ಬಿಹಾರ ಚುನಾವಣೆಯಲ್ಲಿ ರಾರಾಜಿಸಲಿದ್ದಾರೆ 14 ವರ್ಷದ ವೈಭವ್ ಸೂರ್ಯವಂಶಿ
Vaibhav Suryavanshi: 14 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ, ಬಿಹಾರ ವಿಧಾನಸಭಾ ಚುನಾವಣೆಗೆ ಚುನಾವಣಾ ಆಯೋಗದಿಂದ 'ಭವಿಷ್ಯದ ಮತದಾರರ ಐಕಾನ್' ಆಗಿ ನೇಮಕಗೊಂಡಿದ್ದಾರೆ. ಯುವಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ವೈಭವ್ ಅವರು ಜನರಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ ಚಲಾಯಿಸುವಂತೆ ವಿಶೇಷ ಮನವಿ ಮಾಡಿದ್ದಾರೆ, ಇದು ಬಿಹಾರದಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಸಹಾಯಕವಾಗಿದೆ.

ಭಾರತದ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ( Vaibhav Suryavanshi) ಚಿಕ್ಕ ವಯಸ್ಸಿನಲ್ಲಿಯೇ ತಮ್ಮದೇ ಆದ ಛಾಪು ಮೂಡಿಸಿಕೊಂಡಿದ್ದಾರೆ. ಕೇವಲ 14 ವರ್ಷ ವಯಸ್ಸಿನಲ್ಲೇ, ಅತ್ಯಂತ ಅನುಭವಿ ಬೌಲರ್‌ಗಳ ಮೇಲೂ ಸಿಕ್ಸರ್‌ಗಳನ್ನು ಸಿಡಿಸುವುದರಲ್ಲಿ ಹೆಸರುವಾಸಿಯಾಗಿರುವ ವೈಭವ್ ತಮ್ಮ ಬ್ಯಾಟಿಂಗ್ ಪರಾಕ್ರಮದಿಂದ ಈಗಾಗಲೇ ವಿಶ್ವ ಕ್ರಿಕೆಟ್ನಲ್ಲಿ ಸಂಚಲನ ಮೂಡಿಸಿದ್ದಾರೆ. ಇದಕ್ಕೆ ಪೂರಕವಾಗಿ ಕೆಲವೇ ದಿನಗಳ ಹಿಂದೆ ಆರಂಭವಾಗಿರುವ ದೇಶಿ ಟೂರ್ನಿ ರಣಜಿಯಲ್ಲಿ ಬಿಹಾರ ತಂಡದ ಉಪನಾಯಕತ್ವವಹಿಸಿಕೊಂಡಿರುವ ವೈಭವ್ ಸೂರ್ಯವಂಶಿಗೆ ಇದೀಗ ಬಿಹಾರದಲ್ಲಿ ದೊಡ್ಡ ಜವಾಬ್ದಾರಿ ಸಿಕ್ಕಿದೆ. ಈ 14 ವರ್ಷದ ಪೋರನನ್ನು ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ (Bihar Assembly Elections) ಚುನಾವಣ ಐಕಾನ್ ಆಗಿ ನೇಮಕ ಮಾಡಲಾಗಿದೆ.
ವೈಭವ್ ಸೂರ್ಯವಂಶಿಗೆ ದೊಡ್ಡ ಜವಾಬ್ದಾರಿ
ಬಿಹಾರ ವಿಧಾನಸಭಾ ಚುನಾವಣೆಯ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸಲು ಚುನಾವಣಾ ಆಯೋಗವು ಒಂದು ಪ್ರಮುಖ ಹೆಜ್ಜೆ ಇಟ್ಟಿದೆ. ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರನ್ನು “ಭವಿಷ್ಯದ ಮತದಾರರ ಐಕಾನ್” ಆಗಿ ಆಯ್ಕೆ ಮಾಡಲಾಗಿದೆ. ಬಿಹಾರ ವಿಧಾನಸಭಾ ಚುನಾವಣೆ ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತ ನವೆಂಬರ್ 6 ರಂದು ಮತ್ತು ಎರಡನೇ ಹಂತ ನವೆಂಬರ್ 11 ರಂದು ನಡೆಯಲಿದೆ. ಮತದಾನದ ಮಹತ್ವವನ್ನು ಎತ್ತಿ ತೋರಿಸಲು ಮತ್ತು ಸಾರ್ವಜನಿಕ ಜಾಗೃತಿ ಮೂಡಿಸಲು ಚುನಾವಣಾ ಆಯೋಗವು ಪ್ರಮುಖ ವ್ಯಕ್ತಿಗಳನ್ನು ತನ್ನ ಐಕಾನ್‌ಗಳಾಗಿ ಬಳಸುತ್ತದೆ. ಅದಕ್ಕಾಗಿಯೇ ವೈಭವ್ ಸೂರ್ಯವಂಶಿ ಅವರಿಗೆ ಈ ಬಾರಿ ಈ ಜವಾಬ್ದಾರಿಯನ್ನು ನೀಡಲಾಗಿದೆ.
ವಿಶೇಷ ಮನವಿ ಮಾಡಿದ ವೈಭವ್
ಚುನಾವಣಾ ಆಯೋಗ ಮತ್ತು ಪತ್ರಿಕಾ ಮಾಹಿತಿ ಬ್ಯೂರೋ ಕೂಡ ವೈಭವ್ ಸೂರ್ಯವಂಶಿ ಅವರ ವೀಡಿಯೊವನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ಬಿಹಾರದ ಜನರಿಗೆ ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ. ವೈಭವ್ ಸೂರ್ಯವಂಶಿ, ‘ನಮಸ್ಕಾರ, ನಾನು ನಿಮ್ಮೆಲ್ಲರಿಗೂ ನಮಸ್ಕಾರ ಮಾಡುತ್ತೇನೆ. ನಾನು ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟಾಗ, ನನ್ನ ಕೆಲಸ ಚೆನ್ನಾಗಿ ಆಡುವುದು ಮತ್ತು ನನ್ನ ತಂಡವನ್ನು ಗೆಲ್ಲಲು ಸಹಾಯ ಮಾಡುವುದು. ಅದೇ ರೀತಿ, ಪ್ರಜಾಪ್ರಭುತ್ವದಲ್ಲಿ, ಮತದಾನವು ನಿಮ್ಮೆಲ್ಲರಿಗೂ ಒಂದು ಪ್ರಮುಖ ಕೆಲಸ. ಆದ್ದರಿಂದ, ಜಾಗೃತರಾಗಿರಿ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿ. ಬಿಹಾರ ಮತ ಚಲಾಯಿಸುತ್ತದೆ; ಬಿಹಾರ ತನ್ನ ಸರ್ಕಾರವನ್ನು ಆಯ್ಕೆ ಮಾಡುತ್ತದೆ’ ಎಂಬ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
Vaibhav Suryavanshi: 14ನೇ ವಯಸ್ಸಿಗೆ ರಣಜಿ ತಂಡದ ಉಪನಾಯಕನಾದ ವೈಭವ್ ಸೂರ್ಯವಂಶಿ
ಏತನ್ಮಧ್ಯೆ, ಖ್ಯಾತ ನಟ ಚಂದನ್ ರೈ ಮತ್ತು ಸಹರ್ಷ ನಟ ಪಂಕಜ್ ಝಾ ಸ್ವೀಪ್ ಐಕಾನ್‌ಗಳಾಗಿ ಆಯ್ಕೆಯಾಗಿದ್ದಾರೆ. ವುಶು ಆಟಗಾರ್ತಿ ಸೌಮ್ಯ ಆನಂದ್, ಆಯುಷ್ ಠಾಕೂರ್, ಹಾಕಿ ಆಟಗಾರ್ತಿ ಜ್ಯೋತಿ ಕುಮಾರಿ, ಸಾಮಾಜಿಕ ಕಾರ್ಯಕರ್ತೆ ತಬಸ್ಸುಮ್ ಅಲಿ ಮತ್ತು ಚಿತ್ರಕಲೆಯಲ್ಲಿ ಸಾಧನೆ ಮಾಡಿರುವ ಅಶೋಕ್ ಕುಮಾರ್ ವಿಶ್ವಾಸ್ ಅವರನ್ನು ಸ್ವೀಪ್ ಐಕಾನ್‌ಗಳಾಗಿ ಆಯ್ಕೆ ಮಾಡಲಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:00 pm, Mon, 20 October 25
