ್ಕಿದ್ದಂತೆ ನಾಪತ್ತೆ..!
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅಕ್ಟೋಬರ್ 19 ರಿಂದ 25 ರವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಏಕದಿನ ಸರಣಿಯಲ್ಲಿ ಆಡಲಿದ್ದಾರೆ. ಟಿ20ಐ ಮತ್ತು ಟೆಸ್ಟ್ ನಿಂದ ನಿವೃತ್ತರಾದ ನಂತರ, ಅವರು ಏಕದಿನದಿಂದ ನಿವೃತ್ತಿ ಹೊಂದುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ಹರಡುತ್ತಿದೆ. ಆಸ್ಟ್ರೇಲಿಯಾ ಪ್ರವಾಸವು ಈ ಇಬ್ಬರು ಆಟಗಾರರ ಕೊನೆಯ ಪ್ರವಾಸವಾಗಬಹುದು ಎಂದು ಕೆಲವರ ಅಭಿಪ್ರಾಯವಾಗಿದೆ. ಆದಾಗ್ಯೂ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತರಬೇತಿಯನ್ನು ಪ್ರಾರಂಭಿಸುವ ಮೂಲಕ ಈ ವದಂತಿಗಳಿಗೆ ಅಂತ್ಯ ಹಾಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:57 pm, Sat, 23 August 25