ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ (Ben Stokes) ಏಕದಿನ ಕ್ರಿಕೆಟ್ಗೆ ಮರಳಿದ್ದಾರೆ. 2022 ರಲ್ಲಿ ಒನ್ಡೇ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದ ಸ್ಟೋಕ್ಸ್ ಇದೀಗ ಏಕದಿನ ವಿಶ್ವಕಪ್ಗಾಗಿ ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ. ಅಲ್ಲದೆ ಮುಂಬರುವ ನ್ಯೂಝಿಲೆಂಡ್ ವಿರುದ್ಧದ ಸರಣಿಯ ಮೂಲಕ ಏಕದಿನ ಕ್ರಿಕೆಟ್ಗೆ ಕಂಬ್ಯಾಕ್ ಮಾಡಲಿದ್ದಾರೆ. ಇದರೊಂದಿಗೆ ಈ ಬಾರಿಯ ಏಕದಿನ ವಿಶ್ವಕಪ್ನಲ್ಲಿ ಬೆನ್ ಸ್ಟೋಕ್ಸ್ ಕಾಣಿಸಿಕೊಳ್ಳುವುದು ಖಚಿತವಾಗಿದೆ.
2019 ರ ಏಕದಿನ ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ಪ್ರಶಸ್ತಿ ಗೆಲುವಿನ ರೂವಾರಿ ಬೆನ್ ಸ್ಟೋಕ್ಸ್. ಏಕೆಂದರೆ ಕಳೆದ ವಿಶ್ವಕಪ್ನಲ್ಲಿ ಒಟ್ಟು 50.5 ಓವರ್‌ಗಳನ್ನು ಬೌಲ್ ಮಾಡಿದ್ದ ಸ್ಟೋಕ್ಸ್ 7 ವಿಕೆಟ್ ಕಬಳಿಸಿದ್ದರು. ಅಲ್ಲದೆ ಫೈನಲ್ನಲ್ಲಿ ಪಂದ್ಯದ ಅಜೇಯ 84 ರನ್ ಸೇರಿದಂತೆ ಒಟ್ಟು 465 ರನ್ ಗಳಿಸಿ ಇಂಗ್ಲೆಂಡ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಇದೀಗ ಮತ್ತೊಮ್ಮೆ ಏಕದಿನ ವಿಶ್ವಕಪ್ನಲ್ಲಿ ಸ್ಟೋಕ್ಸ್ ಕಣಕ್ಕಿಳಿಯಲು ಸಜ್ಜಾಗಿದ್ದು, ಇದರಿಂದ ಇಂಗ್ಲೆಂಡ್ ತಂಡವು ಮತ್ತಷ್ಟು ಬಲಿಷ್ಠವಾಗಲಿದೆ.
ಇಂಗ್ಲೆಂಡ್ ಪರ 105 ಏಕದಿನ ಪಂದ್ಯಗಳನ್ನಾಡಿರುವ ಬೆನ್ ಸ್ಟೋಕ್ಸ್ ಇದುವರೆಗೆ 2924 ರನ್ ಗಳಿಸಿದ್ದಾರೆ. ಈ ವೇಳೆ ಅವರ ಬ್ಯಾಟ್ನಿಂದ 3 ಶತಕ ಹಾಗೂ 27 ಅರ್ಧಶತಕಗಳು ಮೂಡಿಬಂದಿವೆ. ಹಾಗೆಯೇ 88 ಇನಿಂಗ್ಸ್ನಲ್ಲಿ ಬೌಲಿಂಗ್ ಮಾಡಿರುವ ಅವರು ಒಟ್ಟು 71 ವಿಕೆಟ್ಗಳನ್ನು ಕಬಳಿಸಿದ್ದಾರೆ. ಹೀಗಾಗಿಯೇ ಸ್ಟೋಕ್ಸ್ ಅವರ ಪುನರಾಗಮನ ಇಂಗ್ಲೆಂಡ್ ತಂಡದ ಮಧ್ಯಮ ಕ್ರಮಾಂಕವನ್ನು ಮತ್ತಷ್ಟು ಬಲಪಡಿಸುವುದರಲ್ಲಿ ಡೌಟೇ ಇಲ್ಲ.
ಇಂಗ್ಲೆಂಡ್ನಲ್ಲಿ ನಡೆಯಲಿರುವ ನ್ಯೂಝಿಲೆಂಡ್ ವಿರುದ್ಧದ 8 ಪಂದ್ಯಗಳ ಈ ಸರಣಿಯಲ್ಲಿ ಮೊದಲು ಟಿ20 ಮ್ಯಾಚ್ಗಳನ್ನಾಡಲಾಗುತ್ತದೆ. ಇದಾದ ಬಳಿಕ ಏಕದಿನ ಸರಣಿ ಜರುಗಲಿದೆ. ಆದರೆ ಮುಂಬರುವ ಏಕದಿನ ವಿಶ್ವಕಪ್ನ್ನು ಗಮನದಲ್ಲಿರಿಸಿ ಟಿ20 ಸರಣಿ ವೇಳೆ ಸ್ಟಾರ್ ಆಟಗಾರರಿಗೆ ವಿಶ್ರಾಂತಿ ಕಲ್ಪಿಸಲಾಗಿದೆ. ಅಲ್ಲದೆ ಸೆಪ್ಟಂಬರ್ 15 ಕ್ಕೆ ಏಕದಿನ ಸರಣಿ ಮುಗಿಯಲಿದ್ದು, ಇದಾದ ಬಳಿಕ ಇಂಗ್ಲೆಂಡ್ ಆಟಗಾರರು ಏಕದಿನ ವಿಶ್ವಕಪ್ಗಾಗಿ ಭಾರತಕ್ಕೆ ಆಗಮಿಸಲಿದ್ದಾರೆ.
ಇಂಗ್ಲೆಂಡ್ ಏಕದಿನ ತಂಡ: ಜೋಸ್ ಬಟ್ಲರ್ (ನಾಯಕ), ಮೊಯೀನ್ ಅಲಿ, ಜಾನಿ ಬೈರ್‌ಸ್ಟೋವ್, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲಾನ್, ಆದಿಲ್ ರಶೀದ್, ಜೋ ರೂಟ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ಮಾರ್ಕ್ ವುಡ್, ಕ್ರಿಸ್ ವೋಕ್ಸ್, ಗಸ್ ಅಟ್ಕಿನ್ಸನ್.
ಇಂಗ್ಲೆಂಡ್ ಟಿ20 ತಂಡ: ಜೋಸ್ ಬಟ್ಲರ್ (ನಾಯಕ), ರೆಹಾನ್ ಅಹ್ಮದ್, ಮೊಯೀನ್ ಅಲಿ, ಜಾನಿ ಬೈರ್‌ಸ್ಟೋವ್, ಹ್ಯಾರಿ ಬ್ರೂಕ್, ಸ್ಯಾಮ್ ಕರನ್, ಬೆನ್ ಡಕೆಟ್, ವಿಲ್ ಜಾಕ್ಸ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲಾನ್, ಆದಿಲ್ ರಶೀದ್, ಜೋಶ್ ಟಂಗ್, ಜಾನ್ ಟರ್ನರ್, ಲ್ಯೂಕ್ ವುಡ್, ಗಸ್ ಅಟ್ಕಿನ್ಸನ್.
ಇದನ್ನೂ ಓದಿ: ಭಾರತ ವಿಶ್ವಕಪ್ ತಂಡದಿಂದ 7 ಆಟಗಾರರು ಔಟ್..!