
ಕ್ರಿಕೆಟ್ ಜನಪ್ರಿಯತೆ ಹೆಚ್ಚಾದಂತೆ ಇತ್ತ ವಿಶ್ವ ಕ್ರಿಕೆಟ್ನ ದೊಡ್ಡಣ್ಣ ಬಿಸಿಸಿಐನ ಖಜಾನೆಯ ಗಾತ್ರವೂ ಕೂಡ ವರ್ಷದಿಂದ ವರ್ಷಕ್ಕೆ ದೊಡ್ಡದಾಗುತ್ತಿದೆ. ಐಪಿಎಲ್ ಎಂಬ ಚಿನ್ನದ ಮೊಟ್ಟೆಯನ್ನಿಡುವ ಕೋಳಿ ಹುಟ್ಟುವುದಕ್ಕಿಂತ ಮೊದಲು ಆಟಗಾರರ ವೇತನ ನೀಡಲು ಕಷ್ಟಪಡುತ್ತಿದ್ದ ಬಿಸಿಸಿಐ ಇಂದು ಸಾವಿರಾರು ಕೋಟಿಗಳ ಒಡೆಯ. ಇದಕ್ಕೆ ಪೂರಕವಾಗಿ ಕಳೆದ 5 ವರ್ಷಗಳಲ್ಲಿ ಬಿಸಿಸಿಐ ಖಜಾನೆಗೆ ಎಷ್ಟು ಹಣ ಸೇರಿದೆ ಎಂಬ ವರದಿ ಹೊರಬಿದ್ದಿದೆ. ವರದಿಗಳ ಪ್ರಕಾರ, 2019 ರಲ್ಲಿ ಬಿಸಿಸಿಐ ಬ್ಯಾಂಕ್ ಬ್ಯಾಲೆನ್ಸ್ 6059 ಕೋಟಿ ರೂ.ಗಳಾಗಿತ್ತು. ಆದರೀಗ ಅದು 20686 ಕೋಟಿ ರೂ.ಗಳಿಗೆ ಹೆಚ್ಚಾಗಿದೆ. ಕಳೆದ ಹಣಕಾಸು ವರ್ಷ ಒಂದರಲ್ಲೇ, ಮಂಡಳಿಯು 4193 ಕೋಟಿ ರೂ. ಆದಾಯ ಗಳಿಸಿದೆ.
ಕ್ರಿಕ್‌ಬಜ್ ವರದಿಗಳ ಪ್ರಕಾರ, ಕಳೆದ 5 ವರ್ಷಗಳಲ್ಲಿ ಬಿಸಿಸಿಐನ ಬ್ಯಾಂಕ್ ಬ್ಯಾಲೆನ್ಸ್ 14627 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ. ಸೆಪ್ಟೆಂಬರ್ 28 ರಂದು ನಡೆಯಲಿರುವ ವಾರ್ಷಿಕ ಮಹಾಸಭೆಯಲ್ಲಿ ಮಂಡಳಿಯ ಈ ಗಳಿಕೆಯ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಬಹುದು. 2019 ರಿಂದ ಕಳೆದ ಐದು ವರ್ಷಗಳಲ್ಲಿ ಮಂಡಳಿಯ ಖಾತೆಗೆ 14,627 ಕೋಟಿ ರೂ.ಗಳು ಹರಿದುಬಂದಿದೆ. ಇದಲ್ಲದೆ, 2019 ರಿಂದ ಸಾಮಾನ್ಯ ನಿಧಿಯು 3,906 ಕೋಟಿ ರೂ.ಗಳಿಂದ 7,988 ಕೋಟಿ ರೂ.ಗಳಿಗೆ ಏರಿದೆ. ಹಾಗೆಯೇ 2023-24 ನೇ ಸಾಲಿಗೆ ಮಂಡಳಿಯು ತೆರಿಗೆಗಾಗಿಯೇ 3150 ಕೋಟಿ ರೂ.ಗಳನ್ನು ಮೀಸಲಿರಿಸಿದೆ. ವರದಿಗಳ ಪ್ರಕಾರ, ಬಿಸಿಸಿಐನ ಗಳಿಕೆ ಇನ್ನು ಹೆಚ್ಚಿರುತ್ತಿತ್ತು, ಆದರೆ ಕೆಲವು ಕಾರಣಗಳಿಂದಾಗಿ ಅದರ ಲಾಭ ಕಡಿಮೆಯಾಗಿದೆ.
ವರದಿಗಳ ಪ್ರಕಾರ, ಬಿಸಿಸಿಐ ಬೋಕಸಕ್ಕೆ ಇನ್ನು ಹೆಚ್ಚು ಆದಾಯ ಬರುತ್ತಿತ್ತು. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಅಂತರರಾಷ್ಟ್ರೀಯ ಪಂದ್ಯಗಳಿಂದ ಅದರ ಗಳಿಕೆ ಗಮನಾರ್ಹವಾಗಿ ಕಡಿಮೆಯಾಗಿದೆ. ಕಳೆದ ವರ್ಷ, ಬಿಸಿಸಿಐ ಅಂತರರಾಷ್ಟ್ರೀಯ ಪಂದ್ಯಗಳ ಮಾಧ್ಯಮ ಹಕ್ಕುಗಳಿಂದ 2,524.80 ಕೋಟಿ ರೂ. ಗಳಿಸಿತ್ತು. ಆದರೆ ಈ ಬಾರಿ ಅದು 813.14 ಕೋಟಿ ರೂ.ಗೆ ಇಳಿದಿದೆ. ಇದಕ್ಕೆ ಕಾರಣ ಅಂತರರಾಷ್ಟ್ರೀಯ ಪಂದ್ಯಗಳ ಆಯೋಜನೆ ಕಡಿಮೆಯಾಗಿರುವುದು.
ವರದಿಗಳ ಪ್ರಕಾರ, 2023 ರಲ್ಲಿ, ಬಿಸಿಸಿಐ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ಅನ್ನು ಆಯೋಜಿಸಿತ್ತು . ಇದಲ್ಲದೆ, ಕಳೆದ ವರ್ಷ, ಟೀಂ ಇಂಡಿಯಾದ ಅಂತರರಾಷ್ಟ್ರೀಯ ಪ್ರವಾಸಗಳಿಂದ 642.78 ಕೋಟಿ ರೂ. ಗಳಿಸಲಾಗಿತ್ತು, ಅದು ಈಗ 361.22 ಕೋಟಿ ರೂ.ಗೆ ಇಳಿದಿದೆ. ಇದಲ್ಲದೆ, ಬಿಸಿಸಿಐ ಬ್ಯಾಂಕ್ ಠೇವಣಿಗಳಿಂದ ಬಡ್ಡಿ ರೂಪದಲ್ಲಿ 986.45 ಕೋಟಿ ರೂ. ಗಳಿಸಿತ್ತು. ಆದರೆ ಈ ಬಾರಿ ಅದು ಕೇವಲ 533.05 ಕೋಟಿ ರೂ.ಗೆ ಇಳಿದಿದೆ.
ಆದಾಯದ ಜೊತೆಗೆ, ಮಂಡಳಿಯ ಖರ್ಚು ಕೂಡ ಹೆಚ್ಚಾಗಿದೆ. ಕಳೆದ ವರ್ಷ, 1,167.99 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿತ್ತು, ಅದು ಈಗ 1,623.08 ಕೋಟಿ ರೂ.ಗಳಿಗೆ ಏರಿದೆ. ಇದಲ್ಲದೆ, ಬಿಸಿಸಿಐ ಮೂಲಸೌಕರ್ಯ ಅಭಿವೃದ್ಧಿಗಾಗಿ 1200 ಕೋಟಿ ರೂ.ಗಳನ್ನು, ಪ್ಲಾಟಿನಂ ಜುಬಿಲಿ ಬೆನೆವೊಲೆಂಟ್ ಫಂಡ್‌ಗೆ 350 ಕೋಟಿ ರೂ.ಗಳನ್ನು ಮತ್ತು ಕ್ರಿಕೆಟ್ ಅಭಿವೃದ್ಧಿ ನಿಧಿಯ ಮೂಲಸೌಕರ್ಯಕ್ಕಾಗಿ 500 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ