ಭಾರತದಲ್ಲಿನ ವಿಶ್ವಕಪ್ ಬಹಿಷ್ಕರಿಸುವ ಧೈರ್ಯ ಪಾಕಿಸ್ತಾನಕ್ಕಿಲ್ಲ ಎಂದ ಪಾಕ್ ಕ್ರಿಕೆಟಿಗ
India vs Pakistan: ಪಾಕಿಸ್ತಾನದ ಜನರು ಏಷ್ಯಾಕಪ್ ಅನ್ನು ತಮ್ಮ ದೇಶದಲ್ಲಿ ನಡೆಯಬೇಕೆಂದು ಬಯಸುತ್ತಾರೆ. ಆದರೆ ದೇಶದ ಪರಿಸ್ಥಿತಿಯನ್ನು ನೋಡಿದರೆ, ನಾವು ಟೂರ್ನಿ ಆಯೋಜನೆಯಿಂದ ಹಿಂದೆ ಸರಿಯಬೇಕಾಗಿ ಬರಬಹುದು.
India vs Pakistan: 2023 ರಲ್ಲಿ ನಡೆಯಲಿರುವ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್ ಈಗ ಚರ್ಚಾ ವಿಷಯವಾಗಿದೆ. ಇದಕ್ಕೆ ಮುಖ್ಯ ಕಾರಣ ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾಕಪ್ನಲ್ಲಿ ಭಾರತ ತಂಡವು ಭಾಗವಹಿಸುವುದಿಲ್ಲ ಎಂದಿರುವುದು. ಇತ್ತ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನೀಡಿದ ಹೇಳಿಕೆ ಬೆನ್ನಲ್ಲೇ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಮೀಜ್ ರಾಜಾ ಏಷ್ಯಾಕಪ್ ಆಡಲು ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಬರದಿದ್ದರೆ ನಮ್ಮ ತಂಡವೂ ಕೂಡ ಮುಂದಿನ ವರ್ಷ ಭಾರತದಲ್ಲಿ ನಡೆಯಲ್ಲಿರುವ ವಿಶ್ವಕಪ್ ಆಡಲು ಭಾರತಕ್ಕೆ ತೆರಳುವುದಿಲ್ಲ ಎಂದಿದ್ದಾರೆ.
ಈ ಹೇಳಿಕೆಗಳ ನಡುವೆ ಇದೀಗ ಪಾಕಿಸ್ತಾನ್ ತಂಡದ ಮಾಜಿ ಆಟಗಾರ ದಾನಿಶ್ ಕನೇರಿಯಾ ನೀಡಿರುವ ಹೇಳಿಕೆಯು ಎಲ್ಲರ ಗಮನ ಸೆಳೆದಿದೆ. 2016 ರಲ್ಲಿ ಭಾರತ ಟಿ20 ವಿಶ್ವಕಪ್ಗೆ ಆತಿಥ್ಯವಹಿಸಿತ್ತು. ಆಗಲೂ ಆಗ ಪಾಕಿಸ್ತಾನ್ ತಂಡವು ಭಾಗವಹಿಸಿತ್ತು. ಇದೀಗ ಏಕದಿನ ವಿಶ್ವಕಪ್ನಲ್ಲೂ ಪಾಕ್ ತಂಡ ಕಾಣಿಸಿಕೊಳ್ಳಲಿದೆ. ಏಕೆಂದರೆ ವಿಶ್ವಕಪ್ ಐಸಿಸಿ ಕಾರ್ಯಕ್ರಮವಾಗಿದ್ದು, ಅದರಲ್ಲಿ ಆಡದಿರಲು ಪಾಕಿಸ್ತಾನ ನಿರ್ಧರಿಸಿದರೆ, ಅದರ ವಿರುದ್ಧ ಐಸಿಸಿ ಕಠಿಣ ನಿಲುವು ತೆಗೆದುಕೊಳ್ಳಬಹುದು. ಹೀಗಾಗಿ 2023 ರಲ್ಲಿ ಪಾಕ್ ತಂಡ ವಿಶ್ವಕಪ್ ಆಡಲಿದೆ ಎಂದಿದ್ದಾರೆ ದಾನಿಶ್ ಕನೇರಿಯಾ.
ಏಕೆಂದರೆ ಐಸಿಸಿಯ ಕಾರ್ಯಕ್ರಮವನ್ನು ಬಹಿಷ್ಕರಿಸುವ ಧೈರ್ಯ ಪಿಸಿಬಿಗೆ ಇಲ್ಲ. ಹಾಗೆಯೇ ಭಾರತಕ್ಕೆ ಪಾಕಿಸ್ತಾನ ತಂಡ ಬರುತ್ತದೆಯೋ ಇಲ್ಲವೋ ಎಂಬುದು ಅವರಿಗೆ ಮುಖ್ಯವಲ್ಲ. ಭಾರತೀಯ ಕ್ರಿಕೆಟ್ ಮಂಡಳಿ ಆದಾಯವನ್ನು ಗಳಿಸುವ ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ. ಆದರೆ ಭಾರತದಲ್ಲಿನ ವಿಶ್ವಕಪ್ನ್ನು ಪಾಕ್ ಬಹಿಷ್ಕರಿಸಿದರೆ ಅದು ಪಾಕಿಸ್ತಾನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ದಾನಿಶ್ ಕನೇರಿಯಾ ಹೇಳಿದ್ದಾರೆ.
ಈಗ ಭಾರತ ತಂಡವು ಭದ್ರತೆ ಕಾರಣವನ್ನು ನೀಡಿ ಪಾಕ್ನಲ್ಲಿ ನಡೆಯಲಿರುವ ಏಷ್ಯಾಕಪ್ನಿಂದ ಹಿಂದೆ ಸರಿದಿದೆ. ಮುಂದೆ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಕೂಡ ಪಾಕಿಸ್ತಾನಕ್ಕೆ ಬರಲು ನಿರಾಕರಿಸಬಹುದು ಎಂದು ಕನೇರಿಯಾ ಹೇಳಿದ್ದಾರೆ. ಏಷ್ಯಾಕಪ್ಗೆ ಇನ್ನೂ ಸಾಕಷ್ಟು ಸಮಯವಿದೆ. ಆ ವೇಳೆಗೆ ಎಲ್ಲವೂ ಸರಿಯಾಗುತ್ತದೆ ಅಥವಾ ಏಷ್ಯಾಕಪ್ ಪಂದ್ಯಾವಳಿಯನ್ನು ಪಾಕಿಸ್ತಾನದಲ್ಲಿ ಆಡಲಾಗುತ್ತದೆಯೇ ಅಥವಾ ಇಲ್ಲವೇ ಎಂದು ನಾವು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಮುಂದಿನ ಪರಿಸ್ಥಿತಿ ಏನಾಗಲಿದೆಯೋ ಎಂಬುದು ಸಹ ಗೊತ್ತಿಲ್ಲ. ಹೀಗಾಗಿ ಇಂತಹ ಹೇಳಿಕೆಗಳನ್ನು ರಮೀಜ್ ರಾಜಾ ನಿಲ್ಲಿಸುವುದು ಉತ್ತಮ ಎಂದಿದ್ದಾರೆ ಕನೇರಿಯಾ.
ಪಾಕಿಸ್ತಾನದ ಜನರು ಏಷ್ಯಾಕಪ್ ಅನ್ನು ತಮ್ಮ ದೇಶದಲ್ಲಿ ನಡೆಯಬೇಕೆಂದು ಬಯಸುತ್ತಾರೆ. ಆದರೆ ದೇಶದ ಪರಿಸ್ಥಿತಿಯನ್ನು ನೋಡಿದರೆ, ನಾವು ಟೂರ್ನಿ ಆಯೋಜನೆಯಿಂದ ಹಿಂದೆ ಸರಿಯಬೇಕಾಗಿ ಬರಬಹುದು ಎಂದು ಕನೇರಿಯಾ ಅಭಿಪ್ರಾಯಪಟ್ಟಿದ್ದಾರೆ.
2023 ರ ಏಷ್ಯಾಕಪ್ ಅನ್ನು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಆಯೋಜಿಸಲಿದೆ. ಆದರೆ ಪಾಕಿಸ್ತಾನದಲ್ಲಿ ಟೂರ್ನಿ ನಡೆದರೆ ಭಾರತ ಭಾಗವಹಿಸುವುದಿಲ್ಲ ಎಂದು ಈಗಾಗಲೇ ಬಿಸಿಸಿಐ ಅಧ್ಯಕ್ಷ ಜಯ್ ಶಾ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ತಟಸ್ಥ ಸ್ಥಳದಲ್ಲಿ ಟೂರ್ನಿಯನ್ನು ಆಯೋಜಿಸಬೇಕೆಂದು ಮನವಿ ಮಾಡಿದ್ದಾರೆ. ಆದರೆ ಇದೀಗ ಪಾಕ್ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಅನ್ನು ಬಹಿಷ್ಕರಿಸುವ ಬೆದರಿಕೆಯೊಡ್ಡಿದ್ದಾರೆ. ಆದರೆ ಪಾಕ್ನ ಗೊಡ್ಡು ಬೆದರಿಕೆಗೆ ಭಾರತ ಬಗ್ಗುವುದಿಲ್ಲ ಎಂಬುದು ಸ್ಪಷ್ಟ. ಹೀಗಾಗಿ ಮುಂದಿನ ಏಷ್ಯಾಕಪ್ ಯುಎಇ ಅಥವಾ ಶ್ರೀಲಂಕಾದಲ್ಲಿ ನಡೆಯುವ ಸಾಧ್ಯತೆ ಹೆಚ್ಚಿದೆ ಎನ್ನಬಹುದು.