ಬಾಂಗ್ಲಾ ಪ್ರವಾಸಕ್ಕೂ ಮುನ್ನ ತುರ್ತು ಸಭೆ ಕರೆದ ಬಿಸಿಸಿಐ; ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ..!
BCCI: ಭಾರತ ತಂಡದಲ್ಲಿ ವಿಭಜಿತ ನಾಯಕತ್ವ ಇರಬೇಕೇ? ತಂಡಕ್ಕೆ ಸ್ಪ್ಲಿಟ್ ಕೋಚಿಂಗ್ ಅಗತ್ಯವಿದೆಯೇ? ಇಂತಹ ಎಲ್ಲ ಪ್ರಶ್ನೆಗಳಿಗೆ ಈ ಸಭೆಯಲ್ಲಿ ಉತ್ತರ ಸಿಗಲಿದೆ.
ಡಿಸೆಂಬರ್ 1 ರಂದು ಭಾರತ ತಂಡ ಬಾಂಗ್ಲಾದೇಶ (India vs Bangladesh) ಪ್ರವಾಸಕ್ಕೆ ತೆರಳಬೇಕಿದೆ. ಆದರೆ, ಅದಕ್ಕೂ ಮುನ್ನ ಬಿಸಿಸಿಐ (BCCI) ತುರ್ತು ಸಭೆ ಕರೆದಿದೆ. ಈ ವಿಶೇಷ ಸಭೆಗೆ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರನ್ನು ವಿಶೇಷವಾಗಿ ಕರೆಯಲಾಗಿದೆ. ಮುಂಬೈನಲ್ಲಿ ಬಿಸಿಸಿಐ ಸಭೆ ನಡೆಯಲಿದ್ದು, ಇವರಲ್ಲದೆ ಆಯ್ಕೆ ಸಮಿತಿಯ ಕೆಲವು ಸದಸ್ಯರು ಕೂಡ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಟಿ20 ವಿಶ್ವಕಪ್‌ನಲ್ಲಿ (T20 World Cup) ಭಾರತೀಯ ಆಟಗಾರರ ಪ್ರದರ್ಶನವನ್ನು ಪರಾಮರ್ಶಿಸುವುದರ ಜೊತೆಗೆ ಇತರ ಹಲವು ವಿಷಯಗಳ ಬಗ್ಗೆಯೂ ಚರ್ಚಿಸುವುದು ಈ ತುರ್ತು ಸಭೆಯ ಉದ್ದೇಶ ಎಂದು ಹೇಳಲಾಗಿದೆ.
ಇದೀಗ ಬಂದಿರುವ ಮಾಹಿತಿ ಪ್ರಕಾರ ಟೀಂ ಇಂಡಿಯಾ ಮುಂದಿರುವ ದಾರಿ ಯಾವುದು ಎಂದು ಈ ಸಭೆಯಲ್ಲಿ ತೀರ್ಮಾನವಾಗಲಿದೆ. ಭಾರತ ತಂಡದಲ್ಲಿ ವಿಭಜಿತ ನಾಯಕತ್ವ ಇರಬೇಕೇ? ತಂಡಕ್ಕೆ ಸ್ಪ್ಲಿಟ್ ಕೋಚಿಂಗ್ ಅಗತ್ಯವಿದೆಯೇ? ಇಂತಹ ಎಲ್ಲ ಪ್ರಶ್ನೆಗಳಿಗೆ ಈ ಸಭೆಯಲ್ಲಿ ಉತ್ತರ ಸಿಗಲಿದೆ.
ಬಾಂಗ್ಲಾದೇಶ ಪ್ರವಾಸಕ್ಕೂ ಮುನ್ನ ಬಿಸಿಸಿಐ ಸಭೆ
ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಇನ್‌ಸೈಡ್‌ಸ್ಪೋರ್ಟ್‌ಗೆ ನೀಡಿರುವ ಮಾಹಿತಿ ಪ್ರಕಾರ, ತುರ್ತು ಸಭೆ ನಡೆಯುವುದು ಖಚಿತ ಆದರೆ ಅದು ಯಾವಾಗ ನಡೆಯುತ್ತದೆ ಎಂದು ನಾನು ಈಗ ಹೇಳಲಾರೆ. ಆದರೆ ಬಾಂಗ್ಲಾದೇಶ ಪ್ರವಾಸಕ್ಕೆ ಹೋಗುವ ಮೊದಲು ನಾವು ರೋಹಿತ್ ಮತ್ತು ರಾಹುಲ್ ಅವರನ್ನು ಭೇಟಿಯಾಗಲು ಬಯಸುತ್ತೇವೆ. ಈ ಇಬ್ಬರೊಂದಿಗೆ ಮಾತನಾಡಲು ಹಲವು ವಿಷಯಗಳಿವೆ. ಇದರಲ್ಲಿ ವಿಮರ್ಶೆ ಮಾಡಲು ಏನೂ ಇರುವುದಿಲ್ಲ. ನಾವು ಮುಂದಿನ ವಿಶ್ವಕಪ್ ಬಗ್ಗೆ ಯೋಚಿಸುತ್ತಿದ್ದೇವೆ. ರೋಹಿತ್ ಮತ್ತು ರಾಹುಲ್ ಇಬ್ಬರಿಗೂ ಬದಲಾವಣೆಗಳ ಅಗತ್ಯವಿದೆ ಎಂದು ಚೆನ್ನಾಗಿ ತಿಳಿದಿದೆ. ನಾಯಕತ್ವ ಮತ್ತು ಕೋಚ್ ವಿಭಜನೆಗೆ ಸಂಬಂಧಿಸಿದಂತೆ, ತುರ್ತು ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ ಎಂದಿದ್ದಾರೆ.
ರೋಹಿತ್, ದ್ರಾವಿಡ್, ಕೊಹ್ಲಿಗೆ ಆಹ್ವಾನ
ಮೂಲಗಳ ಪ್ರಕಾರ, ಬಿಸಿಸಿಐ ಸಭೆಯಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ, ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ, ಖಜಾಂಚಿ ಮತ್ತು ಚೇತನ್ ಶರ್ಮಾ ಉಪಸ್ಥಿತರಿರುತ್ತಾರೆ ಎಂದು ತಿಳಿದುಬಂದಿದೆ.
ಭಾರತದ ಬಾಂಗ್ಲಾದೇಶ ಪ್ರವಾಸ
ಟೀಂ ಇಂಡಿಯಾದ ಬಾಂಗ್ಲಾದೇಶ ಪ್ರವಾಸವು ಡಿಸೆಂಬರ್ 4 ರಿಂದ ಏಕದಿನ ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಈ ಪ್ರವಾಸದಲ್ಲಿ ಉಭಯ ದೇಶಗಳ ನಡುವೆ 3 ಏಕದಿನ ಪಂದ್ಯಗಳ ಸರಣಿ ನಡೆಯಲಿದ್ದು, ಆ ಬಳಿಕ 3 ಪಂದ್ಯಗಳ ಟೆಸ್ಟ್ ಸರಣಿ ಕೂಡ ನಡೆಯಲಿದೆ.
Published On - 10:56 am, Mon, 28 November 22