VIDEO: ರವೀಂದ್ರ ಜಡೇಜಾಗೆ ಬೆನ್ ಸ್ಟೋಕ್ಸ್ ಶೇಕ್ ಹ್ಯಾಂಡ್ ನೀಡಿಲ್ವಾ? ಇಲ್ಲಿದೆ ಸತ್ಯಾಂಶ

India vs England 4th Test: ಮ್ಯಾಂಚೆಸ್ಟರ್​ನಲ್ಲಿ ನಡೆದ ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ 358 ರನ್ ಕಲೆಹಾಕಿದರೆ, ಇಂಗ್ಲೆಂಡ್ ತಂಡವು 669 ರನ್​ ಗಳಿಸಿತು. ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ 4 ವಿಕೆಟ್ ಕಳೆದುಕೊಂಡು 425 ರನ್​ಗಳಿಸುವ ಮೂಲಕ ಪಂದ್ಯವನ್ನು ಡ್ರಾನಲ್ಲಿ ಕೊನೆಗೊಳಿಸುವಲ್ಲಿ ಯಶಸ್ವಿಯಾಗಿದೆ.

VIDEO: ರವೀಂದ್ರ ಜಡೇಜಾಗೆ ಬೆನ್ ಸ್ಟೋಕ್ಸ್ ಶೇಕ್ ಹ್ಯಾಂಡ್ ನೀಡಿಲ್ವಾ? ಇಲ್ಲಿದೆ ಸತ್ಯಾಂಶ
Ben Stokes - Ravindra Jadeja

Updated on: Jul 28, 2025 | 8:56 AM

ಭಾರತ ಮತ್ತು ಇಂಗ್ಲೆಂಡ್ ನಡುವಣ 4ನೇ ಟೆಸ್ಟ್ ಪಂದ್ಯವು ಶೇಕ್ ಹ್ಯಾಂಡ್ ವಿಷಯದಿಂದ ಭಾರೀ ಚರ್ಚೆಯಲ್ಲಿದೆ. ಮ್ಯಾಂಚೆಸ್ಟರ್​ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆದ ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ 358 ರನ್ ಕಲೆಹಾಕಿದರೆ, ಇಂಗ್ಲೆಂಡ್ 669 ರನ್​ ಗಳಿಸಿತು. ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ 311 ರನ್​ಗಳ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಶುರು ಮಾಡಿದ ಟೀಮ್ ಇಂಡಿಯಾ ಪಂದ್ಯವನ್ನು ಡ್ರಾಗೊಳಿಸಲು ಮುಂದಾಗಿದ್ದರು.

ಇತ್ತ ಪಂದ್ಯ ಡ್ರಾನಲ್ಲಿ ಕೊನೆಗೊಳ್ಳುವುದು ಖಚಿತವಾಗುತ್ತಿದ್ದಂ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಶೇಕ್ ಹ್ಯಾಂಡ್ ನೀಡಿ ಪಂದ್ಯ ನಿಲ್ಲಿಸಲು ಮುಂದಾಗಿದ್ದರು. ಆದರೆ ಈ ವೇಳೆ ಶತಕದಂಚಿನಲ್ಲಿದ್ದ ಟೀಮ್ ಇಂಡಿಯಾ ಆಟಗಾರರಾದ ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಶೇಕ್ ಹ್ಯಾಂಡ್ ನೀಡಿರಲಿಲ್ಲ. ಇದಾದ ಬಳಿಕ ಜಡೇಜಾ ಶತಕ ಪೂರೈಸಿದ ಬಳಿಕ ಹ್ಯಾರಿ ಬ್ರೂಕ್ ಶೇಕ್ ಕೊಡಲು ಆಗಮಿಸಿದ್ದರು. ಈ ವೇಳೆಯೂ ಟೀಮ್ ಇಂಡಿಯಾ ಆಟಗಾರರು ಪಂದ್ಯ ನಿಲ್ಲಿಸುವ ಕೋರಿಕೆಯನ್ನು ತಿರಸ್ಕರಿಸಿದ್ದರು.

ಆ ನಂತರ ವಾಷಿಂಗ್ಟನ್ ಸುಂದರ್ ಚೊಚ್ಚಲ ಶತಕ ಪೂರೈಸಿದರು. ಸುಂದರ್ ಅವರ ಸೆಂಚುರಿ ಪೂರ್ಣಗೊಳ್ಳುತ್ತಿದ್ದಂತೆ ಬೆನ್ ಸ್ಟೋಕ್ಸ್ ಶೇಕ್ ಹ್ಯಾಂಡ್ ನೀಡಲು ಮುಂದಾದರು. ಈ ವೇಳೆ ಹಸ್ತಲಾಘವ ನೀಡುವ ಮೂಲಕ ಪಂದ್ಯವನ್ನು ಡ್ರಾನಲ್ಲಿ ಕೊನೆಗೊಳಿಸಲಾಯಿತು.

ಜಡೇಜಾಗೆ ಶೇಕ್ ಹ್ಯಾಂಡ್ ನೀಡದ ಸ್ಟೋಕ್ಸ್:

ಪಂದ್ಯದ ಮುಗಿದ ಬಳಿಕ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಎಲ್ಲರಿಗೂ ಶೇಕ್ ಹ್ಯಾಂಡ್ ನೀಡಿದ್ದರು. ಆದರೆ ರವೀಂದ್ರ ಜಡೇಜಾಗೆ ಹಸ್ತಲಾಘವ ನೀಡಲು ನಿರಾಕರಿಸಿದ್ದಾರೆ ಎಂಬ ಟ್ಯಾಗ್ ಲೈನ್​ನೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಸ್ಟೋಕ್ಸ್ ಜಡೇಜಾಗೆ ಶೇಕ್ ಹ್ಯಾಂಡ್ ನೀಡದಿರುವುದು ಕಾಣಬಹುದು.

ವಾಷಿಂಗ್ಟನ್ ಸುಂದರ್​ ಜೊತೆ ಕೈಕುಲುಕಿದ ಬಳಿಕ ಸ್ಟೋಕ್ಸ್ ತನ್ನ ಸಹ ಆಟಗಾರರಿಗೆ ಶೇಕ್ ಹ್ಯಾಂಡ್ ನೀಡಿದ್ದರು. ಈ ವೇಳೆ ಜಡೇಜಾ ಎದುರಾದರೂ ಅವರು ಹಸ್ತಲಾಘವ ನೀಡಿರಲಿಲ್ಲ. ಅಲ್ಲದೆ ಇಬ್ಬರು ಅದೇನು ಮಾತನಾಡುತ್ತಿರುವುದು ಕೂಡ ವಿಡಿಯೋದಲ್ಲಿ ಕಾಣಬಹುದು.

ನಿಜಕ್ಕೂ ಸ್ಟೋಕ್ಸ್ ಶೇಕ್ ಹ್ಯಾಂಡ್ ನೀಡಿಲ್ವಾ?

ಈ ವಿಡಿಯೋದಲ್ಲಿ ಬೆನ್ ಸ್ಟೋಕ್ಸ್ ಶೇಕ್ ಹ್ಯಾಂಡ್ ನೀಡದಿರುವುದು ಸ್ಪಷ್ಟವಾಗಿ ಕಾಣಿಸಿದೆ. ಆದರೆ ಇದಕ್ಕೂ ಮುನ್ನವೇ ರವೀಂದ್ರ ಜಡೇಜಾಗೆ ಬೆನ್ ಸ್ಟೋಕ್ಸ್ ಹಸ್ತಲಾಘವ ನೀಡಿದ್ದರು ಎಂಬುದೇ ಸತ್ಯ. ಅಂದರೆ ಪಂದ್ಯ ನಿಲ್ಲಿಸಲು ಸ್ಟೋಕ್ಸ್ ಮೊದಲು ಜಡೇಜಾಗೆ ಶೇಕ್ ಹ್ಯಾಂಡ್ ನೀಡಿದ್ದರು. ಹೀಗಾಗಿಯೇ ಮತ್ತೊಮ್ಮೆ ಕೈ ಕುಲುಕಲು ಮುಂದಾಗಿರಲಿಲ್ಲ. ಇದಕ್ಕೆ ಸಾಕ್ಷಿಯಾಗಿ ಈ ಕೆಳಗಿನ ವಿಡಿಯೋ ನೋಡಬಹುದು.

ಅಂದರೆ ರವೀಂದ್ರ ಜಡೇಜಾಗೆ ಮೊದಲೇ ಶೇಕ್ ಹ್ಯಾಂಡ್ ನೀಡಿದ್ದರಿಂದ ಬೆನ್ ಸ್ಟೋಕ್ಸ್ ಮತ್ತೊಮ್ಮೆ ಹಸ್ತಲಾಘವ ನೀಡಲು ಮುಂದಾಗಿರಲಿಲ್ಲ. ಇದೇ ವಿಡಿಯೋವನ್ನು ಮುಂದಿಟ್ಟುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಬೆನ್ ಸ್ಟೋಕ್ಸ್ ರವೀಂದ್ರ ಜಡೇಜಾಗೆ ಶೇಕ್ ಹ್ಯಾಂಡ್ ನೀಡಿಲ್ಲ ಎಂಬ ಸುಳ್ಳು ಸುದ್ದಿಯನ್ನು ಹರಿಬಿಡಲಾಗಿದೆ.

 

Published On - 8:55 am, Mon, 28 July 25