ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಬೆನ್ ಸ್ಟೋಕ್ಸ್ (Ben Stokes), ಜುಲೈ 18 ರಂದು ಸೋಮವಾರ ತಮ್ಮ ನಿರ್ಧಾರದಿಂದ ಎಲ್ಲರನ್ನೂ ಆಶ್ಚರ್ಯಗೊಳಿಸಿದರು. ಇಂಗ್ಲೆಂಡ ತಂಡವನ್ನು ವಿಶ್ವ ಚಾಂಪಿಯನ್ ಮಾಡಿದ ಸ್ಟೋಕ್ಸ್ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಇನ್ನಿಂಗ್ಸ್‌ನ ಅಂತ್ಯವನ್ನು ಘೋಷಿಸಿದರು. ಮಂಗಳವಾರದಂದು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದ ನಂತರ ಈ ಸ್ವರೂಪಕ್ಕೆ ವಿದಾಯ ಹೇಳುವುದಾಗಿ ಇಂಗ್ಲೆಂಡ್‌ನ ಟೆಸ್ಟ್ ನಾಯಕ ಸ್ಟೋಕ್ಸ್ ಸೋಮವಾರ ಹೇಳಿಕೆ ನೀಡಿದ್ದಾರೆ. ನಿಸ್ಸಂಶಯವಾಗಿ ಸ್ಟೋಕ್ಸ್ ಅವರ ಈ ನಿರ್ಧಾರವು ಎಲ್ಲರನ್ನು ಆಶ್ಚರ್ಯಗೊಳಿಸಿದ್ದು, ಅವರ ನಿರ್ಧಾರಕ್ಕೆ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಸ್ಟೋಕ್ಸ್ ನಿವೃತ್ತಿಯ ಬಗ್ಗೆ ಪ್ರತಿಕ್ರಿಯಿಸಿದವರಲ್ಲಿ ಮಾಜಿ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ಕೂಡ ಸೇರಿದ್ದಾರೆ.
ಭಾನುವಾರ ಜುಲೈ 17 ರಂದು ಮ್ಯಾಂಚೆಸ್ಟರ್‌ನಲ್ಲಿ ನಡೆದ ಭಾರತ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ಸೋಲನ್ನು ಎದುರಿಸಬೇಕಾಯಿತು. ಈ ಪಂದ್ಯದಲ್ಲಿ ಸ್ಟೋಕ್ಸ್‌ಗೆ ಹೆಚ್ಚಿನದನ್ನು ಮಾಡಲು ಸಾಧ್ಯವಾಗಲಿಲ್ಲ ಮತ್ತು ಬೌಲಿಂಗ್‌ನಲ್ಲಿಯೂ ಯಶಸ್ಸನ್ನು ಪಡೆಯಲಿಲ್ಲ. ಈಗ ಒಂದು ದಿನದ ನಂತರ, ಅವರು ಈ ಸ್ವರೂಪದಲ್ಲಿ ತಮ್ಮ ಆಟವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ.
ಎಲ್ಲರ ಹೃದಯ ಗೆದ್ದ ವಿರಾಟ್ ಕೊಹ್ಲಿ ಕಾಮೆಂಟ್
ಸ್ಟೋಕ್ಸ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 2019 ರ ವಿಶ್ವಕಪ್ ಟ್ರೋಫಿಯೊಂದಿಗೆ ತಮ್ಮ ಚಿತ್ರವನ್ನು ಪೋಸ್ಟ್ ಮಾಡಿ, ತಮ್ಮ ನಿವೃತ್ತಿಯ ಬಗ್ಗೆ ಸುರ್ಧೀರ್ಘ ಬರಹ ನೀಡಿದ್ದಾರೆ. ಈ ಪೋಸ್ಟ್‌ಗೆ ಅನೇಕ ಸಹ ಕ್ರಿಕೆಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಕೊಹ್ಲಿ ಕೂಡ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಕೊಹ್ಲಿ ತಮ್ಮ ಹೇಳಿಕೆಯಲ್ಲಿ, ಸ್ಟೋಕ್ಸ್ರನ್ನು ಹೊಗಳಿದ್ದಯ, ಸ್ಟೋಕ್ಸ್ ಒಬ್ಬ ಅದ್ಭುತ ಸ್ಪರ್ಧಾತ್ಮಕ ಆಟಗಾರ, ನಾನು ಇದುವರೆಗೆ ಆಡಿದವರಲ್ಲಿ ಅತ್ಯಂತ ಸ್ಪರ್ಧಾತ್ಮಕ ಆಟಗಾರ ನೀನು ಎಂದು ಸ್ಟೋಕ್ಸ್ ಬಗ್ಗೆ ಹೊಗಳಿ ಬರೆದಿದ್ದಾರೆ.
ಸ್ಟೋಕ್ಸ್ ನಿವೃತ್ತಿ ಘೋಷಿಸಲು ಕಾರಣವೇನು?
ಇಂಗ್ಲೆಂಡ್ ಪರ 104 ಏಕದಿನ ಪಂದ್ಯಗಳನ್ನು ಆಡಿರುವ 31 ವರ್ಷದ ಬೆನ್ ಸ್ಟೋಕ್ಸ್ ಸೋಮವಾರ ನಿವೃತ್ತಿ ಘೋಷಿಸಿದ್ದು, ಇನ್ನು ಮುಂದೆ ಈ ಮಾದರಿಯಲ್ಲಿ ತಮ್ಮ ತಂಡಕ್ಕಾಗಿ 100 ಪ್ರತಿಶತ ಪ್ರದರ್ಶನ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಬಿಡುವಿಲ್ಲದ ಕ್ರಿಕೆಟ್ ವೇಳಾಪಟ್ಟಿ ತಮ್ಮ ನಿರ್ಧಾರಕ್ಕೆ ಕಾರಣವೆಂದು ಸ್ಟೋಕ್ಸ್ ಉಲ್ಲೇಖಿಸಿದ್ದು, ನನ್ನ ದೇಹವು ಇನ್ನು ಮುಂದೆ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಲು ಸಿದ್ಧವಾಗಿಲ್ಲ ಎಂದು ಹೇಳಿಕೊಂಡಿದ್ದಾರೆ. ಸ್ಟೋಕ್ಸ್ ಈ ಸ್ವರೂಪದಲ್ಲಿ ಇಂಗ್ಲೆಂಡ್ ಪರ ಸುಮಾರು 3,000 ರನ್ ಗಳಿಸಿದ್ದರು. ಇದರಲ್ಲಿ 14 ಜುಲೈ 2019 ರಂದು ಅಜೇಯ 84 ರನ್ ಗಳಿಸಿ ಇಂಗ್ಲೆಂಡ್ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
Published On - 6:46 pm, Mon, 18 July 22