BCCI : ಅ.18 ರಂದು ಬಿಸಿಸಿಐ ಚುನಾವಣೆ; ಜೈ ಶಾಗೆ ಅಧ್ಯಕ್ಷಗಿರಿ ಖಚಿತ..! ಐಸಿಸಿಯಲ್ಲಿ ಗಂಗೂಲಿ ದಾದಾಗಿರಿ?
BCCI : ಬಿಸಿಸಿಐ ಮುಂದಿನ ಅಧ್ಯಕ್ಷರ ಆಯ್ಕೆಗೆ ಚುನಾವಣಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಕ್ಟೋಬರ್ 4 ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಅಕ್ಟೋಬರ್ 18 ರಂದು ಮತದಾನ ನಡೆಯಲಿದೆ.
ಬಿಸಿಸಿಐ (BCCI) ಮುಂದಿನ ಅಧ್ಯಕ್ಷರ ಆಯ್ಕೆಗೆ ಚುನಾವಣಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಕ್ಟೋಬರ್ 4 ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಅಕ್ಟೋಬರ್ 18 ರಂದು ಮತದಾನ ನಡೆಯಲಿದೆ. ಅಲ್ಲದೆ ಅದೇ ದಿನ ಮತ ಎಣಿಕೆ ನಡೆಯಲಿದೆ. ಆದರೆ ಬಿಸಿಸಿಐನ ಮುಂದಿನ ಅಧ್ಯಕ್ಷರು ಯಾರು ಎಂಬ ಬಗ್ಗೆ ಈಗಾಗಲೇ ಸ್ಪಷ್ಟತೆ ಸಿಕ್ಕಿದೆ. ಬಿಸಿಸಿಐ ಕಾರ್ಯದರ್ಶಿಯಾಗಿರುವ ಅಮಿತ್ ಶಾ ಪುತ್ರ ಜೈ ಶಾ (Jai Shah) ಮುಂದಿನ ಬಿಸಿಸಿಐ ಅಧ್ಯಕ್ಷರಾಗುವ ಸಾಧ್ಯತೆ ಇದೆ. ಈಗಾಗಲೇ 22 ರಾಜ್ಯ ಕ್ರಿಕೆಟ್ ಸಂಸ್ಥೆಗಳು ಜೈ ಶಾಗೆ ಬೆಂಬಲ ಘೋಷಿಸಿವೆ. ಇದರೊಂದಿಗೆ ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ಜೈ ಶಾ ವಹಿಸಿಕೊಳ್ಳುವುದು ಖಚಿತವಾಗಿದೆ.
ಮತ್ತೊಂದೆಡೆ, ಪ್ರಸ್ತುತ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿಗೆ ಕಳುಹಿಸಲಾಗುವುದು ಎಂದು ವರದಿಯಾಗಿದೆ. ಸೌರವ್ ಗಂಗೂಲಿ ಅವರನ್ನು ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಳುಹಿಸುವ ಮೂಲಕ ಬಿಸಿಸಿಐ ಅಧ್ಯಕ್ಷರಾಗಿ ಜೈ ಶಾ ಆಯ್ಕೆಗೆ ವೇದಿಕೆ ಸಿದ್ಧವಾಗುತ್ತಿದೆಯಂತೆ. ಇತ್ತೀಚೆಗೆ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ರಾಜೀನಾಮೆ ನೀಡಿದ್ದು, ಜಯ್ ಶಾ ಮುಂದಿನ ಅಧ್ಯಕ್ಷರಾಗುತ್ತಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಆದರೆ ಬಿಸಿಸಿಐ ಅಧಿಕೃತವಾಗಿ ಈ ಮಾಹಿತಿಯನ್ನು ನಿರಾಕರಿಸಿತ್ತು. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಬಿಸಿಸಿಐ ಆಡಳಿತದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ.
ಸೌರವ್ ಗಂಗೂಲಿ ಇನ್ನು ಎರಡು ತಿಂಗಳಲ್ಲಿ ಅಂದರೆ ನವೆಂಬರ್‌ನಲ್ಲಿ ಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಹಾಲಿ ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲಿ ಅವರ ಅಧಿಕಾರಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಉನ್ನತ ಹುದ್ದೆಗೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸೌರವ್ ಗಂಗೂಲಿ ಉಮೇದುವಾರಿಕೆಗೆ ಬಿಸಿಸಿಐ ಬೆಂಬಲ ನೀಡುತ್ತಿದೆ ಎಂದು ವರದಿಯಾಗಿದೆ. ಬಿಸಿಸಿಐ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಆ ಸ್ಥಾನವನ್ನು ಹಾಲಿ ಬಿಸಿಸಿಐ ಕಾರ್ಯದರ್ಶಿ ಜೈಶಾ ಬದಲಿಸುವ ಸಾಧ್ಯತೆ ಇದೆ.
ಹಾಲಿ ಮಂಡಳಿಯ ಖಜಾಂಚಿ ಅರುಣ್ ಧುಮಾಲ್ ಕಾರ್ಯದರ್ಶಿಯಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ. ಪ್ರಸ್ತುತ 22 ರಾಜ್ಯ ಸಂಘಗಳು ಜೈ ಶಾಗೆ ಬೆಂಬಲ ನೀಡುತ್ತಿವೆ. ಮಂಡಳಿಯ ಸಂವಿಧಾನದಲ್ಲಿನ ತಿದ್ದುಪಡಿಗಳನ್ನು ಸುಪ್ರೀಂ ಕೋರ್ಟ್ ಅನುಮೋದಿಸಿದ ನಂತರ ಅಕ್ಟೋಬರ್ 18 ರಂದು ಬಿಸಿಸಿಐ ಚುನಾವಣೆ ನಡೆಯಲಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲೂ ಜಯ್ ಶಾ ಮಾಡಿದ ತಂತ್ರಗಾರಿಕೆಯಿಂದ ಐಪಿಎಲ್ ಅಷ್ಟೂ ಯಶಸ್ವಿಗೊಳ್ಳಲು ಕಾರಣವಾಯಿತು ಎಂಬುದು ಎಲ್ಲಾ ರಾಜ್ಯ ಕ್ರಿಕೆಟ್ ಮಂಡಳಿಗಳ ವಾದವಾಗಿದ್ದು, ಹೀಗಾಗಿ ಎಲ್ಲಾ ಮಂಡಳಿಗಳು ಜೈ ಶಾ ಅವರನ್ನು ಅಧ್ಯಕ್ಷ ಹುದ್ದೆಯಲ್ಲಿ ಕೂರಿಸಲು ಮುಂದಾಗಿವೆ.