IND vs NZ: 3ನೇ ಏಕದಿನ ಪಂದ್ಯಕ್ಕೂ ಮಳೆ ಅಡ್ಡಿ..! ಸರಣಿ ಸೋಲುವ ಆತಂಕದಲ್ಲಿ ಟೀಂ ಇಂಡಿಯಾ
India vs New Zealand: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯ ಭಾರತೀಯ ಕಾಲಮಾನ ಬೆಳಗ್ಗೆ 7 ಗಂಟೆಗೆ ಆರಂಭವಾಗಲಿದ್ದು, ಪಂದ್ಯದ ವೇಳೆ ಕ್ರೈಸ್ಟ್ ಚರ್ಚ್ನಲ್ಲಿ ಶೇ.70ರಷ್ಟು ಮಳೆಯಾಗುವ ಸಾಧ್ಯತೆ ಇದೆ.
ಭಾರತ ಮತ್ತು ನ್ಯೂಜಿಲೆಂಡ್ (India and New Zealand) ನಡುವಿನ 3 ಏಕದಿನ ಸರಣಿಯ ಕೊನೆಯ ಪಂದ್ಯ ನವೆಂಬರ್ 30 ರಂದು ಕ್ರೈಸ್ಟ್‌ಚರ್ಚ್‌ನಲ್ಲಿ (Christchurch) ನಡೆಯಲಿದೆ. ಶಿಖರ್ ಧವನ್ (Shikhar Dhawan ) ನೇತೃತ್ವದ ಟೀಂ ಇಂಡಿಯಾ ಈಗಾಗಲೇ ಈ ಸರಣಿಯಲ್ಲಿ 0-1 ಹಿನ್ನಡೆಯಲ್ಲಿದ್ದು, ಸರಣಿ ಸೋಲನ್ನು ತಪ್ಪಿಸಲು ಕೊನೆಯ ಪಂದ್ಯವನ್ನು ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕಿದೆ. ಭಾರತ ಮೊದಲ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಸೋತಿತ್ತು. ನಂತರ ಹ್ಯಾಮಿಲ್ಟನ್‌ನಲ್ಲಿ (Hamilton) ನಡೆದ ಎರಡನೇ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಸಮಬಲಗೊಳಿಸುವ ಭಾರತದ ಬಯಕೆಗೆ ಮಳೆರಾಯ ತಣ್ಣೀರೆರಚ್ಚಿದ್ದ. ಇದೀಗ ಮೂರನೇ ಪಂದ್ಯಕ್ಕೂ ಮುನ್ನ ಹವಾಮಾನ ಇಲಾಖೆ ನೀಡಿರುವ ವರದಿ ಪ್ರಕಾರ 3ನೇ ಏಕದಿನ ಪಂದ್ಯಕ್ಕೂ ಮಳೆ ಕಾಟ ನೀಡಲಿದೆ. ಹೀಗಾಗಿ ಏಕದಿನ ಸರಣಿಯನ್ನು ಸೋಲುವ ಭೀತಿ ಟೀಂ ಇಂಡಿಯಾಕ್ಕೆ (Team India) ಎದುರಾಗಿದೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯ ಭಾರತೀಯ ಕಾಲಮಾನ ಬೆಳಗ್ಗೆ 7 ಗಂಟೆಗೆ ಆರಂಭವಾಗಲಿದ್ದು, ಪಂದ್ಯದ ವೇಳೆ ಕ್ರೈಸ್ಟ್ ಚರ್ಚ್ನಲ್ಲಿ ಶೇ.70ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಮಳೆಯಿಂದಾಗಿ ಮೂರನೇ ಏಕದಿನ ಪಂದ್ಯವೂ ರದ್ದಾಗುವ ಸಾಧ್ಯತೆಗಳಿವೆ. ಒಂದು ವೇಳೆ ಕೊನೆಯ ಪಂದ್ಯ ರದ್ದಾದರೆ ಏಕದಿನ ಸರಣಿ ಕಿವೀಸ್ ಪಾಲಾಗಲಿದೆ. ಏಕೆಂದರೆ ನಡೆದಿರುವ ಎರಡು ಪಂದ್ಯಗಳಲ್ಲಿ ಮೊದಲ ಪಂದ್ಯ ಗೆದ್ದುಬೀಗಿದ್ದ ಕಿವೀಸ್ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.
ಇದನ್ನೂ ಓದಿ: ‘ಕ್ರಿಕೆಟ್‌ನಲ್ಲೂ ಮೀಸಲಾತಿ ಬೇಕು’; ಬಿಸಿಸಿಐ ಆಯ್ಕೆ ವಿರುದ್ಧ ಟೀಂ ಇಂಡಿಯಾ ಅಭಿಮಾನಿಗಳ ಆಕ್ರೋಶ
ಮಳೆಯಿಂದ ರದ್ದಾಗಿದ್ದ 2ನೇ ಏಕದಿನ ಪಂದ್ಯ
ಹ್ಯಾಮಿಲ್ಟನ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯ ಮಳೆಯಿಂದ ರದ್ದಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 5 ಓವರ್ಗಳ ಇನ್ನಿಂಗ್ಸ್ ಪೂರ್ಣಗೊಳಿಸುವಷ್ಟರಲ್ಲೇ ಮಳೆ ಎಂಟ್ರಿಕೊಟ್ಟಿತ್ತು. ಸುದೀರ್ಘ ಕಾಯುವಿಕೆಯ ನಂತರ ಮಳೆ ನಿಂತು ಪಂದ್ಯವನ್ನು ಪುನರಾರಂಭಿಸಲಾಯಿತು. ಈ ವೇಳೆ ಉಭಯ ತಂಡಗಳಿಗು ತಲಾ 29 ಓವರ್ಗಳ ಇನ್ನಿಂಗ್ಸ್ ನೀಡಲಾಯಿತು. 5 ಓವರ್ಗಳಿಂದ ಇನ್ನಿಂಗ್ಸ್ ಮುಂದುವರೆಸಿದ್ದ ಭಾರತ ಸೂರ್ಯ ಹಾಗೂ ಗಿಲ್ ಸ್ಫೋಟಕ ಬ್ಯಾಟಿಂಗ್ನಿಂದ ಪಂದ್ಯದಲ್ಲಿ ಹಿಡಿತ ಸಾಧಿಸಿತ್ತು. ಆದರೆ ಮತ್ತೆ ಎಂಟ್ರಿಕೊಟ್ಟ ಮಳೆರಾಯ ಪಂದ್ಯವನ್ನು ಸಂಪೂರ್ಣ ಆಹುತಿ ಪಡದೇ ಅಲ್ಲಿಂದ ನಿರ್ಗಮಿಸಿದ್ದ.
ಟಿ20 ಸರಣಿಯಲ್ಲೂ ಮಳೆಯ ಹಸ್ತಕ್ಷೇಪ
ಏಕದಿನ ಸರಣಿಯಂತೆ ಟಿ20 ಸರಣಿಯಲ್ಲೂ ಮಳೆ ನಿರಂತರ ಕಾಟ ನೀಡಿತ್ತು. ಹೀಗಾಗಿ ಟಿ20 ಸರಣಿಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಹಾರ್ದಿಕ್ ಪಡೆ ಯಶಸ್ವಿಯಾಗಿತ್ತು. ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಭಾರೀ ಮಳೆಯಿಂದಾಗಿ ಈ ಪಂದ್ಯದ ಟಾಸ್ ಕೂಡ ಸಾಧ್ಯವಾಗಲಿಲ್ಲ. ಆ ಬಳಿಕ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 65 ರನ್‌ಗಳ ಬೃಹತ್ ಗೆಲುವು ಸಾಧಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸಿತ್ತು. ನಂತರ ನಡೆಯಬೇಕಿದ್ದ ಮೂರನೇ ಟಿ20 ಪಂದ್ಯ ಮಳೆಯಿಂದ ಟೈ ಆಗಿದ್ದರಿಂದ ಭಾರತ ಸರಣಿ ವಶಪಡಿಸಿಕೊಂಡಿತ್ತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:27 pm, Mon, 28 November 22