
ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದಿದೆ. ಈ ಬಾರಿಯ ಟೂರ್ನಿಯ 8 ಪಂದ್ಯಗಳಲ್ಲಿ ಫಿಕ್ಸಿಂಗ್ ನಡೆದಿರುವ ಸಂಶಯ ಮೂಡಿದ್ದು, ಹೀಗಾಗಿ 10 ಆಟಗಾರರನ್ನು ವಿಚಾರಣೆಗೆ ಒಳಪಡಿಸಲು ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ನ ಭ್ರಷ್ಟಾಚಾರ ನಿಗ್ರಹ ಘಟಕವು ನಿರ್ಧರಿಸಿದೆ. ಮಾಧ್ಯಮ ವರದಿಗಳ ಪ್ರಕಾರ, BCB ಯ ಭ್ರಷ್ಟಾಚಾರ ನಿಗ್ರಹ ಘಟಕವು ಸ್ಪಾಟ್ ಫಿಕ್ಸಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಶಂಕೆಯ ಅಡಿಯಲ್ಲಿ ಪಂದ್ಯಾವಳಿಯ ಎಂಟು ಪಂದ್ಯಗಳನ್ನು ಗುರುತಿಸಿದೆ. ಈ ಪಂದ್ಯಗಳಲ್ಲಿ ಕಣಕ್ಕಿಳಿದಿರುವ 10 ಆಟಗಾರರನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ.
ಈ 10 ಕ್ರಿಕೆಟಿಗರಲ್ಲಿ ಆರು ಮಂದಿ ಬಾಂಗ್ಲಾದೇಶ ರಾಷ್ಟ್ರೀಯ ತಂಡದಲ್ಲಿ ಆಡಿದವರು ಎಂಬುದು ಅಚ್ಚರಿ. ಇನ್ನುಳಿದ ಇಬ್ಬರು ಅನ್ ಕ್ಯಾಪ್ಡ್ ಬಾಂಗ್ಲಾದೇಶದ ಆಟಗಾರರು ಮತ್ತು ಇಬ್ಬರು ವಿದೇಶಿ ಕ್ರಿಕೆಟಿಗರು ಎಂದು ತಿಳಿದು ಬಂದಿದೆ. ಹಾಗೆಯೇ 4 ತಂಡಗಳ ಫ್ರಾಂಚೈಸಿಗಳ ಚಟುವಟಿಕೆಗಳ ಮೇಲೆ ನಿಕಟ ನಿಗಾ ಇರಿಸಲಾಗಿದ್ದು, ಈ ಫ್ರಾಂಚೈಸಿಗಳು ಕೂಡ ಫಿಕ್ಸಿಂಗ್ನಲ್ಲಿ ಭಾಗಿಯಾಗಿರುವ ಬಗ್ಗೆ ಸುಳಿವುಗಳಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್‌ನಲ್ಲಿ ಯಾವುದೇ ಕ್ರಿಕೆಟಿಗರು ಫಿಕ್ಸಿಂಗ್ ಮಾಡಿ ತಪ್ಪಿತಸ್ಥರೆಂದು ಕಂಡುಬಂದರೆ ಅವರ ವಿರುದ್ಧ ಮಂಡಳಿಯು ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಧ್ಯಕ್ಷ ಫಾರೂಕ್ ಅಹ್ಮದ್ ಹೇಳಿದ್ದಾರೆ.
ಸದ್ಯ ತನಿಖೆಯ ಹಂತದಲ್ಲಿದ್ದೇವೆ. ತನಿಖೆ ಪೂರ್ಣಗೊಳ್ಳುವವರೆಗೆ, ಈ ವಿಷಯದಲ್ಲಿ ನಾನು ಯಾವುದೇ ಅಧಿಕೃತ ಪ್ರತಿಕ್ರಿಯೆಯನ್ನು ನೀಡಲು ಸಾಧ್ಯವಿಲ್ಲ, ಏಕೆಂದರೆ ನಾವು ಅನುಸರಿಸಬೇಕಾದ ಪ್ರೋಟೋಕಾಲ್ ಇದೆ.
ತನಿಖೆಯ ಸಮಯದಲ್ಲಿ ಏನಾದರೂ ಬೆಳಕಿಗೆ ಬಂದರೆ, ಶಿಕ್ಷೆಯು ತುಂಬಾ ಕಠಿಣವಾಗಿರುತ್ತದೆ. ಹೀಗೆ ಫಿಕ್ಸಿಂಗ್ನಲ್ಲಿ ಭಾಗಿಯಾಗಿರುವುದು ಕಂಡುಕೊಂಡರೆ, ಅವರ ವೃತ್ತಿಜೀವನವೇ ಕೊನೆಗೊಳ್ಳಬಹುದು. ಈ ಮೂಲಕ ಮ್ಯಾಚ್ ಫಿಕ್ಸಿಂಗ್ನಲ್ಲಿ ಭಾಗಿಯಾದ ಯಾರನ್ನು ಸಹ ಬಿಡುವುದಿಲ್ಲ ಫಾರೂಕ್ ಅಹ್ಮದ್ ಕ್ರಿಕ್ಬಝ್ಗೆ ತಿಳಿಸಿದ್ದಾರೆ.
BCBಯ ಭ್ರಷ್ಟಾಚಾರ ನಿಗ್ರಹ ಘಟಕವು ಅನುಮಾನಾಸ್ಪದವಾಗಿ ಪರಿಗಣಿಸಿರುವ ಎಂಟು ಪಂದ್ಯಗಳೆಂದರೆ ಫಾರ್ಚೂನ್ ಬಾರಿಶಾಲ್ vs ರಾಜ್‌ಶಾಹಿ (ಜನವರಿ 6), ರಂಗ್‌ಪುರ್ ರೈಡರ್ಸ್ vs ಢಾಕಾ (ಜನವರಿ 7), ಢಾಕಾ vs ಸಿಲ್ಹೆಟ್ (ಜನವರಿ 10), ರಾಜ್‌ಶಾಹಿ vs ಢಾಕಾ (ಜನವರಿ 12), (13 ಜನವರಿ), ಬಾರಿಶಾಲ್ vs ಖುಲ್ನಾ ಟೈಗರ್ಸ್ (22 ಜನವರಿ), ಮತ್ತು ಚಿತ್ತಗಾಂಗ್ vs ಸಿಲ್ಹೆಟ್.
ಈ ಪಂದ್ಯಗಳಲ್ಲಿ ಬೌಲರ್‌ಗಳು ಸತತ ಮೂರು ವೈಡ್‌ಗಳು ಮತ್ತು ನೋ-ಬಾಲ್‌ಗಳನ್ನು ಬೌಲ್ ಮಾಡಿದ್ದರು. ಅಲ್ಲದೆ ಪ್ಲೇಯಿಂಗ್ ಇಲೆವೆನ್ ಆಯ್ಕೆ ಕೂಡ ಅನುಮಾನಾಸ್ಪದವಾಗಿದೆ.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಪವರ್ಗೆ ವಿರಾಟ್ ಕೊಹ್ಲಿಯ ದಾಖಲೆ ಉಡೀಸ್
ಇನ್ನು ದೊಡ್ಡ ಸ್ಕೋರ್‌ಗಳನ್ನು ಬೆನ್ನಟ್ಟುತ್ತಿರುವಾಗ ಮಧ್ಯಮ ಓವರ್‌ಗಳಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿದ್ದರು. ಹೀಗಾಗಿಯೇ ಎಲ್ಲಾ ರೀತಿಯಲ್ಲೂ ಈ ಪಂದ್ಯಗಳ ಇದೀಗ ಮ್ಯಾಚ್ ಫಿಕ್ಸಿಂಗ್ ಆರೋಪಗಳು ಕೇಳಿ ಬಂದಿವೆ.