
ಐಪಿಎಲ್ ಇತಿಹಾಸದ ದಿಗ್ಗಜ ನಾಯಕ ಮಹೇಂದ್ರ ಸಿಂಗ್ ಧೋನಿ, ಮುಂಬರುವ IPL 2027ರ ಆವೃತ್ತಿಯಲ್ಲಿ ಕಣಕ್ಕಿಳಿಯುವುದು ಅನುಮಾನವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಆಡುವ ಹನ್ನೊಂದರ ಬಳಗದಲ್ಲಿ ಧೋನಿ ಕಾಣಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ ಎಂಬ ವರದಿಗಳು ಕ್ರಿಕೆಟ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಕೋಟ್ಯಂತರ ಅಭಿಮಾನಿಗಳಿಗೆ ಶಾಕ್ ನೀಡಿವೆ. ಇದರ ಬೆನ್ನಲ್ಲೇ, ‘ಕ್ಯಾಪ್ಟನ್ ಕೂಲ್’ ಈ ಬಾರಿಯ ಐಪಿಎಲ್‌ಗೂ ಮುನ್ನವೇ ನಿವೃತ್ತಿ ಘೋಷಿಸುವ ಸಾಧ್ಯತೆ ದಟ್ಟವಾಗಿದೆ.
ಇಂದು (ನವೆಂಬರ್ 17, 2026) ಎಲ್ಲಾ 10 ಐಪಿಎಲ್ ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಮತ್ತು ಬಿಡುಗಡೆ ಮಾಡಿರುವ ಆಟಗಾರರ ಅಧಿಕೃತ ಪಟ್ಟಿಯನ್ನು ಸಲ್ಲಿಸಲು ಕೊನೆಯ ದಿನವಾಗಿದೆ. ಡಿಸೆಂಬರ್ 16ರಂದು ಗೋವಾದಲ್ಲಿ ಮಿನಿ ಹರಾಜು ನಡೆಯಲಿದ್ದು, ಇಂದು ಸಂಜೆ ಪ್ರಕಟವಾಗಲಿರುವ ಸಿಎಸ್‌ಕೆ ತಂಡದ ರಿಟೆನ್ಷನ್ ಪಟ್ಟಿಯು ಧೋನಿ ಅವರ ಭವಿಷ್ಯದ ಬಗ್ಗೆ ಸ್ಪಷ್ಟ ಚಿತ್ರಣ ನೀಡಲಿದೆ.
ಒಂದು ವೇಳೆ ಧೋನಿ ಆಟಗಾರನಾಗಿ ನಿವೃತ್ತಿ ಘೋಷಿಸಿದರೂ, ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಅವರು ದೂರವಾಗುವುದಿಲ್ಲ. ತಂಡದ ಸಿಇಒ ಕಾಶಿ ವಿಶ್ವನಾಥನ್ ಅವರು ಧೋನಿ ಚೆಪಾಕ್ ಮೈದಾನದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ವಿದಾಯದ ಪಂದ್ಯವಾಡಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಅವರು ಮೈದಾನಕ್ಕಿಳಿಯಲು ಸಾಧ್ಯವಾಗದಿದ್ದರೆ, ಕೋಚ್ ಝಹೀರ್ ಖಾನ್ ಅವರೊಂದಿಗೆ ಸಿಎಸ್‌ಕೆ ತಂಡದ ಮೆಂಟರ್ ಅಥವಾ ಕೋಚಿಂಗ್ ಬಳಗದಲ್ಲಿ ಹೊಸ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: 15 ಮಿ.ಮೀ ಪಿಚ್… ಟೀಮ್ ಇಂಡಿಯಾಗೆ ಅಗ್ನಿಪರೀಕ್ಷೆ!
ಒಟ್ಟಿನಲ್ಲಿ, ಮಹೇಂದ್ರ ಸಿಂಗ್ ಧೋನಿ ಅವರ ನಿವೃತ್ತಿಯ ಕುರಿತಾದ ಈ ಸುದ್ದಿ ಸದ್ಯಕ್ಕೆ ವದಂತಿಯ ಹಂತದಲ್ಲಿದ್ದರೂ, ಕ್ರಿಕೆಟ್ ವಲಯದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ಇಂದು ಸಂಜೆ ಪ್ರಕಟವಾಗಲಿರುವ ಸಿಎಸ್‌ಕೆ ತಂಡದ ರಿಟೆನ್ಷನ್ ಪಟ್ಟಿಯೊಂದಿಗೆ ಈ ಎಲ್ಲಾ ಕುತೂಹಲಗಳಿಗೆ ಅಧಿಕೃತ ತೆರೆ ಬೀಳಲಿದೆ.
Published On - 7:39 am, Tue, 17 November 26