
2025 ರ ಏಷ್ಯಾಕಪ್ (Asia Cup 2025) ಸಮಯದಲ್ಲಿ ಭುಗಿಲೆದ್ದ ವಿವಾದ ಸಧ್ಯಕ್ಕೆ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಚಾಂಪಿಯನ್ ಭಾರತ ತಂಡಕ್ಕೆ ಟ್ರೋಫಿ ಹಾಗೂ ಪದಕಗಳನ್ನು ಕೊಡದೆ ಮೊಂಡುತನ ಪ್ರದರ್ಶಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮತ್ತು ಏಷ್ಯನ್ ಕ್ರಿಕೆಟ್ ಮಂಡಳಿ (ACC) ಅಧ್ಯಕ್ಷ ಮೊಹ್ಸಿನ್ ನಖ್ವಿ (Mohsin Naqvi) ವಿರುದ್ಧ ಬಿಸಿಸಿಐ ಈಗ ಕಠಿಣ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ. ಒಂದು ವೇಳೆ ಬಿಸಿಸಿಐನ (BCCI) ಈ ನಡೆ ನಿಜವಾದರೆ ಮೊಹ್ಸಿನ್ ನಖ್ವಿ ಕೆಲವೇ ದಿನಗಳಲ್ಲಿ ಎಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕಾಗುತ್ತದೆ.
ಪಂದ್ಯಾವಳಿ ಮುಗಿದು ವಾರವಾಗುತ್ತಾ ಬಂದರೂ ಏಷ್ಯಾಕಪ್ ಟ್ರೋಫಿಗೆ ಸಂಬಂಧಿಸಿದ ವಿವಾದ ಇನ್ನು ತಣ್ಣಗಾಗಿಲ್ಲ. ಕ್ಷಣ ಕ್ಷಣಕ್ಕೂ ತನ್ನ ಹೇಳಿಕೆಗಳನ್ನು ಹಾಗೂ ನಿಲುವುನ್ನು ಬದಲಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಬಿಸಿಸಿಐ ತಯಾರಿ ನಡೆಸುತ್ತಿದೆ ಎಂದು ವರದಿಯಾಗಿದೆ
ಟ್ರೋಫಿ ವಿಷಯದ ಬಗ್ಗೆ ಎಸಿಸಿ ಇತ್ತೀಚೆಗೆ ಸಭೆ ನಡೆಸಿತು. ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಟ್ರೋಫಿಯನ್ನು ನೇರವಾಗಿ ಭಾರತಕ್ಕೆ ಹಸ್ತಾಂತರಿಸಬೇಕೆಂದು ಒತ್ತಾಯಿಸಿದ್ದಾರೆ ಎಂದು ವರದಿಯಾಗಿತ್ತು. ಆದಾಗ್ಯೂ, ನಖ್ವಿ ಟ್ರೋಫಿಯನ್ನು ಹಸ್ತಾಂತರಿಸಲು ನಿರಾಕರಿಸಿದ್ದು, ಟ್ರೋಫಿ ಬೇಕೆಂದರೆ ಟೀಂ ಇಂಡಿಯಾ ಸೂರ್ಯಕುಮಾರ್ ಯಾದವ್ ನನ್ನ ಬಳಿಗೆ ಬಂದು ತೆಗೆದುಕೊಂಡು ಹೋಗಲಿ ಎಂದಿದ್ದಾರೆ ಎಂದು ವರದಿಯಾಗಿತ್ತು. ಮತ್ತೊಂದು ಸುದ್ದಿಯ ಪ್ರಕಾರ, ನಖ್ವಿ ಏಷ್ಯಾಕಪ್ ಟ್ರೋಫಿಯನ್ನು ಯುಎಇ ಕ್ರಿಕೆಟ್ ಮಂಡಳಿಗೆ ಹಸ್ತಾಂತರಿಸಿದ್ದು, ಅದು ಭಾರತದ ಕೈಸೇರಲಿದೆ ಎಂದು ಹೇಳಲಾಗಿತ್ತು. ಆದರೆ ಅದ್ಯಾವುದು ಇಲ್ಲಿಯವರೆಗೆ ನಿಜವಾಗಿಲ್ಲ.
‘ನಾನು ದುಃಖಿತನಾಗಿದ್ದೇನೆ’; ಏಷ್ಯಾಕಪ್ ಟ್ರೋಫಿ ವಿವಾದದ ಬಗ್ಗೆ ಡಿವಿಲಿಯರ್ಸ್ ಮಾತು
ಪಾಕಿಸ್ತಾನದ ಸುದ್ದಿ ಸಂಸ್ಥೆ ‘ದಿ ಒಪಿನಿಯನ್’ ವರದಿಗಳ ಪ್ರಕಾರ, ಮೊಹ್ಸಿನ್ ನಖ್ವಿ ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ ಕೋರಿ ಅವಿಶ್ವಾಸ ನಿರ್ಣಯ ಮಂಡಿಸಲು ಬಿಸಿಸಿಐ ಈಗ ಸದಸ್ಯ ಮಂಡಳಿಗಳಿಂದ ಬೆಂಬಲವನ್ನು ಸಂಗ್ರಹಿಸುತ್ತಿದೆ. ಅದರಂತೆ ಶ್ರೀಲಂಕಾ, ಭಾರತವನ್ನು ಬೆಂಬಲಿಸುತ್ತಿದೆ ಎಂದು ಹೇಳಲಾಗುತ್ತಿದ್ದರೆ, ಬಾಂಗ್ಲಾದೇಶ ಪಾಕಿಸ್ತಾನದ ಪರವಾಗಿ ನಿಂತಿದೆ ಎಂದು ವರದಿ ಮಾಡಿದೆ. ಹೀಗಾಗಿ ಎಸಿಸಿಯಲ್ಲಿ ಯಾರದ್ದು ಮೇಲುಗೈ ಆಗುತ್ತದೆ ಎಂಬುದು ಅಫ್ಘಾನಿಸ್ತಾನದ ನಿಲುವು ಯಾರ ಪರ ಇರಲಿದೆ ಎಂಬುದರ ಮೇಲೆ ನಿಂತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:01 pm, Fri, 3 October 25