ವಿರಾಟ್ ಕೊಹ್ಲಿ (Virat Kohli) ನೇತೃತ್ವದ ಟೀಮ್ ಇಂಡಿಯಾ (Team India) ಆಟಗಾರರು ಪ್ರಸ್ತುತ ಇಂಗ್ಲೆಂಡ್ (England) ಪ್ರವಾಸದಲ್ಲಿದ್ದಾರೆ. ಈ ಸರಣಿ ಬೆನ್ನಲ್ಲೇ ಐಪಿಎಲ್ (IPL 2021) ಆಟಗಾರರು ಯುಎಇಗೆ ಪ್ರಯಾಣ ಬೆಳೆಸಲಿದ್ದಾರೆ. ಇದರ ಬೆನ್ನಲ್ಲೇ ಟಿ20 ವಿಶ್ವಕಪ್ (T20 World Cup) ಕೂಡ ಆರಂಭವಾಗಲಿದೆ. ಹೀಗಾಗಿ ತಂಡದ ಪ್ರಮುಖ ಆಟಗಾರರು ಫಿಟ್ನೆಸ್ ಮೇಲೆ ಗಮನಹರಿಸಿದ್ದಾರೆ. ಇನ್ನು ವಿಶ್ವಕಪ್ಗಾಗಿ ಆಯ್ಕೆ ಮಾಡಲಾಗುವ 18 ಸದಸ್ಯರ ಟೀಮ್ ಇಂಡಿಯಾದಲ್ಲಿ ಯಾರಿಗೆಲ್ಲಾ ಸ್ಥಾನ ಸಿಗಲಿದೆ ಎಂಬುದು ಕೂಡ ಈಗ ಚರ್ಚಾ ವಿಷಯವಾಗಿದೆ. ಏಕೆಂದರೆ ಒಂದೆಡೆ ಶ್ರೇಯಸ್ ಅಯ್ಯರ್ (Shreyas Iyer) ಗಾಯದಿಂದ ಈಗಷ್ಟೇ ಚೇತರಿಸಿಕೊಂಡಿದ್ದರೆ, ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ (Hardik Pandya) ಫಿಟ್ನೆಸ್ ಮೇಲೆ ಅನುಮಾನಗಳಿವೆ. ಅದರಲ್ಲೂ ಪಾಂಡ್ಯ ಶ್ರೀಲಂಕಾ ವಿರುದ್ದದ ಸರಣಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಹ ಸಾಧ್ಯವಾಗಿರಲಿಲ್ಲ. ಇದಾಗ್ಯೂ ಟೀಮ್ ಇಂಡಿಯಾ ಟಿ20 ತಂಡಕ್ಕೆ ಆಲ್ರೌಂಡರ್ ಸ್ಥಾನದಲ್ಲಿ ಪಾಂಡ್ಯ ಅನಿವಾರ್ಯ.
ಇತ್ತ ಹಾರ್ದಿಕ್ ಪಾಂಡ್ಯ ಕೂಡ ತಂಡದಲ್ಲಿ ಸ್ಥಾನ ಪಡೆಯಲು ಕಸರತ್ತನ್ನು ಆರಂಭಿಸಿದ್ದಾರೆ. ಅದರಂತೆ ಲಂಕಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಆಗಿದ್ದ ಪರಸ್ ಮಾಂಬ್ರೆ ಸಲಹೆಯಂತೆ ಬೌಲಿಂಗ್ ಅಭ್ಯಾಸ ನಡೆಸುತ್ತಿದ್ದಾರೆ. ವಿಶ್ವಕಪ್ಗೆ ಇನ್ನೂ ಕೂಡ ದಿನಗಳಿದ್ದು, ಇದೀಗ ಪಾಂಡ್ಯ ಬ್ಯಾಟಿಂಗ್ ಜೊತೆ ಬೌಲಿಂಗ್ ಅಭ್ಯಾಸವನ್ನು ಆರಂಭಿಸಿದ್ದಾರೆ. ಇದಾಗ್ಯೂ ಅವರ ಓವರ್‌ಗಳ ಸಂಖ್ಯೆಯಲ್ಲಿ ಯಾವುದೇ ಒತ್ತಡ ಹೇರಲಾಗುತ್ತಿಲ್ಲ ಎಂದು ಮಾಂಬ್ರೆ ತಿಳಿಸಿದ್ದಾರೆ.
ಬೌಲಿಂಗ್ನಲ್ಲಿ ಪಾಂಡ್ಯ ನಿಧಾನವಾಗಿ ಟ್ರ್ಯಾಕ್ಗೆ ಮರಳುತ್ತಿದ್ದು, ಬ್ಯಾಟಿಂಗ್ ಜೊತೆ ಬೌಲಿಂಗ್ ಪ್ರದರ್ಶನ ಸೇರಿದರೆ ಆತ ಬೇರೆ ಮಟ್ಟ ಆಟಗಾರನಾಗುತ್ತಾನೆ. ಹೀಗಾಗಿ ಪ್ರತಿಯೊಂದು ಅಂಶವನ್ನು ಇಲ್ಲಿ ಕೇಂದ್ರಿಕರಿಸಿ ಅಭ್ಯಾಸ ನಡೆಸಲಾಗುತ್ತಿದೆ. ಖಂಡಿತವಾಗಿಯೂ ಹಾರ್ದಿಕ್ ಪಾಂಡ್ಯ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸವಿದೆ ಎಂದು ಮಾಂಬ್ರೆ ತಿಳಿಸಿದ್ದಾರೆ.
ಬೆನ್ನು ನೋವಿನಿಂದ ಬಳಲುತ್ತಿರುವ ಹಾರ್ದಿಕ್ ಪಾಂಡ್ಯ 2019 ರ ವಿಶ್ವಕಪ್ ಬಳಿಕ ಬೌಲಿಂಗ್ ಮಾಡುತ್ತಿರಲಿಲ್ಲ. ಇದಾಗ್ಯೂ ಆಸ್ಟ್ರೇಲಿಯಾ ಪ್ರವಾಸದ ವೇಳೆ ಒಂದೆರೆಡು ಓವರ್ಗಳನ್ನು ಎಸೆದಿದ್ದರು. ಇದೀಗ ಬೌಲಿಂಗ್ ಮಾಡದ ಕಾರಣ ಟೆಸ್ಟ್ ತಂಡದಿಂದ ಪಾಂಡ್ಯ ಸ್ಥಾನ ಕಳೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಶ್ರೀಲಂಕಾ ಪ್ರವಾಸದಲ್ಲಿ ಏಕದಿನ ಸರಣಿಯಲ್ಲಿ 3 ಪಂದ್ಯಗಳಲ್ಲಿ ಮಾಡಿದ್ದು ಕೇವಲ 14 ಓವರ್ ಮಾತ್ರ. ಹಾಗೆಯೇ ಟಿ20ಯಲ್ಲಿ ಬೌಲಿಂಗ್ ಮಾಡಿದರೂ, ಸಂಪೂರ್ಣ 4 ಓವರ್ ಎಸೆಯುವ ಪ್ರಯತ್ನ ಮಾಡಿರಲಿಲ್ಲ. ಇದೀಗ ಟಿ20 ವಿಶ್ವಕಪ್ ತಂಡಕ್ಕೆ ಪಾಂಡ್ಯ ಆಯ್ಕೆ ಆಗಬೇಕಿದ್ದರೆ ಆಲ್ರೌಂಡರ್ ಪ್ರದರ್ಶನ ನೀಡಲೇಬೇಕು. ಹೀಗಾಗಿ ಮತ್ತೆ ಬೌಲಿಂಗ್ನತ್ತ ಹೆಚ್ಚು ಗಮನಹರಿಸುತ್ತಿದ್ದು, ಈ ಮೂಲಕ ಆಲ್ರೌಂಡರ್ ಆಗಿ ಮತ್ತೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾ ಹಾರ್ದಿಕ್ ಪಾಂಡ್ಯ.
ಇದನ್ನೂ ಓದಿ:Afghanistan Crisis: ತಾಲಿಬಾನ್ ಗ್ಯಾಂಗ್ ಜೊತೆ ಕಾಣಿಸಿಕೊಂಡ ಅಫ್ಘಾನಿಸ್ತಾನ್ ಕ್ರಿಕೆಟಿಗ
ಇದನ್ನೂ ಓದಿ: 17 ವರ್ಷದ ಹುಡುಗಿಗೆ 35 ವರ್ಷದವನ ಜೊತೆ ಲವ್ವಿ-ಡವ್ವಿ: ಲಾಡ್ಜ್ನಲ್ಲಿ ಇಬ್ಬರನ್ನು ನೋಡಿ ಬೆಚ್ಚಿಬಿದ್ದ ಸಿಬ್ಬಂದಿ
ಇದನ್ನೂ ಓದಿ: Tim David: Rcb ತಂಡ ಸಿಂಗಾಪೂರ್ ಕ್ರಿಕೆಟಿಗನನ್ನು ಆಯ್ಕೆ ಮಾಡಿದ್ದು ಯಾಕೆ? ಇಲ್ಲಿದೆ ಉತ್ತರ
Published On - 5:55 pm, Sun, 22 August 21