2021-22ರ ಹಣಕಾಸು ವರ್ಷದಲ್ಲಿ ಬಿಸಿಸಿಐ ಕಟ್ಟಿದ ತೆರಿಗೆ ಎಷ್ಟು ಸಾವಿರ ಕೋಟಿ ಗೊತ್ತಾ? ಇಲ್ಲಿದೆ ಕಳೆದ 5 ವರ್ಷಗಳ ಆದಾಯದ ಲೆಕ್ಕ

|

Updated on: Aug 09, 2023 | 12:10 PM

BCCI Income Tax: ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ಬಿಸಿಸಿಐ ಪಾವತಿಸಿದ ಆದಾಯ ತೆರಿಗೆ ಮತ್ತು ಕಳೆದ ಐದು ವರ್ಷಗಳಲ್ಲಿ ಅದರ ಆದಾಯ ಮತ್ತು ವೆಚ್ಚಗಳ ವಿವರಗಳನ್ನು ಸಲ್ಲಿಸಿದ ರಿಟರ್ನ್‌ಗಳ ಆಧಾರದ ಮೇಲೆ ಲಿಖಿತ ಉತ್ತರ ನೀಡಿದ್ದಾರೆ. ಇದೀಗ ಹಣಕಾಸು ಖಾತೆ ರಾಜ್ಯ ಸಚಿವರು ನೀಡಿದ ಸ್ಪಷ್ಟನೆಯನ್ನು ಕಂಡು ಎಲ್ಲರು ಅಚ್ಚರಿಯಿಂದ ಬಾಯ್ಮೇಲೆ ಬೆರಳಿಟ್ಟುಕೊಂಡಿದ್ದಾರೆ.

2021-22ರ ಹಣಕಾಸು ವರ್ಷದಲ್ಲಿ ಬಿಸಿಸಿಐ ಕಟ್ಟಿದ ತೆರಿಗೆ ಎಷ್ಟು ಸಾವಿರ ಕೋಟಿ ಗೊತ್ತಾ? ಇಲ್ಲಿದೆ ಕಳೆದ 5 ವರ್ಷಗಳ ಆದಾಯದ ಲೆಕ್ಕ
ಬಿಸಿಸಿಐ ತೆರಿಗೆ ಪಾವತಿ
Follow us on

ಬಿಸಿಸಿಐ (BCCI).. ಪ್ರಸ್ತುತ ವಿಶ್ವ ಕ್ರಿಕೆಟ್​ನ ಕಿಂಗ್ ಮೇಕರ್ ಎಂಬುದರಲ್ಲಿ ಎರಡು ಮಾತಿಲ್ಲ. ಭಾರತ ಒಂದು ಕ್ರಿಕೆಟ್ ಧರ್ಮ ದೇಶ ಎಂಬುದನ್ನೇ ಬಂಡವಾಳ ಮಾಡಿಕೊಂಡಿರುವ ವಿಶ್ವ ಕ್ರಿಕೆಟ್​ನ ಬಿಗ್​ಬಾಸ್ ವರ್ಷದಿಂದ ವರ್ಷಕ್ಕೆ ತನ್ನ ಆದಾಯದ ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತಲೆ ಇದೆ. ಪ್ರಮುಖ ಐಸಿಸಿ (ICC) ಈವೆಂಟ್​ಗಳು, ಬಿಡುವಿಲ್ಲದ ವೇಳಾಪಟ್ಟಿ ಹಾಗೂ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್​ನಿಂದ (IPL) ಅಪರಿಮಿತ ಆದಾಯ ಗಳಿಸುತ್ತಿರುವ ಬಿಸಿಸಿಐ ಎಷ್ಟು ಶ್ರೀಮಂತ ಎಂದು ತಿಳಿದುಕೊಳ್ಳುವುದು ಎಲ್ಲರಿಗೂ ಕುತೂಹಲಕಾರಿ ವಿಚಾರವಾಗಿದೆ. ಇದೀಗ ಹಣಕಾಸು ಸಚಿವಾಲಯ ನೀಡಿರುವ ವರದಿಯು, ಬಿಸಿಸಿಐ ಎಷ್ಟು ಶ್ರೀಮಂತ ಕ್ರಿಕೆಟ್ ಸಂಸ್ಥೆ ಎಂಬುದನ್ನು ಜಗಜ್ಜಾಹೀರು ಮಾಡಿದೆ.

ಮಾಹಿತಿ ನೀಡಿದ ಹಣಕಾಸು ಖಾತೆ ರಾಜ್ಯ ಸಚಿವ

ವಾಸ್ತವವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ವರ್ಷಕ್ಕೆ ಎಷ್ಟು ಆದಾಯ ಗಳಿಸುತ್ತಿದೆ. ಮತ್ತು ಈ ಮೂಲಕ ಕೇಂದ್ರ ಬೊಕ್ಕಸಕ್ಕೆ ಎಷ್ಟು ತೆರಿಗೆ ರೂಪದಲ್ಲಿ ಬಂದು ಸೇರುತ್ತಿದೆ ಎಂಬುದರ ಕುರಿತು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದನ್ನು ಕೇಳಲಾಗಿದೆ. ಇದಕ್ಕೆ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ಬಿಸಿಸಿಐ ಪಾವತಿಸಿದ ಆದಾಯ ತೆರಿಗೆ ಮತ್ತು ಕಳೆದ ಐದು ವರ್ಷಗಳಲ್ಲಿ ಅದರ ಆದಾಯ ಮತ್ತು ವೆಚ್ಚಗಳ ವಿವರಗಳನ್ನು ಸಲ್ಲಿಸಿದ ರಿಟರ್ನ್‌ಗಳ ಆಧಾರದ ಮೇಲೆ ಲಿಖಿತ ಉತ್ತರ ನೀಡಿದ್ದ್ದಾರೆ. ಇದೀಗ ಹಣಕಾಸು ಖಾತೆ ರಾಜ್ಯ ಸಚಿವರು ನೀಡಿದ ಸ್ಪಷ್ಟನೆಯನ್ನು ಕಂಡು ಎಲ್ಲರು ಅಚ್ಚರಿಯಿಂದ ಬಾಯ್ಮೇಲೆ ಬೆರಳಿಟ್ಟುಕೊಂಡಿದ್ದಾರೆ.

BCCI: 19ನೇ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಬಿಸಿಸಿಐ ತೆಗೆದುಕೊಂಡು 5 ನಿರ್ಧಾರಗಳಿವು

ಈ ವರದಿಯಲ್ಲಿ ಕಳೆದ ಐದು ವರ್ಷಗಳಲ್ಲಿ ಬಿಸಿಸಿಐ ಎಷ್ಟು ಆದಾಯ ಗಳಿಸಿದೆ ಮತ್ತು ಸರ್ಕಾರಕ್ಕೆ ಎಷ್ಟು ತೆರಿಗೆ ಪಾವತಿಸಿದೆ ಎಂಬುದನ್ನು ವಿವರಿಸಲಾಗಿದೆ. ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಬಿಸಿಸಿಐ ಈಗ ವಿಶ್ವದ ಎರಡನೇ ಅತಿ ಹೆಚ್ಚು ತೆರಿಗೆ ಪಾವತಿಸುವ ಕ್ರೀಡಾ ಸಂಸ್ಥೆಯಾಗಿದೆ. 2021-22ರ ಹಣಕಾಸು ವರ್ಷದಲ್ಲಿ ಬಿಸಿಸಿಐ ಬರೋಬ್ಬರಿ 1159.20 ಕೋಟಿ ರೂ. ಆದಾಯ ತೆರಿಗೆಯನ್ನು ಪಾವತಿಸಿದೆ. ಇದು ಕಳೆದ 5 ವರ್ಷಗಳಲ್ಲಿ ಅತ್ಯಧಿಕ ತೆರಿಗೆ ಪಾವತಿ ಎಂಬ ದಾಖಲೆ ಬರೆದಿದೆ.

5 ವರ್ಷಗಳಲ್ಲಿ ಬಿಸಿಸಿಐ ಪಾವತಿಸಿರುವ ತೆರಿಗೆ

ಇನ್ನು ಕಳೆದ ಐದು ವರ್ಷಗಳಲ್ಲಿ ಬಿಸಿಸಿಐ ಗಳಿಸಿರುವ ಆದಾಯ ಹಾಗೂ ಪಾವತಿಸಿರುವ ತೆರಿಗೆಯ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಾಗಿದ್ದು, ಇದರ ಪ್ರಕಾರ, 2020-21ರ ಹಣಕಾಸು ವರ್ಷದಲ್ಲಿ ಬಿಸಿಸಿಐ ಆದಾಯ ತೆರಿಗೆಯಾಗಿ 844.92 ಕೋಟಿ ರೂ. ಪಾವತಿ ಮಾಡಿದೆ. ಆದರೆ 2019-20ರಲ್ಲಿ ಕೊರೊನಾ ಇದ್ದಿದ್ದರಿಂದ ಹೆಚ್ಚಿನ ಪಂದ್ಯಾವಳಿಗಳನ್ನು ಆಯೋಜಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಬಿಸಿಸಿಐ ಕೇವಲ 882.29 ಕೋಟಿಗಿಂತ ಕಡಿಮೆ ತೆರಿಗೆ ಪಾವತಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇನ್ನು 2018-19ರಲ್ಲಿ ಬಿಸಿಸಿಐ 815.04 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದರೆ, 2017-18ರಲ್ಲಿ 596.63 ಕೋಟಿ ರೂಗಳನ್ನು ಆದಾಯ ತೆರಿಗೆಯಾಗಿ ಪಾವತಿಸಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಐದು ವರ್ಷಗಳಲ್ಲಿ ಬಿಸಿಸಿಐನ ಆದಾಯ ಮತ್ತು ವೆಚ್ಚ

ಇನ್ನು ಕಳೆದ ಐದು ವರ್ಷಗಳಲ್ಲಿ ಬಿಸಿಸಿಐನ ಆದಾಯ ಮತ್ತು ವೆಚ್ಚ ಎಷ್ಟು ಎಂಬುದು ಸಹ ಈ ವರದಿಯಲ್ಲಿ ಉಲ್ಲೇಖವಾಗಿದ್ದು, ಇದರ ಪ್ರಕಾರ ಕಳೆದ ಐದು ವರ್ಷಗಳಿಗೆ ಹೋಲಿಸಿದರೆ 2021-22ರಲ್ಲಿ ಭಾರತೀಯ ಕ್ರಿಕೆಟ್ ಮಂಡಳಿಯು 7,606 ಕೋಟಿ ರೂಪಾಯಿಗಳ ಅತ್ಯಧಿಕ ಆದಾಯವನ್ನು ಗಳಿಸಿದೆ. ಇದರಲ್ಲಿ 3,064 ಕೋಟಿ ರೂಪಾಯಿ ವೆಚ್ಚವಾಗಿದೆ. ಹಾಗೆಯೇ 2021-22 ರಲ್ಲಿ ಒಟ್ಟು ಆದಾಯ 7606.15 ಕೋಟಿಗಳಾಗಿದ್ದು, 3063.88 ಕೋಟಿ ರೂ. ವೆಚ್ಚವಾಗಿದೆ. ಇನ್ನು 2020-21 ರ ಹಣಕಾಸು ವರ್ಷದಲ್ಲಿ ಒಟ್ಟು 4735.14 ಕೋಟಿ ರೂ, ಆದಾಯ ಗಳಿಸಿರುವ ಬಿಸಿಸಿಐ, 3080.37 ಕೋಟಿ ರೂ, ಗಳನ್ನು ವ್ಯಯಿಸಿದೆ.

ಇದಲ್ಲದೆ 2019-20 ರ ಸಾಲಿನಲ್ಲಿ 4972.43 ಕೋಟಿ ರೂ. ಆದಾಯ ಬಂದಿದ್ದರೆ, 2268.76 ಕೋಟಿ ರೂ. ವೆಚ್ಚವಾಗಿದೆ. 2018-19 ರಲ್ಲಿ ಒಟ್ಟು ಆದಾಯ 7181.61 ಕೋಟಿ ರೂ. ಇದ್ದರೆ, 4652.35 ಕೋಟಿ ರೂ. ವೆಚ್ಚವಾಗಿದೆ. ಇನ್ನು 2017-1ರ ಹಣಕಾಸು ವರ್ಷದಲ್ಲಿ 2916.67 ಕೋಟಿ ರೂ. ಒಟ್ಟು ಆದಾಯವಾಗಿದ್ದರೆ, 2105.50 ಕೋಟಿ ರೂ. ವೆಚ್ಚವಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:08 pm, Wed, 9 August 23