IPL 2023 Auction Date: ಫ್ರಾಂಚೈಸಿಗಳ ಮನವಿ ತಿರಸ್ಕಾರ; ನಿಗದಿಯಂತೆ ನಡೆಯಲಿದೆ ಐಪಿಎಲ್ ಮಿನಿ ಹರಾಜು
IPL 2023 Auction Date: ಕ್ರಿಸ್ಮಸ್ ಆಚರಣೆ ಇರುವ ಕಾರಣ ಕೆಲವು ದಿನಗಳ ಹಿಂದೆ ಐಪಿಎಲ್ ಮಿನಿ ಹರಾಜಿನ ದಿನಾಂಕವನ್ನು ಬದಲಾಯಿಸುವಂತೆ ಕೆಲವು ಫ್ರಾಂಚೈಸಿಗಳು ಬಿಸಿಸಿಐ ಮುಂದೆ ವಿನಂತಿಸಿಕೊಂಡಿದ್ದವು.
16ನೇ ಆವೃತ್ತಿಯ ಐಪಿಎಲ್ಗಾಗಿ (IPL) ಬಿಸಿಸಿಐ (BCCI) ತನ್ನ ಸಿದ್ಧತೆಗಳನ್ನು ಈಗಾಗಲೇ ಆರಂಭಿಸಿದೆ. ಈ ಮೊದಲು ಟ್ರೇಡಿಂಗ್ ಮಾಡಿಕೊಳ್ಳಲು ನವೆಂಬರ್15ರವರೆಗೆ ಎಲ್ಲಾ ಫ್ರಾಂಚೈಸಿಗಳಿಗೆ ಬಿಸಿಸಿಐ ಗಡುವು ನೀಡಿತ್ತು. ಬಿಸಿಸಿಐ ಸೂಚನೆಯ ಪ್ರಕಾರ ಎಲ್ಲಾ ತಂಡಗಳು ಕೂಡ ತಮ್ಮಲ್ಲಿ ಉಳಿಸಿಕೊಂಡ ಆಟಗಾರರು ಹಾಗೂ ಬಿಡುಗಡೆಗೊಳಿಸಿದ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಿತ್ತು. ಆ ಬಳಿಕ ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ಮಿನಿ ಹರಾಜು (Mini Auction) ನಡೆಸಲು ಬಿಸಿಸಿಐ ತೀರ್ಮಾನಿಸಿತ್ತು. ಆದರೆ ಹಲವು ಫ್ರಾಂಚೈಸಿಗಳು ಮಿನಿ ಹರಾಜಿನ ದಿನಾಂಕವನ್ನು ಬದಲಿಸುವಂತೆ ಬಿಸಿಸಿಐ ಮುಂದೆ ಮನವಿ ಇಟ್ಟಿದ್ದವು. ಆದರೀಗ ಈ ಮನವಿಯನ್ನು ತಿರಸ್ಕರಿಸಿರುವ ಬಿಸಿಸಿಐ ನಿಗದಿಯಂತೆ ಮಿನಿ ಹರಾಜು ನಡೆಸಲಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಕ್ರಿಸ್ಮಸ್ ಆಚರಣೆ ಇರುವ ಕಾರಣ ಕೆಲವು ದಿನಗಳ ಹಿಂದೆ ಐಪಿಎಲ್ ಮಿನಿ ಹರಾಜಿನ ದಿನಾಂಕವನ್ನು ಬದಲಾಯಿಸುವಂತೆ ಕೆಲವು ಫ್ರಾಂಚೈಸಿಗಳು ಬಿಸಿಸಿಐ ಮುಂದೆ ವಿನಂತಿಸಿಕೊಂಡಿದ್ದವು. ಅದರಂತೆ ಬಿಸಿಸಿಐ ಕೂಡ ಡಿಸೆಂಬರ್ 23ರ ಬದಲು ಬೇರೆ ದಿನದಂದು ಮಿನಿ ಹರಾಜನ್ನು ನಡೆಸುವ ಸಾಧ್ಯತೆಗಳಿವೆ ಎಂದು ವರದಿಯಾಗಿತ್ತು. ಆದರೀಗ ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು ಇನ್‌ಸೈಡ್‌ಸ್ಪೋರ್ಟ್‌ಗೆ ಮಾಹಿತಿ ನೀಡಿದ್ದು, ‘ವ್ಯವಸ್ಥಾಪನಾ ಸಮಸ್ಯೆಗಳ’ ಕಾರಣ ಮಂಡಳಿಯು ಫ್ರಾಂಚೈಸಿಗಳ ವಿನಂತಿಯನ್ನು ತಿರಸ್ಕರಿಸಿದೆ. ಹಾಗಾಗಿ ಸದ್ಯ ಹರಾಜು ನಿಗದಿಯಂತೆಯೇ ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿದೆ ಎಂದಿದ್ದಾರೆ.
ದಿನಾಂಕ ಬದಲಾವಣೆ ವಿನಂತಿಗೆ ಕಾರಣವೇನು?
ಡಿಸೆಂಬರ್ 25 ರಂದು ಅಂದರೆ ಮಿನಿ ಹರಾಜು ನಡೆಯುವ ಎರಡು ದಿನಗಳ ನಂತರ ಕ್ರಿಸ್ಮಸ್ ಹಬ್ಬವಿದೆ. ಹೀಗಾಗಿ ಕೆಲವು ಫ್ರಾಂಚೈಸಿಗಳ ಸದಸ್ಯರು ಕ್ರಿಸ್ಮಸ್ ಪ್ರಯುಕ್ತ ಕುಟುಂಬದೊಂದಿಗೆ ಪ್ರವಾಸದ ಯೋಜನೆ ಹಾಕಿಕೊಂಡಿದ್ದರು. ಇನ್ನೂ ಕೆಲವು ಫ್ರಾಂಚೈಸಿಗಳ ಸದಸ್ಯರು ಕುಟುಂಬದೊಂದಿಗೆ ಸೇರಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಸಲುವಾಗಿ ಈಗ ನಿಗದಿ ಮಾಡಿರುವ ದಿನಾಂಕವನ್ನು ಬದಲಿಸಬೇಕೆಂದು ಬಿಸಿಸಿಐ ಮುಂದೆ ಮನವಿ ಇಟ್ಟಿದ್ದವು.
ವಿದೇಶಿ ಕೋಚ್ಗಳ ಸಲುವಾಗಿ ಈ ನಿರ್ಧಾರ
ಹರಾಜು ದಿನಾಂಕವನ್ನು ಬದಲಾಯಿಸಲು ಫ್ರಾಂಚೈಸಿಗಳು ಮನವಿ ಮಾಡಲು ಮುಖ್ಯ ಕಾರಣವೆಂದರೆ, ಐಪಿಎಲ್ನಲ್ಲಿರುವ 10 ತಂಡಗಳಲ್ಲಿ, ಏಳು ತಂಡಗಳು ವಿದೇಶಿ ಮುಖ್ಯ ಕೋಚ್‌ಗಳನ್ನು ಹೊಂದಿವೆ. ಹೀಗಾಗಿ ಕ್ರಿಸ್ಮಸ್ ಇರುವುದರಿಂದ ಈ 7 ತಂಡದ ಮುಖ್ಯ ಕೋಚ್ಗಳು ಮಿನಿ ಹರಾಜಿಗೆ ಪಾಲ್ಗೊಳ್ಳುವುದು ಕಷ್ಟಸಾಧ್ಯ ಒಂದು ವೇಳೆ ಈ ಕೋಚ್ಗಳು ಗೈರಾದರೆ ಫ್ರಾಂಚೈಸಿಗಳಿಗೆ ಮುಂಬರುವ ಈವೆಂಟ್‌ಗಾಗಿ ಯೋಜನೆ ರೂಪಿಸಲು ಕಷ್ಟಕರವಾಗುತ್ತದೆ. ಇದರೊಂದಿಗೆ ಮುಖ್ಯ ಕೋಚ್ ಜೊತೆಗೆ ಬ್ಯಾಟಿಂಗ್ ಕೋಚ್ಗಳಾಗಿ, ಡೇಟಾ ವಿಶ್ಲೇಷಕರಾಗಿ ಹಲವು ವಿದೇಶಿಗರು ಈ ಫ್ರಾಂಚೈಸಿಗಳಲಿದ್ದಾರೆ. ಹೀಗಾಗಿ ಕೆಲವು ಫ್ರಾಂಚೈಸಿಗಳು ಮಿನಿ ಹರಾಜಿನ ದಿನಾಂಕವನ್ನು ಬದಲಿಸುವಂತೆ ಬಿಸಿಸಿಐ ಮುಂದೆ ಮನವಿ ಇಟ್ಟಿದ್ದವು.
ಯಾವ್ಯಾವ ತಂಡ ಎಷ್ಟು ವಿದೇಶಿ ಸ್ಟಾಫ್ಗಳನ್ನು ಹೊಂದಿದೆ?
ಮುಂಬೈ ಇಂಡಿಯನ್ಸ್: ಮಾರ್ಕ್ ಬೌಚರ್ (ಮುಖ್ಯ ಕೋಚ್), ಕೀರಾನ್ ಪೊಲಾರ್ಡ್ (ಬ್ಯಾಟಿಂಗ್ ಕೋಚ್), ಶೇನ್ ಬಾಂಡ್ (ಬೌಲಿಂಗ್ ಕೋಚ್), ಜೇಮ್ಸ್ ಪಾಮ್ಮೆಂಟ್ (ಫೀಲ್ಡಿಂಗ್ ಕೋಚ್)
ಚೆನ್ನೈ ಸೂಪರ್ ಕಿಂಗ್ಸ್: ಸ್ಟೀಫನ್ ಫ್ಲೆಮಿಂಗ್ (ಮುಖ್ಯ ಕೋಚ್), ಮೈಕಲ್ ಹಸ್ಸಿ (ಬ್ಯಾಟಿಂಗ್ ಕೋಚ್), ಎರಿಕ್ ಸೈಮನ್ಸ್ (ಸಹಾಯಕ ಕೋಚ್)
ಡೆಲ್ಲಿ ಕ್ಯಾಪಿಟಲ್ಸ್: ರಿಕಿ ಪಾಂಟಿಂಗ್ (ಮುಖ್ಯ ಕೋಚ್), ಶೇನ್ ವ್ಯಾಟ್ಸನ್ (ಸಹಾಯಕ ಕೋಚ್), ಜೇಮ್ಸ್ ಹೋಪ್ಸ್ (ಬೌಲಿಂಗ್ ಕೋಚ್),
ಲಕ್ನೋ ಸೂಪರ್ ಜೈಂಟ್ಸ್: ಆಂಡಿ ಫ್ಲವರ್ (ಮುಖ್ಯ ಕೋಚ್), ಆಂಡಿ ಬಿಚೆಲ್ (ಬೌಲಿಂಗ್ ಕೋಚ್)
ಗುಜರಾತ್ ಟೈಟಾನ್ಸ್: ವಿಕ್ರಮ್ ಸೋಲಂಕಿ (ನಿರ್ದೇಶಕ), ಗ್ಯಾರಿ ಕರ್ಸ್ಟನ್ (ಬ್ಯಾಟಿಂಗ್ ಕೋಚ್)
ರಾಜಸ್ಥಾನ್ ರಾಯಲ್ಸ್: ಕುಮಾರ ಸಂಗಕ್ಕಾರ (ಮುಖ್ಯ ಕೋಚ್), ಲಸಿತ್ ಮಾಲಿಂಗ (ಬೌಲಿಂಗ್ ಕೋಚ್), ಟ್ರೆವರ್ ಪೆನ್ನಿ (ಸಹ ಕೋಚ್)
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಮೈಕ್ ಹೆಸನ್ (ನಿರ್ದೇಶಕ), ಆಡಮ್ ಗ್ರಿಫಿತ್ (ಬೌಲಿಂಗ್ ಕೋಚ್),
ಸನ್‌ರೈಸರ್ಸ್ ಹೈದರಾಬಾದ್: ಬ್ರಿಯಾನ್ ಲಾರಾ (ಮುಖ್ಯ ಕೋಚ್), ಸೈಮನ್ ಹೆಲ್ಮಾಟ್ (ಸಹಾಯಕ ಕೋಚ್), ಮುತ್ತಯ್ಯ ಮುರಳೀಧರನ್, ಡೇಲ್ ಸ್ಟೇನ್ (ಬೌಲಿಂಗ್ ಕೋಚ್),
ಪಂಜಾಬ್ ಕಿಂಗ್ಸ್: ಟ್ರೆವರ್ ಬೇಲಿಸ್ (ಮುಖ್ಯ ಕೋಚ್), ಬ್ರಾಡ್ ಹಡ್ಡಿನ್ (ಸಹಾಯಕ ಕೋಚ್), ಜಾಂಟಿ ರೋಡ್ಸ್ (ಫೀಲ್ಡಿಂಗ್ ಕೋಚ್), ಜೂಲಿಯನ್ ವುಡ್ (ಸಲಹೆಗಾರ), ಚಾರ್ಲ್ ಲ್ಯಾಂಗ್ವೆಲ್ಟ್ (ಬೌಲಿಂಗ್ ಕೋಚ್)
ಕೋಲ್ಕತ್ತಾ ನೈಟ್ ರೈಡರ್ಸ್: ಜೇಮ್ಸ್ ಫೋಸ್ಟರ್ (ಸಹಾಯಕ ಕೋಚ್), ರಿಯಾನ್ ಟೆನ್ ಡೋಸ್ಚೇಟ್ (ಫೀಲ್ಡಿಂಗ್ ಕೋಚ್)
Published On - 12:28 pm, Mon, 28 November 22