ಮುಂದಿನ ವರ್ಷ ಮಾರ್ಚ್ 2023 ರಿಂದ ಪ್ರಾರಂಭವಾಗಲಿರುವ ಮಹಿಳೆಯರ ಇಂಡಿಯನ್ ಪ್ರೀಮಿಯರ್ ಲೀಗ್ (Womens IPL) ಬಗ್ಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಚೊಚ್ಚಲ ಸೀಸನ್‌ನಲ್ಲಿ ಬಿಸಿಸಿಐ (BCCI) ಒಟ್ಟು ಐದು ಫ್ರಾಂಚೈಸಿಗಳ ಖರೀದಿಗೆ ಬರೋಬ್ಬರಿ 400 ಕೋಟಿ ರೂಪಾಯಿ ಮೂಲಬೆಲೆ ನಿಗದಿ ಪಡಿಸಿದೆ ಎಂದು ಹೇಳಲಾಗಿದೆ. ಇದುವರೆಗೆ ಐಪಿಎಲ್ನಲ್ಲಿ ಅತಿ ದೊಡ್ಡ ಮೊತ್ತಕ್ಕೆ ಸೇಲ್ ಆದ ಪ್ರಾಂಚೈಸಿ ಎಂದರೆ ಅದು ಮುಂಬೈ ಇಂಡಿಯನ್ಸ್ (Mumbai Indians). 2007-08ರಲ್ಲಿ ಎಂಐ USD 111.9m, ಅಂದರೆ ಸುಮಾರು 446 ಕೋಟಿ ರೂಪಾಯಿಗೆ ಸೇಲ್ ಆಗಿತ್ತು. ಟೆಂಡರ್ ಡಾಕ್ಯುಮೆಂಟ್ ಪ್ರಕ್ರಿಯ ಮುಗಿದ ನಂತರ ಈ ಬಗ್ಗೆ ಖಚಿತ ಮಾಹಿತಿ ಹೊರಬೀಳಲಿದೆ.
ಪುರುಷರ ಐಪಿಎಲ್ ಯಶಸ್ಸಿನ ಹಿನ್ನೆಲೆಯಲ್ಲಿ ಮಹಿಳಾ ಐಪಿಎಲ್ನಲ್ಲೂ ದೊಡ್ಡ ಮೊತ್ತದ ಮೇಲೆ ಬಿಸಿಸಿಐ ಕಣ್ಣಿಟ್ಟಿದೆ. 5 ಫ್ರಾಂಚೈಸಿಗಳ ಟೆಂಡರ್ ಆಹ್ವಾನಿಸಲು ಬಿಸಿಸಿಐ 400 ಕೋಟಿ ರೂ. ನಿಗದಿಪಡಿಸಿದ್ದು ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ದಾಖಲೆ ಎನ್ನಬಹುದು. ಈ ಬಗ್ಗೆ ಐಪಿಎಲ್ ಆಡಳಿತ ಮಂಡಳಿ ಕೂಡ ಅನುಮೋದನೆ ನೀಡಿದೆ ಎನ್ನಲಾಗಿದೆ. ಅಂತೆಯೆ ಫ್ರಾಂಚೈಸ್ ಅನ್ನು 1000 ಮತ್ತು 1500 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಆಗಬಹುದೆಂದು ಬಿಸಿಸಿಐ ಯೋಚಿಸಿದೆಯಂತೆ. ಒಟ್ಟಾರೆಯಾಗಿ ಬಿಸಿಸಿಐ ಈ ಐದು ಫ್ರಾಂಚೈಸಿಗಳ ಮಾರಾಟದಿಂದ 6,000 ದಿಂದ 8000 ಕೋಟಿ (ಒಂದು ಬಿಲಿಯನ್ ಡಾಲರ್ ವ್ಯಾಪ್ತಿಯಲ್ಲಿ) ಸಂಗ್ರಹಿಸಲು ನೋಡುತ್ತಿದೆ.
India Playing XI vs NZ 3rd ODI: ಮೂರನೇ ಏಕದಿನದಿಂದಲೂ ಸಂಜು ಔಟ್: ಇಲ್ಲಿದೆ ನೋಡಿ ಭಾರತದ ಸಂಭಾವ್ಯ ಪ್ಲೇಯಿಂಗ್ XI
ಮಹಿಳಾ ಐಪಿಎಲ್ ಚೊಚ್ಚಲ ಸೀಸನ್‌ನಲ್ಲಿ ಒಟ್ಟು 20 ಪಂದ್ಯಗಳು ನಡೆಯಲಿವೆ. ಪ್ರತಿ ತಂಡವು ಇತರ ತಂಡಗಳ ವಿರುದ್ಧ ಎರಡು ಪಂದ್ಯಗಳನ್ನು ಆಡಬೇಕಾಗುತ್ತದೆ. ಪುರುಷೆ ಐಪಿಎಲ್ನಂತೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡ ನೇರವಾಗಿ ಫೈನಲ್‌ಗೆ ಲಗ್ಗೆ ಇಟ್ಟರೆ ಎರಡು ಮತ್ತು ಮೂರನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್ ಪಂದ್ಯದ ಮೂಲಕ ಎರಡನೇ ಫೈನಲಿಸ್ಟ್ ಅನ್ನು ನಿರ್ಧರಿಸುತ್ತವೆ. ಪ್ರತಿ ಫ್ರಾಂಚೈಸಿ ತನ್ನ ಅಂತಿಮ ತಂಡದಲ್ಲಿ ಐದಕ್ಕಿಂತ ಹೆಚ್ಚು ವಿದೇಶಿ ಆಟಗಾರರನ್ನು ಹೊಂದಿರಬಾರದು.
ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, ”ತಂಡದಲ್ಲಿ ದೇಶಿ ಹಾಗೂ ವಿದೇಶಿ ಕ್ರಿಕೆಟಿಗರ ಸಮಬಲ ಇರಬೇಕು. ಐದು ತಂಡಗಳೊಂದಿಗೆ ಮಹಿಳೆಯರನ್ನು ಸಂಘಟಿಸಲು ಯೋಜನೆ ಸಿದ್ಧಪಡಿಸಿದ್ದೇವೆ. ಪ್ರತಿ ತಂಡವು 18 ಆಟಗಾರರನ್ನು ಹೊಂದಿರಬೇಕು ಎಂಬ ನಿಯಮ ಮಾಡಲಾಗಿದೆ. ಅದರಲ್ಲಿ ಆರಕ್ಕಿಂತ ಹೆಚ್ಚು ವಿದೇಶಿ ಕ್ರಿಕೆಟಿಗರು ಇರಬಾರದು. ಅಲ್ಲದೆ, ಅಂತಿಮ ತಂಡದಲ್ಲಿ ಐದಕ್ಕಿಂತ ಹೆಚ್ಚು ವಿದೇಶಿ ಆಟಗಾರರು ಇರಬಾರದು. ಅವರಲ್ಲಿ ನಾಲ್ವರು ಐಸಿಸಿ ಸದಸ್ಯತ್ವದ ದೇಶಗಳಿಗೆ ಸೇರಿದವರು, ಇನ್ನೊಬ್ಬರು ಸಹಾಯಕ ಸದಸ್ಯರಾಗಿರಬಹುದು,” ಎಂದು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಫೆಬ್ರವರಿ 9 ರಿಂದ 26ರವರೆಗೆ ನಡೆಯಲಿರುವ ಟಿ20 ವಿಶ್ವಕಪ್ ಬಳಿಕ ಮಹಿಳಾ ಐಪಿಎಲ್ ಆಯೋಜಿಸಲು ಬಿಸಿಸಿಐ ಮುಂದಾಗಿದೆ. ಬಿಸಿಸಿಐ ಮೊದಲ ಆವೃತ್ತಿಯಲ್ಲಿ 10 ಪಂದ್ಯಗಳನ್ನು ಒಂದು ಸ್ಥಳದಲ್ಲಿ ಮತ್ತು ಉಳಿದ 10 ಪಂದ್ಯಗಳನ್ನು ಮತ್ತೊಂದು ಸ್ಥಳದಲ್ಲಿ ನಡೆಸುವ ಬಗ್ಗೆ ಯೋಜನೆ ತಯಾರಾಗಿದೆಯಂತೆ. ಐಪಿಎಲ್ ಮಹಿಳಾ ಫ್ರಾಂಚೈಸಿಗಳನ್ನು ಸಮಯ ಬಂದಾಗ ತಂಡಗಳ ಹರಾಜು ಪ್ರಕ್ರಿಯೆಯನ್ನೂ ಪ್ರಕಟಿಸಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ತಾನ್ ರಾಯಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಮಹಿಳಾ ಐಪಿಎಲ್ ತಂಡ ಖರೀದಿಗೆ ಮುಂದಾಗಿದೆ ಎಂಬ ಮಾತುಗಳಿವೆ.
Rishabh Pant: ಇಷ್ಟೆಲ್ಲಾ ಫ್ಲಾಪ್ ಆದ್ಮೇಲಾದ್ರೂ ಪಂತ್ಗೆ ಒಂದು ಸಣ್ಣ ಬ್ರೇಕ್ ನೀಡಿ: ಕ್ರಿಸ್ ಶ್ರೀಕಾಂತ್
ಡಿಸೆಂಬರ್ 23 ಪುರುಷರ ಐಪಿಎಲ್ ಹರಾಜು:
16ನೇ ಆವೃತ್ತಿಯ ಪುರುಷರ ಐಪಿಎಲ್ಗಾಗಿ ಬಿಸಿಸಿಐ ಸಿದ್ಧತೆಗಳನ್ನು ಈಗಾಗಲೇ ಆರಂಭಿಸಿದೆ. ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ಮಿನಿ ಹರಾಜು ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಆದರೆ ಇದಕ್ಕೆ ಹಲವು ಫ್ರಾಂಚೈಸಿಗಳು ದಿನಾಂಕವನ್ನು ಬದಲಿಸುವಂತೆ ಬಿಸಿಸಿಐ ಮುಂದೆ ಮನವಿ ಇಟ್ಟಿದ್ದವು. ಆದರೆ, ಈ ಮನವಿಯನ್ನು ತಿರಸ್ಕರಿಸಿರುವ ಬಿಸಿಸಿಐ ನಿಗದಿಯಂತೆ ಮಿನಿ ಹರಾಜು ನಡೆಸಲಿದೆ. ಕ್ರಿಸ್ಮಸ್ ಆಚರಣೆ ಇರುವ ಕಾರಣ ಕೆಲವು ದಿನಗಳ ಹಿಂದೆ ಐಪಿಎಲ್ ಮಿನಿ ಹರಾಜಿನ ದಿನಾಂಕವನ್ನು ಬದಲಾಯಿಸುವಂತೆ ಕೆಲವು ಫ್ರಾಂಚೈಸಿಗಳು ಬಿಸಿಸಿಐ ಮುಂದೆ ವಿನಂತಿಸಿಕೊಂಡಿದ್ದವು. ಅದರಂತೆ ಬಿಸಿಸಿಐ ಕೂಡ ಡಿಸೆಂಬರ್ 23ರ ಬದಲು ಬೇರೆ ದಿನದಂದು ಮಿನಿ ಹರಾಜನ್ನು ನಡೆಸುವ ಸಾಧ್ಯತೆಗಳಿವೆ ಎಂದು ವರದಿಯಾಗಿತ್ತು. ಆದರೀಗ ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು ಇನ್‌ಸೈಡ್‌ಸ್ಪೋರ್ಟ್‌ಗೆ ಮಾಹಿತಿ ನೀಡಿದ್ದು, ‘ವ್ಯವಸ್ಥಾಪನಾ ಸಮಸ್ಯೆಗಳ’ ಕಾರಣ ಮಂಡಳಿಯು ಫ್ರಾಂಚೈಸಿಗಳ ವಿನಂತಿಯನ್ನು ತಿರಸ್ಕರಿಸಿದೆ. ಹಾಗಾಗಿ ಸದ್ಯ ಹರಾಜು ನಿಗದಿಯಂತೆಯೇ ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿದೆ ಎಂದಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:40 pm, Tue, 29 November 22