9 ಸಿಕ್ಸ್​, 15 ಫೋರ್: ಸ್ಪೋಟಕ ಶತಕ ಸಿಡಿಸಿ ದಾಖಲೆ ಬರೆದ ಬೆನ್ ಸ್ಟೋಕ್ಸ್

| Updated By: ಝಾಹಿರ್ ಯೂಸುಫ್

Updated on: Sep 13, 2023 | 8:55 PM

Ben Stokes: 2022 ರಲ್ಲಿ ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಿದ್ದ ಬೆನ್ ಸ್ಟೋಕ್ಸ್ ಇದೀಗ ಏಕದಿನ ವಿಶ್ವಕಪ್​ಗಾಗಿ ತಮ್ಮ ನಿವೃತ್ತಿಯನ್ನು ಹಿಂಪಡೆದಿದ್ದಾರೆ. ಕಂಬ್ಯಾಕ್  ಬಳಿಕ ಆಡಿದ 3 ಪಂದ್ಯಗಳಲ್ಲಿ 1 ಅರ್ಧಶತಕ ಹಾಗೂ 1 ಶತಕದ ಮೂಲಕ ಅಬ್ಬರಿಸಿದ್ದಾರೆ. ಈ ಮೂಲಕ ಏಕದಿನ ವಿಶ್ವಕಪ್​ಗೂ ಮುನ್ನ ಹಾಲಿ ಚಾಂಪಿಯನ್ ತಂಡದ ಸ್ಟಾರ್ ಆಲ್​ರೌಂಡರ್ ಎಚ್ಚರಿಕೆ ರವಾನಿಸಿದ್ದಾರೆ.

9 ಸಿಕ್ಸ್​, 15 ಫೋರ್: ಸ್ಪೋಟಕ ಶತಕ ಸಿಡಿಸಿ ದಾಖಲೆ ಬರೆದ ಬೆನ್ ಸ್ಟೋಕ್ಸ್
Ben Stokes
Follow us on

ಲಂಡನ್​ನ ಓವಲ್ ಮೈದಾನದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ 3ನೇ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರ ಬೆನ್ ಸ್ಟೋಕ್ಸ್ (Ben Stokes) ಸಿಡಿಲಬ್ಬರದ ಶತಕ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಕಿವೀಸ್ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಯಶಸ್ಸಿಯಾದರು.

ಪಂದ್ಯದ ಮೊದಲ ಎಸೆತದಲ್ಲೇ ಜಾನಿ ಬೈರ್​ಸ್ಟೋವ್ (0) ರನ್ನು ಶೂನ್ಯಕ್ಕೆ ಔಟ್ ಮಾಡಿದ ಬೌಲ್ಟ್ ನ್ಯೂಝಿಲೆಂಡ್​ಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಜೋ ರೂಟ್ (4) ಕೂಡ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಯಾದ ಡೇವಿಡ್ ಮಲಾನ್ ಹಾಗೂ ಬೆನ್ ಸ್ಟೋಕ್ಸ್ 3ನೇ ವಿಕೆಟ್​ಗೆ 199 ರನ್​ಗಳ ಭರ್ಜರಿ ಜೊತೆಯಾಟವಾಡಿದರು. ಈ ವೇಳೆ ಮತ್ತೆ ದಾಳಿಗಿಳಿದ ಬೌಲ್ಟ್ ಡೇವಿಡ್ ಮಲಾನ್ (96) ವಿಕೆಟ್ ಪಡೆದರು.

ಬೆನ್ ಸ್ಟೋಕ್ಸ್ ಭರ್ಜರಿ ಬ್ಯಾಟಿಂಗ್:

ಆರಂಭದಿಂದಲೇ ನ್ಯೂಝಿಲೆಂಡ್ ಬೌಲರ್​ಗಳ ಬೆಂಡೆತ್ತಿದ ಬೆನ್ ಸ್ಟೋಕ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಕೇವಲ 76 ಎಸೆತಗಳಲ್ಲಿ ಸ್ಟೋಕ್ಸ್ ಶತಕ ಪೂರೈಸಿದರು.

ಸೆಂಚುರಿ ಬೆನ್ನಲ್ಲೇ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಸ್ಟೋಕ್ಸ್​ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ತಲುಪಿಸಿದರು. ಪರಿಣಾಮ ಬೆನ್ ಸ್ಟೋಕ್ಸ್​ ಬ್ಯಾಟ್​ನಿಂದ 9 ಭರ್ಜರಿ ಸಿಕ್ಸ್ ಹಾಗೂ 15 ಫೋರ್​ಗಳು ಮೂಡಿಬಂತು. ಅಷ್ಟೇ ಅಲ್ಲದೆ 124 ಎಸೆತಗಳಲ್ಲಿ 182 ರನ್ ಬಾರಿಸಿ ಬೆನ್ ಲಿಸ್ಟರ್​ಗೆ ವಿಕೆಟ್ ಒಪ್ಪಿಸಿದರು.

ಹೊಸ ದಾಖಲೆ ಬರೆದ ಸ್ಟೋಕ್ಸ್​:

ಈ 182 ರನ್​ಗಳೊಂದಿಗೆ ಇಂಗ್ಲೆಂಡ್ ಪರ ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ಸ್ಕೋರ್​ಗಳಿಸಿದ ದಾಖಲೆ ಬೆನ್ ಸ್ಟೋಕ್ಸ್ ಪಾಲಾಯಿತು. 2017 ರಲ್ಲಿ ನ್ಯೂಝಿಲೆಂಡ್ ವಿರುದ್ಧ ಜೇಸನ್ ರಾಯ್ 180 ರನ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ ಕಂಬ್ಯಾಕ್ ಮಾಡಿದ ಮೂರನೇ ಪಂದ್ಯದಲ್ಲೇ ಬೆನ್ ಸ್ಟೋಕ್ಸ್ ಹೊಸ ದಾಖಲೆ ನಿರ್ಮಿಸಿರುವುದು ವಿಶೇಷ.

ಇತರೆ ತಂಡಗಳಿಗೆ ಎಚ್ಚರಿಕೆ:

2022 ರಲ್ಲಿ ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಿದ್ದ ಬೆನ್ ಸ್ಟೋಕ್ಸ್ ಇದೀಗ ಏಕದಿನ ವಿಶ್ವಕಪ್​ಗಾಗಿ ತಮ್ಮ ನಿವೃತ್ತಿಯನ್ನು ಹಿಂಪಡೆದಿದ್ದಾರೆ. ಕಂಬ್ಯಾಕ್  ಬಳಿಕ ಆಡಿದ 3 ಪಂದ್ಯಗಳಲ್ಲಿ 1 ಅರ್ಧಶತಕ ಹಾಗೂ 1 ಶತಕದ ಮೂಲಕ ಅಬ್ಬರಿಸಿದ್ದಾರೆ. ಈ ಮೂಲಕ ಏಕದಿನ ವಿಶ್ವಕಪ್​ಗೂ ಮುನ್ನ ಹಾಲಿ ಚಾಂಪಿಯನ್ ತಂಡದ ಸ್ಟಾರ್ ಆಲ್​ರೌಂಡರ್ ಎಚ್ಚರಿಕೆ ರವಾನಿಸಿದ್ದಾರೆ.

ಬೃಹತ್ ಮೊತ್ತ ಪೇರಿಸಿದ ಇಂಗ್ಲೆಂಡ್:

ಇನ್ನು ಈ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಅವರ ಭರ್ಜರಿ ಶತಕ ಹಾಗೂ ಡೇವಿಡ್ ಮಲಾನ್ (96) ಅವರ ಅರ್ಧಶತಕದೊಂದಿಗೆ ಇಂಗ್ಲೆಂಡ್ ತಂಡವು 48.1 ಓವರ್​ಗಳಲ್ಲಿ 368 ರನ್​ಗಳಿಸಿ ಆಲೌಟ್ ಆಗಿದೆ. ನ್ಯೂಝಿಲೆಂಡ್ ಪರ 9.1 ಓವರ್​ಗಳಲ್ಲಿ 51 ರನ್ ನೀಡಿ ಟ್ರೆಂಟ್ ಬೌಲ್ಟ್ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ಇಂಗ್ಲೆಂಡ್ ಪ್ಲೇಯಿಂಗ್ 11: ಜಾನಿ ಬೈರ್‌ಸ್ಟೋವ್ , ಡೇವಿಡ್ ಮಲಾನ್ , ಜೋ ರೂಟ್ , ಬೆನ್ ಸ್ಟೋಕ್ಸ್ , ಜೋಸ್ ಬಟ್ಲರ್ (ನಾಯಕ) , ಮೊಯೀನ್ ಅಲಿ , ಲಿಯಾಮ್ ಲಿವಿಂಗ್‌ಸ್ಟೋನ್ , ಸ್ಯಾಮ್ ಕರನ್ , ಕ್ರಿಸ್ ವೋಕ್ಸ್ , ಗಸ್ ಅಟ್ಕಿನ್ಸನ್ , ರೀಸ್ ಟೋಪ್ಲಿ.

ಇದನ್ನೂ ಓದಿ: ಕಿಂಗ್ ಕೊಹ್ಲಿಯ 1 ಶತಕಕ್ಕೆ 10 ದಾಖಲೆಗಳು ಉಡೀಸ್..!

ನ್ಯೂಝಿಲೆಂಡ್ ಪ್ಲೇಯಿಂಗ್ 11: ವಿಲ್ ಯಂಗ್ , ಡೆವೊನ್ ಕಾನ್ವೇ , ಹೆನ್ರಿ ನಿಕೋಲ್ಸ್ , ಡೇರಿಲ್ ಮಿಚೆಲ್ , ಟಾಮ್ ಲ್ಯಾಥಮ್ (ನಾಯಕ) ಗ್ಲೆನ್ ಫಿಲಿಪ್ಸ್ , ರಚಿನ್ ರವೀಂದ್ರ , ಕೈಲ್ ಜೇಮಿಸನ್ , ಲಾಕಿ ಫರ್ಗುಸನ್ , ಬೆನ್ ಲಿಸ್ಟರ್ , ಟ್ರೆಂಟ್ ಬೌಲ್ಟ್.