IND vs SL: ಭಾರತ ಪ್ರವಾಸದಿಂದ ಸ್ಟಾರ್​ ಆಟಗಾರನಿಗೆ ಕೋಕ್; ಮಂಡಳಿ ವಿರುದ್ಧ ರಸ್ತೆಗಿಳಿದು ಪ್ರತಿಭಟಿಸಿದ ಫ್ಯಾನ್ಸ್

| Updated By: ಪೃಥ್ವಿಶಂಕರ

Updated on: Feb 23, 2022 | 10:38 PM

Bhanuka Rajapaksa: ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಭಾರತ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ 19 ಸದಸ್ಯರ ತಂಡದಲ್ಲಿ ಎಡಗೈ ಬ್ಯಾಟ್ಸ್‌ಮನ್ ಭಾನುಕಾ ರಾಜಪಕ್ಸೆ ಅವರನ್ನು ಆಯ್ಕೆ ಮಾಡಿಲ್ಲ. ಮಂಡಳಿ ತೆಗೆದುಕೊಂಡ ನಿರ್ಧಾರ ಅಭಿಮಾನಿಗಳಿಗೆ ಇಷ್ಟವಾಗದ ಕಾರಣ ರಸ್ತೆಗಿಳಿದಿದ್ದಾರೆ.

IND vs SL: ಭಾರತ ಪ್ರವಾಸದಿಂದ ಸ್ಟಾರ್​ ಆಟಗಾರನಿಗೆ ಕೋಕ್; ಮಂಡಳಿ ವಿರುದ್ಧ ರಸ್ತೆಗಿಳಿದು ಪ್ರತಿಭಟಿಸಿದ ಫ್ಯಾನ್ಸ್
ಲಂಕಾ ಕ್ರಿಕೆಟ್ ಅಭಿಮಾನಿಗಳು
Follow us on

ಶ್ರೀಲಂಕಾ ಕ್ರಿಕೆಟ್ ತಂಡ (Sri Lankan cricket team) ಪ್ರಸ್ತುತ ಭಾರತ ಪ್ರವಾಸದಲ್ಲಿದೆ (IND vs SL). ಪ್ರವಾಸವು ಫೆಬ್ರವರಿ 24 ರಂದು ಮೊದಲ T20 ಯೊಂದಿಗೆ ಪ್ರಾರಂಭವಾಗುತ್ತದೆ. ಮೂರು ಪಂದ್ಯಗಳ T20 ಸರಣಿಯ ನಂತರ ಎರಡೂ ತಂಡಗಳು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿವೆ. ಶ್ರೀಲಂಕಾ ಕ್ರಿಕೆಟ್ ಮಂಡಳಿ (SLC) ತಂಡವನ್ನು ಪ್ರಕಟಿಸಿದೆ. ಭಾನುಕಾ ರಾಜಪಕ್ಸೆ ಅವರನ್ನು ತಂಡದಲ್ಲಿ ಆಯ್ಕೆ ಮಾಡದ ಕಾರಣ ಶ್ರೀಲಂಕಾ ಅಭಿಮಾನಿಗಳು ಕೋಪಗೊಂಡಿದ್ದಾರೆ. ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಭಾರತ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ 19 ಸದಸ್ಯರ ತಂಡದಲ್ಲಿ ಎಡಗೈ ಬ್ಯಾಟ್ಸ್‌ಮನ್ ಭಾನುಕಾ ರಾಜಪಕ್ಸೆ ಅವರನ್ನು ಆಯ್ಕೆ ಮಾಡಿಲ್ಲ. ಮಂಡಳಿ ತೆಗೆದುಕೊಂಡ ನಿರ್ಧಾರ ಅಭಿಮಾನಿಗಳಿಗೆ ಇಷ್ಟವಾಗದ ಕಾರಣ ರಸ್ತೆಗಿಳಿದಿದ್ದಾರೆ. ಜೊತೆಗೆ ತಮ್ಮ ನೆಚ್ಚಿನ ಬ್ಯಾಟ್ಸ್‌ಮನ್‌ಗಾಗಿ ಶ್ರೀಲಂಕಾ ಕ್ರಿಕೆಟ್ ಪ್ರಧಾನ ಕಚೇರಿ ಎದುರು ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಆಯ್ಕೆಯಾಗದಿರಲು ಕಾರಣ

ಟೀಮ್ ಇಂಡಿಯಾ ವಿರುದ್ದ ಟಿ20 ಸರಣಿಗಾಗಿ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗಿದ್ದು, 18 ಸದಸ್ಯರ ಈ ಬಳಗದಲ್ಲಿ ಸ್ಟಾರ್ ಆಟಗಾರ ಭಾನುಕಾ ರಾಜಪಕ್ಸೆ ಸ್ಥಾನ ಪಡೆದಿಲ್ಲ ಎಂಬುದು ವಿಶೇಷ. ಏಕೆಂದರೆ ಭಾನುಕಾ ರಾಜಪಕ್ಸೆಯನ್ನು ಈ ಬಾರಿ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡವು 50 ಲಕ್ಷ ರೂ. ನೀಡಿ ಖರೀದಿಸಿತ್ತು. ಆದರೆ ಇದೀಗ ಶ್ರೀಲಂಕಾ ತಂಡದಲ್ಲೇ ಭಾನುಕಾಗೆ ಅವಕಾಶ ಸಿಕ್ಕಿಲ್ಲ. ಕಳಪೆ ಫಿಟ್​ನೆಸ್ ಹೊಂದಿರುವ ಕಾರಣ ಭಾನುಕಾ ರಾಜಪಕ್ಸೆಯನ್ನು ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ. ಆದರೆ ಇತ್ತ ಪಂಜಾಬ್ ಕಿಂಗ್ಸ್ ತಂಡವು 50 ಲಕ್ಷ ರೂ. ನೀಡಿ ಲಂಕಾ ಆಟಗಾರನನ್ನು ಖರೀದಿಸಿದೆ.

ಭಾನುಕಾ ರಾಜಪಕ್ಸೆ ಶ್ರೀಲಂಕಾ ತಂಡದ ಆಯ್ಕೆಗಿರುವ ಫಿಟ್‌ನೆಸ್ ಮಾರ್ಗಸೂಚಿಗಳನ್ನು ಪೂರೈಸಲು ವಿಫಲವಾಗಿದ್ದಾರೆ. ‘ಸ್ಕಿನ್‌ಫೋಲ್ಡ್’ ಮಟ್ಟದ ಪರೀಕ್ಷೆಯಲ್ಲಿ ವಿಫಲವಾಗಿದ್ದಾರೆ. ಹೀಗಾಗಿ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ ಎಂದು ವರದಿಯಾಗಿದೆ. ಕೇವಲ 15 ಟಿ20 ಇನ್ನಿಂಗ್ಸ್‌ಗಳನ್ನು ಆಡಿರುವ 30 ವರ್ಷದ ರಾಜಪಕ್ಸೆ ಇದುವರೆಗೆ 320 ರನ್ ಗಳಿಸಿದ್ದಾರೆ. ವಿಶೇಷ ಎಂದರೆ ಈ ಬಾರಿ ಐಪಿಎಲ್ ಮೆಗಾ ಹರಾಜಿನಲ್ಲಿ ಬಿಡ್ ಆದ ಏಕೈಕ ಶ್ರೀಲಂಕಾ ಬ್ಯಾಟ್ಸ್​ಮನ್​ ಕೂಡ ಭಾನುಕಾ. ಇದೀಗ ಐಪಿಎಲ್​ಗೂ ಮುನ್ನ ಭಾರತದಲ್ಲಿ ನಡೆಯಲಿರುವ ಸರಣಿಗೆ ಲಂಕಾ ಬ್ಯಾಟ್ಸ್​ಮನ್​ಗೆ ಅವಕಾಶ ಸಿಗದಿರುವುದು ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ಚಿಂತೆಯನ್ನು ಹೆಚ್ಚಿಸಿದೆ.

ಭಾನುಕಾ ರಾಜಪಕ್ಸೆ ಅಂತರಾಷ್ಟ್ರೀಯ ವೃತ್ತಿಜೀವನ

2021 ರ ಟಿ 20 ವಿಶ್ವಕಪ್‌ನಲ್ಲಿ ಅವರ ಅದ್ಭುತ ಪ್ರದರ್ಶನದ ನಂತರ ಭಾನುಕಾ ರಾಜಪಕ್ಸೆ ಬೆಳಕಿಗೆ ಬಂದರು. ಅವರು ನವೆಂಬರ್ 2021 ರಲ್ಲಿ ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಆಡಿದರು. ಅವರು ಇಲ್ಲಿಯವರೆಗೆ ಶ್ರೀಲಂಕಾಕ್ಕಾಗಿ ಐದು ODI ಮತ್ತು 18 T20I ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 89 ರನ್ ಮತ್ತು ಟಿ20ಯಲ್ಲಿ 320 ರನ್ ಗಳಿಸಿದ್ದಾರೆ.

ನಿವೃತ್ತಿ

ಎಡಗೈ ಬ್ಯಾಟ್ಸ್‌ಮನ್ ಭಾನುಕಾ ರಾಜಪಕ್ಸೆ ಈ ವರ್ಷದ ಜನವರಿ 5 ರಂದು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್ ನಿವೃತ್ತಿ ಘೋಷಿಸಿದ್ದರು. ಆದಾಗ್ಯೂ, ಕೆಲವು ದಿನಗಳ ನಂತರ ತಮ್ಮ ನಿರ್ಧಾರದಿಂದ ಅವರು ಯು-ಟರ್ನ್ ತೆಗೆದುಕೊಂಡರು. ಆದರೆ, ಪ್ರಸಕ್ತ ಸರಣಿಗೆ ಅವರನ್ನು ಮಂಡಳಿ ಆಯ್ಕೆ ಮಾಡಿರಲಿಲ್ಲ. ಇದರಿಂದ ಅಭಿಮಾನಿಗಳು ರಸ್ತೆಗಿಳಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:Bhanuka Rajapaksa: ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದ ಶ್ರೀಲಂಕಾ ಕ್ರಿಕೆಟರ್ ಭಾನುಕಾ ರಾಜಪಕ್ಸೆ