IND vs NZ: ಸರಣಿ ಸಮಬಲಕ್ಕೆ ಹೋರಾಟ: ಭಾರತ- ನ್ಯೂಜಿಲೆಂಡ್ ಮೂರನೇ ಏಕದಿನ ಪಂದ್ಯ ಯಾವಾಗ?
India vs New Zealand 3rd ODI: ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಅಂತಿಮ ಏಕದಿನ ಪಂದ್ಯ ನವೆಂಬರ್ 30 ರಂದು ಕ್ರಿಸ್ಟ್ಚರ್ಚ್ನ ಹೇಗ್ಲೆ ಓವಲ್ ಮೈದಾನದಲ್ಲಿ ನಡೆಯಲಿದೆ. ಬಾರತೀಯ ಕಾಲಮಾನದ ಪ್ರಕಾರ ಪಂದ್ಯ ಬೆಳಗ್ಗೆ 7 ಗಂಟೆಗೆ ಶುರುವಾಗಲಿದೆ.
ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಣ ಏಕದಿನ ಸರಣಿ ಸಾಕಷ್ಟು ರೋಚಕತೆ ಪಡೆದುಕೊಂಡಿದೆ. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ 7 ವಿಕೆಟ್ಗಳ ಜಯ ಸಾಧಿಸಿ 1-0 ಮುನ್ನಡೆ ಪಡೆದುಕೊಂಡರೆ ದ್ವಿತೀಯ ಪಂದ್ಯ ಮಳೆಯಿಂದಾಗಿ ರದ್ದಾಯಿತು ಇನ್ನು ಉಳಿದಿರುವುದು ಕೇವಲ ಪಂದ್ಯ ಮಾತ್ರ. ಹೀಗಾಗಿ ಸರಣಿ ಗೆಲ್ಲುವ ಟೀಮ್ ಇಂಡಿಯಾದ (Team India) ಕನಸು ನುಚ್ಚಿನೂರಾಗಿದೆ. ಈಗೇನಿದ್ದರು ಕನಿಷ್ಠ ಸರಣಿಯನ್ನು ಕಳೆದುಕೊಳ್ಳದೆ ಸಮಬಲ ಮಾಡಲು ಹೋರಾಟ ನಡೆಸಬೇಕಿದೆ. ಸೋತರೆ ಧವನ್ (Shikhar Dhawan) ನಾಯಕತ್ವಕ್ಕೆ ಹಾಗೂ ಭಾರತಕ್ಕೆ ದೊಡ್ಡ ಹಿನ್ನಡೆಯೆಂದೇ ಹೇಳಬಹುದು. ಹಾಗಾದರೆ ತೃತೀಯ ಏಕದಿನ ಕದನ ಯಾವಾಗ?, ಎಲ್ಲಿ ನಡೆಯಲಿದೆ? ಎಂಬುದನ್ನು ನೋಡೋಣ.
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಅಂತಿಮ ಏಕದಿನ ಪಂದ್ಯ ನವೆಂಬರ್ 30 ರಂದು ಕ್ರಿಸ್ಟ್ಚರ್ಚ್ನ ಹೇಗ್ಲೆ ಓವಲ್ ಮೈದಾನದಲ್ಲಿ ನಡೆಯಲಿದೆ. ಬಾರತೀಯ ಕಾಲಮಾನದ ಪ್ರಕಾರ ಪಂದ್ಯ ಬೆಳಗ್ಗೆ 7 ಗಂಟೆಗೆ ಶುರುವಾಗಲಿದೆ. 6:30 ಕ್ಕೆ ಟಾಸ್ ಪ್ರಕ್ರಿಯೆ ಶುರುವಾಗಲಿದೆ. ಹೇಗ್ಲೆ ಓವಲ್ ಮೈದಾನದ ಪಿಚ್ ಬ್ಯಾಟರ್ ಮತ್ತು ಬೌಲರ್ ಇಬ್ಬರಿಗೂ ಸಹಾಯ ಮಾಡಲಿದೆ. ಇಲ್ಲಿ 300+ ರನ್ ಸುಲಭವಾಗಿ ಕಲೆಹಾಕಬಹುದು. ವೇಗಿಗಳು ಲೈನ್ ಮತ್ತು ಲೆಂತ್ ಅನ್ನು ಅರಿತು ಬೌಲಿಂಗ್ ಮಾಡಿದರೆ ಬ್ಯಾಟರ್ಗಳು ಪರದಾಡುವುದು ಖಚಿತ. ಭಾರತ ಈ ಮೈದಾನದಲ್ಲಿ ಇದುವರೆಗೆ ಒಂದೂ ಏಕದಿನ ಪಂದ್ಯವನ್ನು ಆಡಿಲ್ಲ. ನ್ಯೂಜಿಲೆಂಡ್ ಆಡಿದ 11 ಪಂದ್ಯಗಳ ಪೈಕಿ 10 ರಲ್ಲಿ ಜಯ ಸಾಧಿಸಿದೆ. ಈ ಪಂದ್ಯಕ್ಕೆ ಮಳೆ ಬರುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.
ಸಂಜು ಸ್ಯಾಮ್ಸನ್ಗೆ ಅವಕಾಶವಿಲ್ಲ:
ಮೂರನೇ ಏಕದಿನ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಬದಲಾವಣೆ ಅನುಮಾನ. ದ್ವಿತೀಯ ಪಂದ್ಯದಲ್ಲಿ ಆಡಿದ ಆಟಗಾರರೇ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಸಂಜು ಸ್ಯಾಮ್ಸನ್ ಮತ್ತೊಮ್ಮೆ ಬೆಂಚ್ ಕಾಯಬೇಕಿದೆ. ಭಾರತದಲ್ಲಿ ಆರನೇ ಬೌಲರ್ ಅವಶ್ಯತೆ ತುಂಬಾ ಇದೆ. ಮೊದಲ ಪಂದ್ಯದಲ್ಲಿ ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಹಲ್, ಶಾರ್ದೂಲ್ ಸೇರಿ ಪ್ರತಿ ಬೌಲರ್ ದುಬಾರಿಯಾದರು. ಹೀಗಾಗಿ ಎರಡನೇ ಏಕದಿನಕ್ಕೆ ಅರನೇ ಬೌಲರ್ ಅಗತ್ಯವಿದ್ದ ಕಾರಣ ಓರ್ವ ಬ್ಯಾಟರ್ ಅನ್ನು ಹೊರಗಿಡುವುದು ಅನಿವಾರ್ಯವಾಗಿತ್ತು. ಧವನ್ ನಾಯಕನಾದರೆ, ಗಿಲ್ ಓಪನರ್, ಶ್ರೇಯಸ್ ಅಯ್ಯರ್ ಹಾಗೂ ಸೂರ್ಯಕುಮರ್ ಫಾರ್ಮ್ನಲ್ಲಿದ್ದಾರೆ. ರಿಷಭ್ ಪಂತ್ ಉಪ ನಾಯಕ. ಹೀಗೆ ತಂಡದಿಂದ ಸ್ಯಾಮ್ಸನ್ ಅವರನ್ನು ಬಿಟ್ಟರೆ ಮತ್ಯಾರನ್ನು ಹೊರಗಿಡುವ ಸ್ಥಿತಿಯಲ್ಲಿ ಮ್ಯಾನೇಜ್ಮೆಂಟ್ ಇರಲಿಲ್ಲ. ಇದು ತೃತೀಯ ಏಕದಿನಕ್ಕೂ ಮುಂದುವರೆಯಲಿದೆ.
ದ್ವಿತೀಯ ಏಕದಿನ ಏನಾಗಿತ್ತು?:
ಹ್ಯಾಮಿಲ್ಟನ್ನ ಸೀಡನ್ ಪಾರ್ಕ್ನಲ್ಲಿ ನಡದ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ದ್ವಿತೀಯ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಪಂದ್ಯ ಆರಂಭಕ್ಕೂ ಮುನ್ನ ಟಾಸ್ ಪ್ರಕ್ರಿಯೆಗೇ ವರುಣ ಅಡ್ಡಿ ಪಡಿಸಿದ. ಬಳಿಕ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್ಗೆ ಇಳಿದ ಟೀಮ್ ಇಂಡಿಯಾ ಪರ ಓಪನರ್ಗಳಾದ ನಾಯಕ ಶಿಖರ್ ಧವನ್ ಹಾಗೂ ಶುಭ್ಮನ್ ಗಿಲ್ ಉತ್ತಮ ಆರಂಭ ಒದಗಿಸಿದರು. ಆದರೆ, 4.5 ಓವರ್ಗೆ ಭಾರತ ವಿಕೆಟ್ ನಷ್ಟವಿಲ್ಲದೆ 22 ರನ್ ಗಳಿಸಿದ್ದಾಗ ಮಳೆ ಪುನಃ ಶುರುವಾಯಿತು. ಬಳಿಕ ಓವರ್ ಕಡಿತದ ಪ್ರಕ್ರಿಯೆ ಶುರುವಾಯಿತು. ಹೀಗಾಗಿ 29 ಓವರ್ಗಳ ಪಂದ್ಯವನ್ನ ಆಡಿಸಲು ನಿರ್ಧಾರ ಮಾಡಲಾಯಿತು.
ಮಳೆ ನಿತ್ತ ಬಳಿಕ ಬ್ಯಾಟಿಂಗ್ ಮುಂಂದುವರೆಸಲು ಬಂದ ಭಾರತ ಶಿಖರ್ ಧವನ್ (3) ವಿಕೆಟ್ ಕಳೆದುಕೊಂಡಿತು. ನಂತರ ಜೊತೆಯಾದ ಸೂರ್ಯಕುಮಾರ್ ಯಾದವ್ ಹಾಗೂ ಶುಭ್ಮನ್ ಗಿಲ್ ಬಿರುಸಿನ ಆಟ ಆಡಿದರು. ಆದರೆ, ಮಳೆಯ ಆಟದ ಮುಂದೆ ಯಾರ ಆಟವೂ ನಿಂತು ಹೋಯಿತು. 13ನೇ ಓವರ್ ಆಗುವಾಗ ಮತ್ತೆ ಜೋರಾಗಿ ಮಳೆ ಸುರಿದ ಪರಿಣಾಮ ಆಟಗಾರರೆಲ್ಲ ಪೆವಿಲಿಯನ್ಗೆ ತೆರಳಿದರು. ಈ ಸಂದರ್ಭ ಭಾರತ 12.5 ಓವರ್ಗೆ 1 ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿತ್ತು. ಸೂರ್ಯ ಅಜೇಯ 34 ಮತ್ತು ಗಿಲ್ ಅಜೇಯ 45 ರನ್ ಸಿಡಿಸಿದ್ದರು. ನಂತರ ಕೆಲಹೊತ್ತು ಕಾದರೂ ಮಳೆ ಕಡಿಮೆ ಆಗಲಿಲ್ಲ. ಅಂತಿಮವಾಗಿ ಪಂದ್ಯವನ್ನು ಸ್ಥಗಿತಗೊಳಿಸುವ ತೀರ್ಮಾನಕ್ಕೆ ಬಂದರು.
Published On - 8:17 am, Mon, 28 November 22