ಬಿಸಿಸಿಐ ಮನವಿಗೆ ಸೊಪ್ಪು ಹಾಕದ ಎಸಿಸಿ: ಏಷ್ಯಾಕಪ್ ಬಹಿಷ್ಕರಿಸುವ ಸಾಧ್ಯತೆ
Asia Cup 2025: ಏಷ್ಯಾಕಪ್ ಟೂರ್ನಿಯ 17ನೇ ಆವೃತ್ತಿಗೆ ಸಿದ್ಧತೆಗಳು ಶುರುವಾಗಿದೆ. ಅದರ ಮೊದಲ ಹೆಜ್ಜೆಯಾಗಿ ಇದೀಗ ಟೂರ್ನಿ ಆರಂಭಕ್ಕೆ ದಿನಾಂಕ ಫಿಕ್ಸ್ ಮಾಡಲಾಗಿದೆ. ಅದರಂತೆ ಸೆಪ್ಟೆಂಬರ್ ಮೊದಲ ವಾರದಿಂದ ಏಷ್ಯಾಕಪ್ ಶುರುವಾಗುವುದು ಬಹುತೇಕ ಖಚಿತವಾಗಿದೆ. ಅಲ್ಲದೆ ಈ ಬಾರಿ 6 ತಂಡಗಳನ್ನು ಕಣಕ್ಕಿಳಿಸಲು ಎಸಿಸಿ ನಿರ್ಧರಿಸಿದೆ.

ಏಷ್ಯಾಕಪ್ 2025 ರಿಂದ ಭಾರತ ತಂಡವು ಹೊರಗುಳಿಯುವ ಸಾಧ್ಯತೆಯಿದೆ. ಇದಕ್ಕೆ ಮುಖ್ಯ ಕಾರಣ ಭಾರತೀಯ ಕ್ರಿಕೆಟ್ ಮಂಡಳಿಯ ಮನವಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪುರಸ್ಕರಿಸದಿರುವುದು. ಈ ಬಾರಿಯ ಏಷ್ಯನ್ ಕ್ರಿಕೆಟ್ ಕೌನ್ಸಿಲ್ನ ವಾರ್ಷಿಕ ಮಹಾಸಭೆಯನ್ನು ಢಾಕಾದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಆದರೆ ಭಾರತ ಮತ್ತು ಬಾಂಗ್ಲಾದೇಶ್ ನಡುವೆ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು, ಹೀಗಾಗಿ ಢಾಕಾದಿಂದ ವಾರ್ಷಿಕ ಮಹಾಸಭೆಯನ್ನು ಸ್ಥಳಾಂತರಿಸಬೇಕೆಂದು ಬಿಸಿಸಿಐ ಮನವಿ ಮಾಡಿದೆ.
ಅಲ್ಲದೆ ಢಾಕಾದಲ್ಲಿ ಎಸಿಸಿ ಸಭೆ ನಡೆದರೆ ಬಿಸಿಸಿಐ ಭಾಗವಹಿಸುವುದಿಲ್ಲ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಹಾಗೂ ಪಿಸಿಬಿ ಅಧ್ಯಕ್ಷರಾದ ಮೊಹ್ಸಿನ್ ನಖ್ವಿ ಅವರಿಗೆ ತಿಳಿಸಲಾಗಿದೆ. ಇದಾಗ್ಯೂ ಎಸಿಸಿ ಈವರೆಗೆ ಯಾವುದೇ ಉತ್ತರ ನೀಡಿಲ್ಲ. ಅತ್ತ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರದಿರುವುದರಿಂದ ಬಿಸಿಸಿಐ ಏಷ್ಯನ್ ಕ್ರಿಕೆಟ್ ಕೌನ್ಸಿಲ್ನ ಸಭೆ ಹಾಗೂ ಏಷ್ಯಾಕಪ್ನಿಂದ ಹಿಂದೆ ಸರಿಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಇನ್ನು ಢಾಕಾದಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗವಹಿಸಲು ಭಾರತವಲ್ಲದೆ, ಶ್ರೀಲಂಕಾ, ಒಮಾನ್ ಮತ್ತು ಅಫ್ಘಾನಿಸ್ತಾನದ ಕ್ರಿಕೆಟ್ ಮಂಡಳಿಗಳು ಕೂಡ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಈ ಆಕ್ಷೇಪಣೆಗಳ ಹೊರತಾಗಿಯೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ವಾರ್ಷಿಕ ಸಭೆಯನ್ನು ಬೇರೊಂದು ನಗರಕ್ಕೆ ಸ್ಥಳಾಂತರಿಸುವ ಬಗ್ಗೆ ಯಾವುದೇ ನಿರ್ಧಾರವನ್ನು ತಿಳಿಸಿಲ್ಲ. ಹೀಗಾಗಿ ಈ ಕ್ರಿಕೆಟ್ ಮಂಡಳಿಗಳು ಕೂಡ ಸಭೆಯನ್ನು ಬಹಿಷ್ಕರಿಸುವ ಸಾಧ್ಯತೆಯನ್ನು ಸಹ ತಳ್ಳಿ ಹಾಕುವಂತಿಲ್ಲ.
ಬಿಸಿಸಿಐ ಮುಂದಿನ ನಡೆಯೇನು?
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ತನ್ನ ನಿರ್ಧಾರವನ್ನು ಬದಲಿಸದಿದ್ದರೆ, ಬಿಸಿಸಿಐ ಈ ಸಭೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿದೆ. ಅಲ್ಲದೆ ಮುಂಬರುವ ಏಷ್ಯಾಕಪ್ನಿಂದಲೂ ಹಿಂದೆ ಸರಿಯುವ ಸಾಧ್ಯತೆಯಿದೆ. ಅಲ್ಲದೆ ಪ್ರಮುಖ ಸದಸ್ಯ ಮಂಡಳಿಗಳು ಭಾಗವಹಿಸದೆ ಢಾಕಾದಲ್ಲಿ ನಡೆಯುವ ಸಭೆಯಲ್ಲಿ ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳನ್ನು ಅಮಾನ್ಯವೆಂದು ಬಿಸಿಸಿಐ ಪರಿಗಣಿಸಲಿದೆ.
ಇತ್ತ ಭಾರತೀಯ ಕ್ರಿಕೆಟ್ ಮಂಡಳಿ ಜೊತೆ ಶ್ರೀಲಂಕಾ, ಒಮಾನ್ ಹಾಗೂ ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿಗಳು ಕೈ ಜೋಡಿಸಿದ್ದು, ಹೀಗಾಗಿ ಢಾಕಾದಲ್ಲಿ ಸಭೆ ನಡೆದರೆ ಪಾಕಿಸ್ತಾನ್ ಹಾಗೂ ಬಾಂಗ್ಲಾದೇಶ್ ಕ್ರಿಕೆಟ್ ಮಂಡಳಿಯ ಸದಸ್ಯರು ಮಾತ್ರ ಭಾಗವಹಿಸಲಿದ್ದಾರೆ.
ನಿಗದಿತ ಸಭೆಗೆ ಕೇವಲ ಐದು ದಿನಗಳು ಬಾಕಿ ಉಳಿದಿದ್ದು, ಸ್ಥಳ ಬದಲಾವಣೆಯ ಕುರಿತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಈವರೆಗೆ ಯಾವುದೇ ಅಧಿಕೃತ ಸಂವಹನವನ್ನು ಮಾಡಿಲ್ಲ, ಇದರಿಂದಾಗಿ ಏಷ್ಯಾ ಕಪ್‌ನ ಭವಿಷ್ಯ ಕೂಡ ಅನಿಶ್ಚಿತವಾಗಿದೆ.
ಏಕೆಂದರೆ ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ್ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಿ, ಏಷ್ಯಾಕಪ್ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡರೂ ಅದನ್ನು ಏಷ್ಯಾದ ಉಳಿದ ಕ್ರಿಕೆಟ್ ಮಂಡಳಿಗಳು ಒಪ್ಪುವ ಸಾಧ್ಯತೆಯಿಲ್ಲ. ಹೀಗಾಗಿ ಈ ಬಾರಿಯ ಏಷ್ಯಾಕಪ್ ನಡೆಯುವುದು ಮುಂಬರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ನ ವಾರ್ಷಿಕ ಸಭೆ ಎಲ್ಲಿ ನಡೆಯಲಿದೆ ಎಂಬುದರ ಮೇಲೆ ನಿಂತಿದೆ.
ಇದನ್ನೂ ಓದಿ: ಭಲೇ ಬಟ್ಲರ್… ವಿಶ್ವ ದಾಖಲೆ ನಿರ್ಮಿಸಿದ ಜೋಸ್ ಬಟ್ಲರ್
ಇತ್ತ ಢಾಕಾದಿಂದ ಬೇರೊಂದು ನಗರಕ್ಕೆ, ಅಂದರೆ ಬಾಂಗ್ಲಾದೇಶ್ ಹಾಗೂ ಪಾಕಿಸ್ತಾನವನ್ನು ಹೊರತುಪಡಿಸಿ ಏಷ್ಯಾದ ಇತರೆ ನಗರಗಳಲ್ಲಿ ಸಭೆಯನ್ನು ಆಯೋಜಿಸಿದರೆ ಮಾತ್ರ ಬಿಸಿಸಿಐ ಭಾಗವಹಿಸಲಿದೆ. ಇಲ್ಲದಿದ್ದರೆ ಈ ಬಾರಿಯ ಏಷ್ಯಾಕಪ್ನಿಂದ ಟೀಮ್ ಇಂಡಿಯಾ ಹೊರಗುಳಿಯುವುದು ಬಹುತೇಕ ಖಚಿತ ಎನ್ನಬಹುದು.
Published On - 12:33 pm, Sat, 19 July 25
