ಈ ಬಾರಿಯ ಬಿಗ್ ಬ್ಯಾಷ್ ಲೀಗ್ ಹಲವು ಕಾರಣಗಳಿಂದ ವಿಶೇಷವಾಗಿದೆ. ಒಂದೆಡೆ ಆಟಗಾರರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡರೂ, ಟೂರ್ನಿಯನ್ನು ಮುಂದುವರೆಸಲು ಆಯೋಜಕರು ಯಶಸ್ವಿಯಾಗಿದ್ದಾರೆ. ಇನ್ನೊಂದೆಡೆ ಈ ಟೂರ್ನಿಯ ಮೇಲೆ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ನ ಮಾಲೀಕರು ಕಣ್ಣಿಟ್ಟಿದ್ದಾರೆ. ಏಕೆಂದರೆ ಬಿಗ್ ಬ್ಯಾಷ್ ಲೀಗ್ ಮುಕ್ತಾಯದ ಬೆನ್ನಲ್ಲೇ ಐಪಿಎಲ್ ಮೆಗಾ ಹರಾಜು ಕೂಡ ನಡೆಯಲಿದೆ. ಹೀಗಾಗಿ ಬಿಬಿಎಲ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಐಪಿಎಲ್ನಲ್ಲಿ ಸ್ಥಾನ ಸಿಗುವುದು ಖಚಿತ ಎಂದೇ ಹೇಳಬಹುದು. ಇದೀಗ ಇಂಗ್ಲೆಂಡ್ನ ಯುವ ಆಟಗಾರ ಜೋ ಮೈಕೆಲ್ ಕ್ಲಾರ್ಕ್ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದು ಕೂಡ ಸ್ಥಿರ ಪ್ರದರ್ಶನದ ಮೂಲಕ ಎಂಬುದು ವಿಶೇಷ.
ಹೌದು, ಜೋ ಮೈಕಲ್ ಕ್ಲಾರ್ಕ್ ಬಿಬಿಎಲ್ನಲ್ಲಿ ತನ್ನ ಬ್ಯಾಟಿಂಗ್ ಆರ್ಭಟವನ್ನು ಮುಂದುವರೆಸಿದ್ದಾರೆ. ಸತತ ನಾಲ್ಕು ಅರ್ಧಶತಕಗಳನ್ನು ಬಾರಿಸುವ ಮೂಲಕ 25 ವರ್ಷದ ಬ್ಯಾಟರ್ ಇದೀಗ ಬಿಗ್ ಬ್ಯಾಷ್ ಲೀಗ್ನಲ್ಲಿ ಹೊಸ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಸೋಮವಾರ ಮೆಲ್ಬೋರ್ನ್‌ನಲ್ಲಿ ನಡೆದ ಪಂದ್ಯದಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ಪರ ಅಮೋಘ ಆಟ ಪ್ರದರ್ಶಿಸಿದ ಜೋ ಮೈಕೆಲ್ ಕ್ಲಾರ್ಕ್ ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧದ ಗೆಲ್ಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅಡಿಲೇಡ್ ನೀಡಿದ 140 ರನ್‌ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಮೆಲ್ಬೋರ್ನ್ ಸ್ಟಾರ್ಸ್ ತಂಡವು ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆರಂಭದಲ್ಲೇ ಮೊದಲ ಮೂರು ವಿಕೆಟ್ ಕಳೆದುಕೊಂಡರೂ, ಮತ್ತೊಂದೆಡೆ ಆರಂಭಿಕನಾಗಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಜೋ ಮೈಕೆಲ್ ಕ್ಲಾರ್ಕ್ 58 ಎಸೆತಗಳ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 83 ರನ್ ಬಾರಿಸಿದರು. ಅಲ್ಲದೆ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಿದ್ದರು. ಈ ಮೂಲಕ ಮೆಲ್ಬೋರ್ನ್ ಸ್ಟಾರ್ಸ್ ತಂಡಕ್ಕೆ ಜಯ ತಂದುಕೊಟ್ಟು ಗೆಲುವಿನ ರೂವಾರಿ ಎನಿಸಿಕೊಂಡರು.
ಇದಕ್ಕೂ ಮುನ್ನ ಪರ್ತ್ ಸ್ಕಾರ್ಚರ್ಸ್ ತಂಡದ ವಿರುದ್ಧ 52 ರನ್ ಗಳಿಸಿದ್ದರು. ಹಾಗೆಯೇ ಬ್ರಿಸ್ಬೇನ್ ಹೀಟ್ ವಿರುದ್ಧದ ಪಂದ್ಯದಲ್ಲಿ 85 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಹಾಗೆಯೇ ಹೋಬರ್ಟ್ ಹರಿಕೇನ್ಸ್ ವಿರುದ್ಧದ ಪಂದ್ಯದಲ್ಲೂ 52 ರನ್‌ಗಳ ಕೊಡುಗೆ ನೀಡಿದ್ದರು. ಇದೀಗ ಅಡಿಲೇಡ್ ಸ್ಟ್ರೈಕರ್ಸ್ ವಿರುದ್ದ 83 ರನ್ ಬಾರಿಸುವ ಮೂಲಕ ಬ್ಯಾಕ್ ಟು ಬ್ಯಾಕ್ 4 ಹಾಫ್ ಸೆಂಚುರಿ ಸಿಡಿಸಿದ್ದಾರೆ.
ಇಂಗ್ಲೆಂಡ್ ಆಟಗಾರನಾಗಿರುವ ಜೋ ಮೈಕಲ್ ಕ್ಲಾರ್ಕ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 93 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 18 ಶತಕಗಳು, 23 ಅರ್ಧ ಶತಕಗಳೊಂದಿಗೆ ಒಟ್ಟು 5609 ರನ್ ಬಾರಿಸಿದ್ದಾರೆ. ಹಾಗೆಯೇ 101 ಟಿ20 ಪಂದ್ಯಗಳಲ್ಲಿ 3 ಶತಕ ಹಾಗೂ 16 ಅರ್ಧ ಶತಕ ಸಿಡಿಸಿದ್ದಾರೆ. ಇದಾಗ್ಯೂ ಇಂಗ್ಲೆಂಡ್ ಪರ ಆಡುವ ಅವಕಾಶ ಇನ್ನೂ ಸಿಕ್ಕಿಲ್ಲ. ಇದೀಗ ಬಿಬಿಎಲ್ನಲ್ಲಿ ಅಬ್ಬರಿಸಿರುವ ಜೋ ಮೈಕೆಲ್ ಕ್ಲಾರ್ಕ್ ಐಪಿಎಲ್ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳುವುದು ಖಚಿತ ಎನ್ನಲಾಗಿದೆ. ಹೀಗಾಗಿ ಜೋ ಮೈಕೆಲ್ ಕ್ಲಾರ್ಕ್ಗಾಗಿ ಮೆಗಾ ಹರಾಜಿನಲ್ಲಿ ಪೈಪೋಟಿ ಕಂಡು ಬಂದರೂ ಅಚ್ಚರಿಪಡಬೇಕಿಲ್ಲ.
ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್
ಇದನ್ನೂ ಓದಿ: Sachin Tendulkar: ಆಲ್ ಟೈಮ್ ಬೆಸ್ಟ್ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: Steve Smith: 11 ಶತಕ, 11 ಅರ್ಧಶತಕ: ವಿಶೇಷ ದಾಖಲೆ ಬರೆದ ಸ್ಟೀವ್ ಸ್ಮಿತ್
ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!
(Big Bash League: Joe Michael Clarke Hits Consecutive 4th Half Century)