ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ನ (Celebrity Cricket League) 8ನೇ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ತಂಡವನ್ನು (Karnataka Bulldozers vs Bengal Tigers) 30 ರನ್ಗಳಿಂದ ಮಣಿಸಿದ ಕರ್ನಾಟಕ ಬುಲ್ಡೋಜರ್ಸ್ ತಂಡ ಲೀಗ್ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಗೆಲುವಿಗೆ 60 ಎಸೆತಗಳಲ್ಲಿ 139 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಬೆಂಗಾಲ್ ತಂಡ ಅಂತಿಮವಾಗಿ 6 ವಿಕೆಟ್ ಕಳೆದುಕೊಂಡು 108 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಇತ್ತ ಕರ್ನಾಟಕ ಪರ ಎರಡೂ ಇನ್ನಿಂಗ್ಸ್ಗಳಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ ಡಾರ್ಲಿಂಗ್ ಕೃಷ್ಣ (Darling Krishna) ತಂಡದ ಗೆಲುವಿನ ಪ್ರಮುಖ ರೂವಾರಿ ಎನಿಸಿಕೊಂಡರು.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ ಮೊದಲ 10 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 117 ರನ್ ಕಲೆಹಾಕಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಪ್ರದೀಪ್ 19 ಎಸೆತಗಳಲ್ಲಿ 29 ರನ್ ಕಲೆಹಾಕಿದರೆ, ಮತ್ತೊಬ್ಬ ಆರಂಭಿಕರಾಗಿ ಅಖಾಡಕ್ಕಿಳಿದಿದ್ದ ಡಾರ್ಲಿಂಗ್ ಕೃಷ್ಣ ಕೇವಲ 33 ಎಸೆತಗಳಲ್ಲಿ 72 ರನ್ ಚಚ್ಚಿದರು. ಈ ಇಬ್ಬರ ಸ್ಫೋಟಕ ಬ್ಯಾಟಿಂಗ್ ತಂಡವನ್ನು 117 ರನ್ಗಳಿಗೆ ಕೊಂಡೊಯ್ದಿತು.
ಮೊದಲ ಇನ್ನಿಂಗ್ಸ್ನಲ್ಲಿ 117 ರನ್ಗಳ ಗುರಿ ಬೆನ್ನಟ್ಟಿದ ಬೆಂಗಾಲ್ ಟೈಗರ್ಸ್ ತಂಡ ಮೊದಲ 10 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 109 ರನ್ ಪೇರಿಸಿತು. ತಂಡದ ಪರ ಜೀಶು 25 ಎಸೆತಗಳಲ್ಲಿ 54 ರನ್ಗಳ ಅರ್ಧಶತಕದ ಇನ್ನಿಂಗ್ಸ್ ಆಡಿದರೆ, ಜಾಮಿ 26 ಎಸೆತಗಳಲ್ಲಿ ಅಜೇಯ 40 ರನ್ ಬಾರಿಸಿದರು. ಆದರೂ ತಂಡ ಮೊದಲ ಇನ್ನಿಂಗ್ಸ್ನಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ.
CCL 2024: ಸಿಸಿಎಲ್ 10ನೇ ಸೀಸನ್ಗೆ ಅದ್ಧೂರಿ ಚಾಲನೆ; ಕಿಚ್ಚನ ಟೀಂ ಕಣಕ್ಕಿಳಿಯುವುದು ಯಾವಾಗ?
8 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಪರ ಮತ್ತೊಮ್ಮೆ ಡಾರ್ಲಿಂಗ್ ಕೃಷ್ಣ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಕೇವಲ 17 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡದ ಇನ್ನಿಂಗ್ಸ್ ನಿಭಾಯಿಸುವ ಕೆಲಸವನ್ನು ಕೃಷ್ಣ ಕೈಗೆತ್ತಿಕೊಂಡರು. ಕೃಷ್ಣ ಅವರಿಗೆ ಉತ್ತಮ ಸಾಥ್ ನೀಡಿದ ಕರಣ್ 23 ಎಸೆತಗಳಲ್ಲಿ 49 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಅಲ್ಲದೆ ಈ ಇಬ್ಬರ ನಡುವೆ ಶತಕದ ಜೊತೆಯಾಟವೂ ಮೂಡಿಬಂತು. ಅಂತಿಮವಾಗಿ ಕೃಷ್ಣ ಅಜೇಯರಾಗಿ ಉಳಿದು, ಎರಡನೇ ಇನ್ನಿಂಗ್ಸ್ನಲ್ಲೂ 21 ಎಸೆತಗಳಲ್ಲಿ 54 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಕೊನೆಯ 10 ಓವರ್ಗಳ ಇನ್ನಿಂಗ್ಸ್ನಲ್ಲಿ ಕರ್ನಾಟಕ ತಂಡ 5 ವಿಕೆಟ್ ಕಳೆದುಕೊಂಡು 130 ರನ್ ಕಲೆಹಾಕಿತು.
ಸತತ 3ನೆ ಅರ್ಧ ಶತಕ
ನಮ್ಮ ಡಾರ್ಲಿಂಗ್ ಕೃಷ್ಣ ಅವರಿಂದ#CCL2024 #CCL #KicchaSudeep pic.twitter.com/omV0xlp38k— 𝗠𝗮𝗵𝗶 𝗞𝗶𝗰𝗰𝗵𝗮 𝕏 (@Mahi_Kicchaa) March 2, 2024
ಎರಡನೇ ಇನ್ನಿಂಗ್ಸ್ನಲ್ಲಿ 139 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಬೆಂಗಾಲ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಉದಯ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ರಾಹುಲ್ 22 ರನ್ಗಳ ಕೊಡುಗೆ ನೀಡಿದರು. ಮೂರನೇ ಕ್ರಮಾಂಕದಲ್ಲಿ ಬಂತು ಜೀಶು 11 ರನ್ಗಳಿಗೆ ಸುಸ್ತಾದರೆ, ಜಾಮಿ 27 ರನ್ ಹಾಗೂ ಯೂಸುಫ್ 29 ರನ್ ಸಿಡಿಸಿ, ತಂಡದ ಪರ ಅಧಿಕ ಸ್ಕೋರರ್ ಎನಿಸಿಕೊಂಡರು.
ಕರ್ನಾಟಕ ಬುಲ್ಡೋಜರ್ಸ್: ಪ್ರದೀಪ್ (ನಾಯಕ), ರಾಜೀವ್ ಎಚ್, ಕಿಚ್ಚ ಸುದೀಪ್, ಚಂದನ್, ಅರ್ಜುನ್ ಯೋಗಿ, ನಿರೂಪ್ ಭಂಡಾರಿ, ನಂದ ಕಿಶೋರ್, ಸಾಗರ್ ಗೌಡ, ಸುನೀಲ್ ರಾವ್, ಜಯರಾಮ್ ಕಾರ್ತಿಕ್, ಪ್ರತಾಪ್, ಪ್ರಸನ್ನ, ಶಿವರಾಜ್ಕುಮಾರ್, ಗಣೇಶ್, ಕೃಷ್ಣ, ಸೌರವ್ ಲೋಕೇಶ್.
ಬೆಂಗಾಲ್ ಟೈಗರ್ಸ್: ಜಿಶು ಸೆಂಗುಪ್ತ (ನಾಯಕ), ಆನಂದ ಚೌಧರಿ, ಸ್ಯಾಂಡಿ, ಉದಯ್, ಇಂದ್ರಶಿಶ್, ಮೋಹನ್, ಸುಮನ್, ಜಾಯ್, ಜೋ, ಯೂಸುಫ್, ಜೀತು ಕಮಲ್, ಜಮ್ಮಿ, ರತ್ನದೀಪ್ ಘೋಷ್, ಆದಿತ್ಯ ರಾಯ್ ಬ್ಯಾನರ್ಜಿ, ಅರ್ಮಾನ್ ಅಹಮದ್, ಮಂಟಿ, ರಾಹುಲ್ ಮಜುಂದಾರ್, ಗೌರವ್ ಚಕ್ರವರ್ತಿ, ಬೋನಿ, ಸೌರವ್ ದಾಸ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:08 pm, Sat, 2 March 24