WCL 2024: ಕೇವಲ 34 ಎಸೆತಗಳಲ್ಲಿ ಸಿಡಿಲಬ್ಬರದ ಸೆಂಚುರಿ ಸಿಡಿಸಿದ ಬೆನ್ ಡಂಕ್

Ben Dunk: 37 ವರ್ಷದ ಎಡಗೈ ದಾಂಡಿಗ ಬೆನ್ ಡಂಕ್ ಈ ಹಿಂದೆ ಆಸ್ಟ್ರೇಲಿಯಾ ಪರ 5 ಟಿ20 ಪಂದ್ಯಗಳನ್ನಾಡಿದ್ದರು. ಈ ವೇಳೆ 99 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಹಾಗೆಯೇ 2014 ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಡಂಕ್ 3 ಪಂದ್ಯಗಳಿಂದ ಕೇವಲ 40 ರನ್​ ಕಲೆಹಾಕಿದ್ದರು. ಇದಾದ ಬಳಿಕ ಅವರಿಗೆ ಐಪಿಎಲ್​ನಲ್ಲಿ ಚಾನ್ಸ್ ಸಿಕ್ಕಿರಲಿಲ್ಲ. ಇದೀಗ ಮಾಜಿ ಆಟಗಾರರ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿದ್ದಾರೆ.

WCL 2024: ಕೇವಲ 34 ಎಸೆತಗಳಲ್ಲಿ ಸಿಡಿಲಬ್ಬರದ ಸೆಂಚುರಿ ಸಿಡಿಸಿದ ಬೆನ್ ಡಂಕ್
Ben Dunk
Follow us
ಝಾಹಿರ್ ಯೂಸುಫ್
|

Updated on: Jul 11, 2024 | 7:54 AM

ನಾರ್ಥಾಂಪ್ಟನ್​ನ ಕೌಂಟಿ ಗ್ರೌಂಡ್​ನಲ್ಲಿ ನಡೆದ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL 2024) ಟೂರ್ನಿಯ 14ನೇ ಪಂದ್ಯದಲ್ಲಿ ಬೆನ್ ಡಂಕ್ (Ben Dunk) ಸ್ಪೋಟಕ ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ. ಆಸ್ಟ್ರೇಲಿಯಾ ಚಾಂಪಿಯನ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಶಾನ್ ಮಾರ್ಷ್ (22) ಹಾಗೂ ಆರೋನ್ ಫಿಂಚ್ (7) ಆಸ್ಟ್ರೇಲಿಯಾ ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು.

ಆದರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬೆನ್ ಡಂಕ್ ಇಡೀ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಆರಂಭಿಕ ಯಶಸ್ಸು ಪಡೆದಿದ್ದ ವಿಂಡೀಸ್ ಬೌಲರ್​ಗಳ ವಿರುದ್ಧ ಅಬ್ಬರಿಸಲಾರಂಭಿಸಿದ ಡಂಕ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು.

ಪರಿಣಾಮ ಬೆನ್ ಡಂಕ್ ಬ್ಯಾಟ್​ನಿಂದ ಕೇವಲ 34 ಎಸೆತಗಳಲ್ಲಿ ಶತಕ ಮೂಡಿಬಂತು. ಇದು ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಮೂಡಿಬಂದ ಅತೀ ವೇಗದ ಶತಕ ಎಂಬುದು ವಿಶೇಷ. ಇನ್ನು ಸೆಂಚುರಿ ಬೆನ್ನಲ್ಲೇ ಮತ್ತೊಂದು ಭರ್ಜರಿ ಹೊಡೆತಕ್ಕೆ ಮುಂದಾಗಿ ಬೆನ್ ಡಂಕ್ ಔಟಾದರು.

ಕೇವಲ 35 ಎಸೆತಗಳನ್ನು ಎದುರಿಸಿದ ಬೆನ್ ಡಂಕ್ 7 ಭರ್ಜರಿ ಸಿಕ್ಸ್ ಹಾಗೂ 12 ಫೋರ್​ಗಳೊಂದಿಗೆ 100 ರನ್​ಗಳಿಸಿ ನಿರ್ಗಮಿಸಿದರು. ಇದರ ನಡುವೆ ಸ್ಪೋಟಕ ಇನಿಂಗ್ಸ್ ಆಡಿದ ಡೇನಿಯಲ್ ಕ್ರಿಶ್ಚಿಯನ್ 35 ಎಸೆತಗಳಲ್ಲಿ 8 ಸಿಕ್ಸ್​ ಹಾಗೂ 11 ಫೋರ್​ ಒಳಗೊಂಡಂತೆ 99 ರನ್​ ಬಾರಿಸಿದರು. ಈ ಸಿಡಿಲಬ್ಬರದ ಇನಿಂಗ್ಸ್​ಗಳ ನೆರವಿನಿಂದ ಆಸ್ಟ್ರೇಲಿಯಾ ಚಾಂಪಿಯನ್ಸ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 274 ರನ್ ಕಲೆಹಾಕಿತು.

275 ರನ್​ಗಳ ಕಠಿಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡಕ್ಕೆ ಡ್ವೇನ್ ಸ್ಮಿತ್ ಉತ್ತಮ ಆರಂಭ ಒದಗಿಸಿದರೂ, ಕಿರ್ಕ್​ ಎಡ್ವರ್ಡ್ಸ್ (5) ಬೇಗನೆ ಔಟಾದರು. ಆ ಬಳಿಕ ಬಂದ ಚಾಡ್ವಿಕ್ ವಾಲ್ಟನ್ (4) ಸಹ ಬಂದ ವೇಗದಲ್ಲೇ ಹಿಂತಿರುಗಿದರು.

ಇನ್ನು ಜೊನಾಥನ್ ಕಾರ್ಟನ್ 27 ರನ್​ಗಳ ಕೊಡುಗೆ ನೀಡಿದರು. ಇದರ ನಡುವೆ 40 ಎಸೆತಗಳನ್ನು ಎದುರಿಸಿದ ಡ್ವೇನ್ ಸ್ಮಿತ್ 3 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ 64 ರನ್​ ಬಾರಿಸಿ ವಿಕೆಟ್ ಒಪ್ಪಿಸಿದರು.

ಅದಾಗಲೇ ಸೋಲಿನತ್ತ ಮುಖ ಮಾಡಿದ್ದ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ಪರ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಶ್ಲೆ ನರ್ಸ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. 36 ಎಸೆತಗಳನ್ನು ಎದುರಿಸಿದ ನರ್ಸ್ 7 ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ 70 ರನ್ ಸಿಡಿಸಿದರು. ಈ ಮೂಲಕ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು.

ಅಂತಿಮವಾಗಿ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 219 ರನ್​ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿತು. ಈ ಮೂಲಕ ಆಸ್ಟ್ರೇಲಿಯಾ ಚಾಂಪಿಯನ್ಸ್ ತಂಡವು 55 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ವೆಸ್ಟ್ ಇಂಡೀಸ್ ಚಾಂಪಿಯನ್ಸ್​ ಪ್ಲೇಯಿಂಗ್ 11: ಡ್ವೇನ್ ಸ್ಮಿತ್ , ಚಾಡ್ವಿಕ್ ವಾಲ್ಟನ್ (ವಿಕೆಟ್ ಕೀಪರ್) , ಕಿರ್ಕ್ ಎಡ್ವರ್ಡ್ಸ್ , ಜೇಸನ್ ಮೊಹಮ್ಮದ್ , ನವೀನ್ ಸ್ಟೀವರ್ಟ್ , ಆಶ್ಲೇ ನರ್ಸ್ , ಡೇರೆನ್ ಸ್ಯಾಮಿ (ನಾಯಕಿ) ರಾಯದ್ ಎಮ್ರಿಟ್ , ಟಿನೋ ಬೆಸ್ಟ್ , ಜೆರೋಮ್ ಟೇಲರ್ , ಫಿಡೆಲ್ ಎಡ್ವರ್ಡ್ಸ್ , ಜೊನಾಥನ್ ಕಾರ್ಟರ್.

ಇದನ್ನೂ ಓದಿ: KL Rahul: ಕೆಎಲ್ ರಾಹುಲ್ RCBಗೆ ನಾಯಕರಾಗ್ತಾರಾ?

ಆಸ್ಟ್ರೇಲಿಯಾ ಚಾಂಪಿಯನ್ಸ್ ಪ್ಲೇಯಿಂಗ್ 11: ಶಾನ್ ಮಾರ್ಷ್ , ಆರೋನ್ ಫಿಂಚ್ , ಬೆನ್ ಡಂಕ್ , ಕ್ಯಾಲಮ್ ಫರ್ಗುಸನ್ , ಟಿಮ್ ಪೈನ್ (ವಿಕೆಟ್ ಕೀಪರ್) , ಬೆನ್ ಕಟಿಂಗ್ , ಡೇನಿಯಲ್ ಕ್ರಿಶ್ಚಿಯನ್ , ಬೆನ್ ಲಾಫ್ಲಿನ್ , ಬ್ರೆಟ್ ಲೀ (ನಾಯಕ) , ನಾಥನ್ ಕೌಲ್ಟರ್-ನೈಲ್ , ಪೀಟರ್ ಸಿಡ್ಲ್ , ಕ್ಸೇವಿಯರ್ ಡೊಹರ್ಟಿ.