ಅದ್ಭುತ ಫಾರ್ಮ್ನಲ್ಲಿದ್ದ ಕುಲ್ದೀಪ್ರನ್ನು ತಂಡದಿಂದ ಕೈ ಬಿಟ್ಟಿದ್ಯಾಕೆ? ಬಿಸಿಸಿಐ ನೀಡಿದ ಸ್ಪಷ್ಟನೆ ಏನು?
India vs West Indies: ವಿಂಡೀಸ್ ವಿರುದ್ಧದ ವೈಟ್ ಬಾಲ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಗಾಯಗೊಂಡಿದ್ದು, ಅವರನ್ನು ಎರಡನೇ ಟಿ20 ಪಂದ್ಯದಲ್ಲಿ ಹೊರಗಿಡಲಾಗಿತ್ತು.
ಪ್ರಮುಖ ಆಟಗಾರರ ಇಂಜುರಿ ಸಮಸ್ಯೆಯಿಂದ ಐಸಿಸಿ (ICC) ಈವೆಂಟ್ಗಳನ್ನು ಗೆದ್ದುಕೊಳ್ಳುವಲ್ಲಿ ಸತತವಾಗಿ ವೈಫಲ್ಯ ಕಾಣುತ್ತಿರುವ ಟೀಂ ಇಂಡಿಯಾಕ್ಕೆ ಏಷ್ಯಾಕಪ್ (Asia Cup) ಹಾಗೂ ವಿಶ್ವಕಪ್ (ODI World Cup) ಸಮೀಪಿಸುತ್ತಿದ್ದಂತೆ, ಗಾಯಗೊಂಡ ಆಟಗಾರರ ಚೇತರಿಕೆಯ ಸುದ್ದಿ ಕೊಂಚ ಸಮಾಧಾನ ತಂದಿತ್ತು. ಪ್ರಮುಖ ಆಟಗಾರರಾದ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಜಸ್ಪ್ರೀತ್ ಬುಮ್ರಾ ಹಾಗೂ ಪ್ರಸಿದ್ಧ್ ಕೃಷ್ಣ ತಮ್ಮ ತಮ್ಮ ಇಂಜುರಿಗಳಿಂದ ಚೇತರಿಸಿಕೊಂಡಿದ್ದು, ಒಬ್ಬೋಬ್ಬರಾಗಿ ಟೀಂ ಇಂಡಿಯಾವನ್ನು (Team India) ಸೇರಿಕೊಳ್ಳುತ್ತಿದ್ದಾರೆ. ಪ್ರಮುಖ ಐಸಿಸಿ ಈವೆಂಟ್ಗೂ ಮುನ್ನ ಈ ಸುದ್ದಿ ಟೀಂ ಇಂಡಿಯಾಗೆ ಕೊಂಚ ನೆಮ್ಮದಿ ತಂದಿತ್ತು. ಆದರೆ ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾಕ್ಕೆ (India vs West Indies) ಮತ್ತೆ ಗಾಯದ ಸಮಸ್ಯೆ ಕಾಡಲಾರಂಭಿಸಿದೆ. ವಿಂಡೀಸ್ ವಿರುದ್ಧದ ವೈಟ್ ಬಾಲ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ (Kuldeep Yadav) ಗಾಯಗೊಂಡಿದ್ದು, ಅವರನ್ನು ಎರಡನೇ ಟಿ20 ಪಂದ್ಯದಲ್ಲಿ ಹೊರಗಿಡಲಾಗಿತ್ತು.
ವಾಸ್ತವವಾಗಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಕುಲ್ದೀಪ್ ಯಾದವ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಈ ಪ್ರವಾಸದಲ್ಲಿ ಆಡಿರುವ 4 ಪಂದ್ಯಗಳಲ್ಲಿ ಒಟ್ಟು 8 ವಿಕೆಟ್ ಪಡೆದಿರುವ ಕುಲ್ದೀಪ್ 3 ಪಂದ್ಯಗಳ ಏಕದಿನ ಸರಣಿಯಲ್ಲಿ 7 ವಿಕೆಟ್ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಒಂದು ವಿಕೆಟ್ ಪಡೆದಿದ್ದರು. ಹೀಗಾಗಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದರೂ ಕುಲ್ದೀಪ್ ಅವರನ್ನು ಎರಡನೇ ಟಿ20 ಪಂದ್ಯದಿಂದ ಹೊರಗಿಡಲಾಗಿತ್ತು. ಹೀಗಾಗಿ ಆಯ್ಕೆ ಮಂಡಳಿಯ ನಡೆಗೆ ಆಕ್ರೋಶ ವ್ಯಕ್ತವಾಗಿತ್ತು.
IND vs WI: 3 ಓವರ್, 4 ವಿಕೆಟ್; ವಿಂಡೀಸ್ ನೆಲದಲ್ಲಿ ಇತಿಹಾಸ ಸೃಷ್ಟಿಸಿದ ಕುಲ್ದೀಪ್ ಯಾದವ್
ಕುಲ್ದೀಪ್ ಕೈಗೆ ಪೆಟ್ಟು
ಆ ಬಳಿಕ ಕುಲ್ದೀಪ್ ಯಾದವ್ ತಂಡಕ್ಕೆ ಆಯ್ಕೆಯಾಗದಿರುವ ಬಗ್ಗೆ ಮಾಹಿತಿ ನೀಡಿದ ಬಿಸಿಸಿಐ, ಹಾಗೂ ನಾಯಕ ಹಾರ್ದಿಕ್ ಪಾಂಡ್ಯ, ನೆಟ್ಸ್‌ನಲ್ಲಿ ನಿನ್ನೆ ಕುಲ್ದೀಪ್ ಕೈಗೆ ಪೆಟ್ಟು ಬಿದ್ದಿದ್ದು, ಅವರ ಬದಲಿಗೆ ರವಿ ಬಿಷ್ಣೋಯ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಗಾಯ ಗಂಭೀರವಾಗಿಲ್ಲದಿದ್ದರೂ, ಮುನ್ನೆಚ್ಚರಿಕೆ ಕ್ರಮವಾಗಿ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದರು.
UPDATE: Kuldeep Yadav got hit while batting in the nets and was unavailable for selection for the 2nd T20I due to a sore left thumb.#WIvIND
— BCCI (@BCCI) August 6, 2023
ಕುಲ್ದೀಪ್ ಉಪಸ್ಥಿತಿ ಭಾರತಕ್ಕೆ ಅವಶ್ಯಕ
ಸದ್ಯ ಗಾಯ ಗಂಭೀರವಾಗಿಲ್ಲ ಎಂಬ ನಾಯಕನ ಹೇಳಿಕೆ ಟೀಂ ಇಂಡಿಯಾ ಅಭಿಮಾನಿಗಳಿಗೆ ಕೊಂಚ ಸಮಾಧಾನ ತಂದಿದೆ. ಏಕೆಂದರೆ, ಏಷ್ಯಾಕಪ್ ಹಾಗೂ ವಿಶ್ವಕಪ್ ದೃಷ್ಟಿಯಿಂದ ಕುಲ್ದೀಪ್ ಯಾದವ್ ಟೀಂ ಇಂಡಿಯಾದಲ್ಲಿ ಇರುವುದು ಬಹಳ ಮುಖ್ಯವಾಗಿದೆ. ಟೀಂ ಇಂಡಿಯಾದ ಸ್ಪಿನ್ ವಿಭಾಗದಲ್ಲಿ ಅದ್ಭುತ ಫಾರ್ಮ್ನಲ್ಲಿರುವ ಕುಲ್ದೀಪ್ ಉಪಸ್ಥಿತಿ ಭಾರತಕ್ಕೆ ಅವಶ್ಯಕವಾಗಿ ಬೇಕಾಗಿದೆ. ಅಲ್ಲದೆ ಈ ಬಾರಿಯ ಏಕದಿನ ವಿಶ್ವಕಪ್ ಭಾರತದಲ್ಲೇ ನಡೆಯುತ್ತಿರುವುದರಿಂದ ಭಾರತದ ಪಿಚ್ಗಳು ಸ್ಪಿನ್ನರ್ಗಳಿಗೆ ಎಷ್ಟು ಸಹಕಾರಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಹೀಗಾಗಿ ಕುಲ್ದೀಪ್ ಬೇಗ ಚೇತರಿಸಿಕೊಂಡು ತಂಡ ಸೇರಿಕೊಳ್ಳಬೇಕಿದೆ.
ಇನ್ನು ಎರಡನೇ ಟಿ20 ಪಂದ್ಯದಲ್ಲಿ ಮತ್ತೊಂದು ಸೋಲು ಕಂಡಿರುವ ಟೀಂ ಇಂಡಿಯಾ 5 ಪಂದ್ಯಗಳ ಟಿ20 ಸರಣಿಯಲ್ಲಿ 2-0 ಅಂತರದಿಂದ ಹಿನ್ನಡೆ ಕಾಯ್ದುಕೊಂಡಿದೆ. ಅಲ್ಲದೆ ಕುಲ್ದೀಪ್ ಬದಲು ತಂಡದಲ್ಲಿ ಸ್ಥಾನ ಪಡೆದಿದ್ದ ರವಿ ಬಿಷ್ಣೋಯಿ ಎರಡನೇ ಟಿ20 ಪಂದ್ಯದಲ್ಲಿ ಯಾವುದೇ ಪ್ರಭಾವ ಬೀರಲಿಲ್ಲ. ತಮ್ಮ ಖೋಟಾದ 4 ಓವರ್ ಬೌಲ್ ಮಾಡಿ ಯಾವುದೇ ವಿಕೆಟ್ ಪಡೆಯದೆ 31 ರನ್ ಬಿಟ್ಟುಕೊಟ್ಟರು. ಹೀಗಾಗಿ ಕುಲ್ದೀಪ್ ಆದಷ್ಟು ಬೇಗ ತಂಡ ಸೇರಿಕೊಂಡರೆ, ಟೀಂ ಇಂಡಿಯಾದ ಸ್ಪಿನ್ ವಿಭಾಗ ಬಲಿಷ್ಠಗೊಳ್ಳಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:40 am, Mon, 7 August 23