BCCI: 19ನೇ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಬಿಸಿಸಿಐ ತೆಗೆದುಕೊಂಡು 5 ನಿರ್ಧಾರಗಳಿವು

BCCI: ಮುಂಬೈನಲ್ಲಿ ತನ್ನ 19 ನೇ ಅಪೆಕ್ಸ್ ಕೌನ್ಸಿಲ್ ಸಭೆಯನ್ನು ನಡೆಸಿದ ಬಿಸಿಸಿಐ ಭಾರತ ಕ್ರಿಕೆಟ್​ಗೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿತು.

BCCI: 19ನೇ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಬಿಸಿಸಿಐ ತೆಗೆದುಕೊಂಡು 5 ನಿರ್ಧಾರಗಳಿವು
ಅಪೆಕ್ಸ್ ಕೌನ್ಸಿಲ್ ಸಭೆ
Follow us
ಪೃಥ್ವಿಶಂಕರ
|

Updated on:Jul 08, 2023 | 2:41 PM

ಜುಲೈ 7 ರಂದು ಮುಂಬೈನಲ್ಲಿ ತನ್ನ 19 ನೇ ಅಪೆಕ್ಸ್ ಕೌನ್ಸಿಲ್ (Apex Council) ಸಭೆ ನಡೆಸಿದ ಬಿಸಿಸಿಐ (BCCI) ಭಾರತ ಕ್ರಿಕೆಟ್​ಗೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಇದರಲ್ಲಿ ಭಾರತ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಬಳಿಕ ಭಾರತದ ಆಟಗಾರರು ವಿದೇಶಿ ಲೀಗ್​ಗಳಲ್ಲಿ ಆಡುವ ಬಗ್ಗೆ ಹೊಸ ನೀತಿ ಜಾರಿಗೊಳಿಸಲು ಬಿಸಿಸಿಐ ಮುಂದಾಗಿದೆ. ಹಾಗೆಯೇ ಕಳೆದ ಐಪಿಎಲ್​ನಲ್ಲಿ (IPL) ಜಾರಿಗೆ ತಂದಿದ್ದ ಹೊಸ ನಿಯಮ ಇಂಪ್ಯಾಕ್ಟ್ ಪ್ಲೇಯರ್ (Impact Player) ನಿಯಮದಲ್ಲೂ ಕೊಂಚ ಬದಲಾವಣೆ ಮಾಡಿದೆ. ಇದರೊಂದಿಗೆ ಏಷ್ಯನ್ ಗೇಮ್ಸ್​ನಲ್ಲಿ (Asian Games) ಟೀಂ ಇಂಡಿಯಾ ಆಡುವ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿರುವ ಬಿಸಿಸಿಐ, ವಿಶ್ವಕಪ್ (ICC Men’s Cricket World Cup 2023) ಆಯೋಜನೆಯ ಬಗ್ಗೆಯೂ ಚರ್ಚೆ ನಡೆಸಿದೆ. ಹಾಗಿದ್ದರೆ, ತನ್ನ 19 ನೇ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಬಿಸಿಸಿಐ ತೆಗೆದುಕೊಂಡು ಆ ಐದು ನಿರ್ಣಯಗಳು ಏನು ಎಂಬುದನ್ನು ನೋಡುವುದಾದರೆ..

1- ವಿದೇಶಿ ಲೀಗ್​ಗಳಲ್ಲಿ ಭಾರತೀಯ ಆಟಗಾರರು

ಇತ್ತೀಚಿಗೆ ಟೀಂ ಇಂಡಿಯಾದಲ್ಲಿ ಅವಕಾಶ ವಂಚಿತರಾದ ಹಾಗೆಯೇ ಭಾರತ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ ಹಿರಿಯ ಆಟಗಾರರು ವಿದೇಶಿ ಲೀಗ್ ಆಡುವತ್ತಾ ತಮ್ಮ ಗಮನ ಹರಿಸಲಾರಂಭಿಸಿದ್ದರು. ಆದರೆ ಇದೀಗ ಭಾರತ ಕ್ರಿಕೆಟ್​ಗೆ ವಿದಾಯ ಹೇಳಿ ವಿದೇಶಿ ಲೀಗ್ ಆಡಲು ಬಯಸುವ ಆಟಗಾರರಿಗೆ ಕಡಿವಾಣ ಹಾಕಲು ಬಿಸಿಸಿಐ ಮುಂದಾಗಿದೆ. ಇದರ ಸಲುವಾಗಿ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಹೊಸ ನೀತಿ ಜಾರಿಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಈಗ ಚರ್ಚಿಸಿರುವ ಹೊಸ ನೀತಿಯ ಪ್ರಕಾರ, ಭಾರತ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಆಟಗಾರರು ವಿದೇಶಿ ಲೀಗ್​ಗಳಲ್ಲಿ ಆಡಬೇಕೆಂದರೆ, ಬಿಸಿಸಿಐನಿಂದ ಎನ್​ಒಸಿ ಪಡೆಯಬೇಕು. ಹಾಗೆಯೇ ನಿವೃತ್ತ ಆಟಗಾರರಿಗೆ ಕೂಲಿಂಗ್-ಆಫ್ ಅವಧಿಯನ್ನು ಪರಿಚಯಿಸಲು ಬಿಸಿಸಿಐ ಮುಂದಾಗಿದೆ. ಅಂದರೆ, ಟೀಂ ಇಂಡಿಯಾ ಆಟಗಾರರು ಭಾರತ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಬಳಿಕ ಒಂದು ವರ್ಷದವರೆಗೆ ಯಾವುದೇ ಸಾಗರೋತ್ತರ ಪಂದ್ಯಾವಳಿಗಳಲ್ಲಿ ಭಾಗವಹಿಸುವಂತಿಲ್ಲ.

BCCI Bouncer Rule: ವೇಗದ ಬೌಲರ್​ಗಳಿಗೆ ಸಿಹಿ ಸುದ್ದಿ ನೀಡಿದ ಬಿಸಿಸಿಐ..!

2- ಏಷ್ಯನ್ ಗೇಮ್ಸ್​ಗೆ ಭಾರತ ತಂಡ

ಇದೇ ಸೆಪ್ಟೆಂಬರ್​ನಲ್ಲಿ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ಭಾರತ ಪುರುಷರ ಮತ್ತು ಮಹಿಳಾ ತಂಡಗಳನ್ನು ಕಳುಹಿಸಲು ತೀರ್ಮಾನಿಸಲಾಗಿದೆ. ಆದಾಗ್ಯೂ ಇದೇ ವರ್ಷ ಭಾರತದಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಏಷ್ಯನ್​ ಗೇಮ್ಸ್​ಗೆ ಭಾರತ ಬಿ ಪುರುಷ ತಂಡವನ್ನು ಕಳುಹಿಸಲಾಗುತ್ತಿದೆ.

3- ಇಂಪ್ಯಾಕ್ಟ್ ಪ್ಲೇಯರ್ ನಿಯಮ

ಕಳೆದ ಬಾರಿಯಂತೆ ಈ ಬಾರಿಯೂ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ. ಆದರೆ ಈ ನಿಯಮದಲ್ಲಿ ಎರಡು ಬದಲಾವಣೆಗಳನ್ನು ತರಲಾಗಿದೆ.

(ಎ) ಉಭಯ ತಂಡಗಳು ಟಾಸ್‌ಗೂ ಮೊದಲು ತಮ್ಮ ತಮ್ಮ ತಂಡಗಳ 4 ಬದಲಿ ಆಟಗಾರರೊಂದಿಗೆ ತಮ್ಮ ಆಡುವ ಹನ್ನೊಂದರ ಬಳಗವನ್ನು ಆಯ್ಕೆ ಮಾಡಬೇಕಾಗುತ್ತದೆ

(ಬಿ) ಪಂದ್ಯದ ಯಾವುದೇ ಸಮಯದಲ್ಲಿ ತಂಡಗಳು ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಬಳಸಬಹುದಾಗಿದೆ. ಈ ಹಿಂದಿನ ಆವೃತ್ತಿಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಉಭಯ ತಂಡಗಳು ಇನಿಂಗ್ಸ್‌ನ 14 ನೇ ಓವರ್ ಒಳಗೆ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಬಳಸಬಹುದಾಗಿತ್ತು. ಆದರೆ ಈಗ ಇನ್ನಿಂಗ್ಸ್​ನ ಯಾವ ಹಂತದಲ್ಲಾದರೂ ಈ ನಿಯಮವನ್ನು ಬಳಸಿಕೊಳ್ಳಬಹುದಾಗಿದೆ.

4. ಓವರ್​ನಲ್ಲಿ ಎರಡು ಬೌನ್ಸರ್

ಬಿಸಿಸಿಐ ತೆಗೆದುಕೊಂಡಿರುವ 4ನೇ ಅತಿದೊಡ್ಡ ನಿರ್ಣಯ ಬೌಲರ್​ಗಳಿಗೆ ಹೆಚ್ಚು ಸಂತಸ ತಂದಿದೆ. ಹೊಸ ನಿಯಮದ ಪ್ರಕಾರ ಮುಂಬರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಒಬ್ಬ ಬೌಲರ್ ಒಂದು ಓವರ್​ನಲ್ಲಿ ಎರಡು ಬೌನ್ಸರ್‌ಗಳನ್ನು ಎಸೆಯಲು ಅನುಮತಿಸಲಾಗಿದೆ. ಈ ಹಿಂದೆ ಓವರ್​ಗೆ ಕೇವಲ ಒಂದು ಬೌನ್ಸರ್ ಎಸೆಯಲು ಮಾತ್ರ ಅನುಮತಿ ಇತ್ತು. ಒಂದು ವೇಳೆ ಬೌಲರ್ ಅದೇ ಓವರ್​ನಲ್ಲಿ ಇನ್ನೊಂದು ಬೌನ್ಸರ್ ಎಸೆದರೆ ಅದನ್ನು ನೋ ಬಾಲ್ ಎಂದು ತೀರ್ಮಾನಿಸಲಾಗುತ್ತಿತ್ತು.

5. ಎರಡು ಹಂತಗಳಲ್ಲಿ ದೇಶದ ಸ್ಟೇಡಿಯಂಗಳ ಉನ್ನತೀಕರಣ

ಐದನೇ ನಿರ್ಣಯವಾಗಿ ಬಿಸಿಸಿಐ ಮುಂಬರುವ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ದೇಶದ ಕ್ರಿಕೆಟ್ ಕ್ರೀಡಾಂಗಣಗಳನ್ನು ಎರಡು ಹಂತಗಳಲ್ಲಿ ಉನ್ನತೀಕರಣಗೊಳಿಸಲು ಮುಂದಾಗಿದೆ.​

(ಎ) ಮೊದಲ ಹಂತದಲ್ಲಿ ಏಕದಿನ ವಿಶ್ವಕಪ್​ಗೆ ಆತಿಥ್ಯವಹಿಸುವ ಕ್ರೀಡಾಂಗಣಗಳನ್ನು ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ. ಈ ಕಾರ್ಯವನ್ನು ವಿಶ್ವಕಪ್ ಪ್ರಾರಂಭವಾಗುವ ಮೊದಲು ಪೂರ್ಣಗೊಳಿಸಲಾಗುತ್ತದೆ.

(ಬಿ) ಹಾಗೆಯೇ ಎರಡನೇ ಹಂತದಲ್ಲಿ ಉಳಿದ ಕ್ರಿಕೆಟ್ ಮೈದಾನಗಳನ್ನು ಉನ್ನತೀಕರಣಗೊಳಿಸಲಾಗತ್ತದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:37 pm, Sat, 8 July 23