CCL 2024: ಸಿಸಿಎಲ್ 10ನೇ ಸೀಸನ್​ಗೆ ಅದ್ಧೂರಿ ಚಾಲನೆ; ಕಿಚ್ಚನ ಟೀಂ ಕಣಕ್ಕಿಳಿಯುವುದು ಯಾವಾಗ?

|

Updated on: Feb 24, 2024 | 6:12 PM

CCL 2024: 10ನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಿನ್ನೆಯಿಂದ ಅಂದರೆ ಫೆಬ್ರವರಿ 23 ರಿಂದ ಆರಂಭವಾಗಿದೆ.​ ಲೀಗ್ ಸುತ್ತು ಮಾರ್ಚ್​ 10 ರವರೆಗೆ ನಡೆಯಲಿದ್ದು, ಈ ಸುತ್ತಿನಲ್ಲಿ 16 ಪಂದ್ಯಗಳು ನಡೆಯಲಿವೆ. ಆ ಬಳಿಕ ಪ್ಲೇಆಫ್‌ ಸುತ್ತು ಆರಂಭವಾಗಲಿದೆ.

CCL 2024: ಸಿಸಿಎಲ್ 10ನೇ ಸೀಸನ್​ಗೆ ಅದ್ಧೂರಿ ಚಾಲನೆ; ಕಿಚ್ಚನ ಟೀಂ ಕಣಕ್ಕಿಳಿಯುವುದು ಯಾವಾಗ?
ಸಿಸಿಎಎಲ್ 2024
Follow us on

10ನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್​(Celebrity Cricket League 2024) ನಿನ್ನೆಯಿಂದ ಅಂದರೆ ಫೆಬ್ರವರಿ 23 ರಿಂದ ಆರಂಭವಾಗಿದೆ.​ ಲೀಗ್ ಸುತ್ತು ಮಾರ್ಚ್​ 10 ರವರೆಗೆ ನಡೆಯಲಿದ್ದು, ಈ ಸುತ್ತಿನಲ್ಲಿ 16 ಪಂದ್ಯಗಳು ನಡೆಯಲಿವೆ. ಆ ಬಳಿಕ ಪ್ಲೇಆಫ್‌ ಸುತ್ತು ಆರಂಭವಾಗಲಿದೆ. ಮಾರ್ಚ್​ 15 ರಂದು ಕ್ವಾಲಿಫೈಯರ್ 1 ಪಂದ್ಯ ಹಾಗೂ ಎಲಿಮಿನೇಟರ್ 1 ಪಂದ್ಯ ನಡೆದರೆ, ಮಾರ್ಚ್​ 16 ರಂದು ಕ್ವಾಲಿಫೈಯರ್ 2 ಪಂದ್ಯ ನಡೆಯಲ್ಲಿದೆ. ಇದರಲ್ಲಿ ಕ್ವಾಲಿಫೈಯರ್ 1 ರಲ್ಲಿ ಸೋತ ತಂಡ ಹಾಗೂ ಎಲಿಮಿನೇಟರ್ 1 ರಲ್ಲಿ ಗೆದ್ದ ತಂಡ ಮುಖಾಮುಖಿಯಾಗಲಿವೆ. ಮಾರ್ಚ್​ 17 ರಂದು ಫೈನಲ್ ಪಂದ್ಯ ನಡೆಯಲಿದ್ದು, ಇದರಲ್ಲಿ ಕ್ವಾಲಿಫೈಯರ್ 1 ರಲ್ಲಿ ಗೆದ್ದ ತಂಡ ಹಾಗೂ ಕ್ವಾಲಿಫೈಯರ್ 2 ರಲ್ಲಿ ಗೆದ್ದ ತಂಡಗಳು ಮುಖಾಮುಖಿಯಾಗಲಿವೆ.

ಟೂರ್ನಿಯ ಮೊದಲ ಐದು ಪಂದ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾದಲ್ಲಿ ನಡೆಯಲ್ಲಿವೆ. ಅದರಂತೆ ನಿನ್ನೆ ನಡೆದ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಹೀರೋಸ್ ಮತ್ತು ಕೇರಳ ಸ್ಟ್ರೈಕರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕೇರಳ ಸ್ಟ್ರೈಕರ್ಸ್ ತಂಡವನ್ನು 9 ರನ್​ಗಳಿಂದ ಮಣಿಸಿದ ಮುಂಬೈ ಹೀರೋಸ್ ಲೀಗ್​ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ.

ಇನ್ನಿಂಗ್ಸ್ ಮಾದರಿಯಲ್ಲಿ ಲೀಗ್

ವಾಸ್ತವವಾಗಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ 20 ಓವರ್​ನ ಪಂದ್ಯಾವಳಿಯಾಗಿದ್ದು, ಇದನ್ನು ಇನ್ನಿಂಗ್ಸ್ ರೂಪದಲ್ಲಿ ಆಡಲಾಗುತ್ತದೆ. ಅಂದರೆ ಮೊದಲು ಬ್ಯಾಟಿಂಗ್ ಮಾಡುವ ತಂಡ 10 ಓವರ್​ಗಳನ್ನು ಮಾತ್ರ ಆಡಬೇಕು. ಆ ನಂತರ ಬೌಲಿಂಗ್ ಮಾಡಿದ ತಂಡ ಕೂಡ 10 ಓವರ್ ಬ್ಯಾಟಿಂಗ್‌ ಮಾಡಬೇಕಾಗುತ್ತದೆ. ಇಲ್ಲಿಗೆ ಮೊದಲ ಇನ್ನಿಂಗ್ಸ್ ಮುಕ್ತಾಯವಾಗುತ್ತದೆ. ನಂತರ ಎರಡೂ ತಂಡಗಳು ಇನ್ನುಳಿದ 10 ಓವರ್​ಗಳನ್ನು ಆಡಬೇಕಾಗುತ್ತದೆ.

ಅದರಂತೆ ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಮೊದಲ 10 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 76 ರನ್ ಕಲೆಹಾಕಿತು. ನಂತರ ಬ್ಯಾಟಿಂಗ್ ಆರಂಭಿಸಿದ ಕೇರಳ ತಂಡ ಮೊದಲ 10 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 84 ರನ್ ಕಲೆಹಾಕಿತು. ಈ ಮೂಲಕ ಮೊದಲ ಇನ್ನಿಂಗ್ಸ್​ನಲ್ಲಿ 8 ರನ್​ಗಳ ಮುನ್ನಡೆ ಕಾಯ್ದುಕೊಂಡಿತು.

ಎರಡನೇ ಇನ್ನಿಂಗ್ಸ್ ಆರಂಭಿಸಿದ ಮುಂಬೈ ತಂಡ ಉಳಿದ 10 ಓವರ್​ಗಳಲ್ಲಿ 100 ರನ್ ಕಲೆಹಾಕಿತು. ಈ ಮೂಲಕ ಕೇರಳ ತಂಡಕ್ಕೆ 92 ರನ್​ಗಳ ಟಾರ್ಗೆಟ್ ನೀಡಿತು. ಈ ಗುರಿ ಬೆನ್ನಟ್ಟಿದ ಕೇರಳ ತಂಡ ನಿಗದಿತ 10 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 83 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಅಂತಿಮವಾಗಿ ಮುಂಬೈ 9 ರನ್​ಗಳಿಂದ ಜಯದ ನಗೆ ಬೀರಿತು.

ಇಂದು ಎಷ್ಟು ಪಂದ್ಯಗಳು?

ವಾರಾಂತ್ಯವಾಗಿರುವುದರಿಂದ ಇಂದು ಡಬಲ್ ಹೆಡರ್ ಇದೆ. ಅಂದರೆ ಇಂದು ಒಂದೇ ದಿನ ಎರಡು ಪಂದ್ಯಗಳು ನಡೆಯುತ್ತಿವೆ. ಮಧ್ಯಾಹ್ನ 2:30 ಕ್ಕೆ ಆರಂಭವಾಗಿರುವ ಪಂದ್ಯದಲ್ಲಿ ತೆಲುಗು ವಾರಿಯರ್ಸ್​ ಹಾಗೂ ಭೋಜ್​ಪುರಿ ದಬಾಂಗ್ಸ್ತಂಡಗಳು ಮುಖಾಮುಖಿಯಾಗಿವೆ. ಇಂದು ಸಂಜೆ ನಡೆಯುವ ಪಂದ್ಯದಲ್ಲಿ ಕೇರಳ ಸ್ಟ್ರೈಕರ್ಸ್ ಹಾಗೂ ಬೆಂಗಾಲ್ ಟೈಗರ್ಸ್​ ತಂಡಗಳು ಮುಖಾಮುಖಿಯಾಗಲಿವೆ.

ನಾಳೆಯೂ ಡಬಲ್ ಹೆಡರ್

ನಾಳೆಯೂ ಸಹ ಡಬಲ್ ಹೆಡರ್ ಪಂದ್ಯ ಇದ್ದು, ದಿನದ ಮೊದಲ ಪಂದ್ಯದಲ್ಲಿ ಚೆನ್ನೈ ರೈನೋಸ್ ಹಾಗೂ ಪಂಜಾಬ್ ದಿ ಶೇರ್ ತಂಡಗಳು ಮುಖಾಮುಖಿಯಾದರೆ, ಎರಡನೇ ಪಂದ್ಯದಲ್ಲಿ ಬಹು ನಿರೀಕ್ಷಿತ ಕರ್ನಾಟಕ ಬುಲ್ಡೋಜರ್ಸ್​ ಹಾಗೂ ಮುಂಬೈ ಹೀರೋಸ್ ತಂಡಗಳು ಮುಖಾಮುಖಿಯಾಗಲಿವೆ.

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಅನ್ನು ಸೋನಿ ಸ್ಫೋಟ್ರ್ಸ್​ ನೆಟ್​ವರ್ಕ್​ನಲ್ಲಿ ಉಚಿತವಾಗಿ ಟಿವಿಯಲ್ಲಿ ವೀಕ್ಷಿಸಬಹುದಾಗಿದೆ. ಹಾಗೆಯೇ ಮೊಬೈಲ್​ನಲ್ಲಿ ಜಿಯೋ ಸಿನಿಮಾ ಆ್ಯಪ್​ನಲ್ಲಿ ಉಚಿತವಾಗಿ ಲೈವ್ ಸ್ಟ್ರೀಮಿಂಗ್ ಮಾಡಲಾಗುತ್ತದೆ.

ಟಿವಿ9ಗೆ ಮಾಧ್ಯಮ ಪ್ರಾಯೋಜಕತ್ವ

10ನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್​ನ ಮಾಧ್ಯಮ ಪಾಲುದಾರಿಕೆಯನ್ನು ಟಿವಿ9 ನೆಟ್‌ವರ್ಕ್ ಮತ್ತು ನ್ಯೂಸ್ 9 ಪಡೆದುಕೊಂಡಿದೆ. ಟಿವಿ9 ನೆಟ್‌ವರ್ಕ್ ಕ್ರಿಕೆಟ್ ಲೋಕದಲ್ಲೂ ತನ್ನ ಛಾಪು ಮೂಡಿಸಿದ್ದು, ಟಿವಿ9 ಗ್ರೂಪ್ ಈಗಾಗಲೇ ಕ್ರಿಕೆಟ್​ನ ಮಿಲೇನಿಯರ್ ಕೂಸಾದ ಐಪಿಎಲ್​ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್‌ ಫ್ರಾಂಚೈಸಿಗಳ ಪ್ರಾಯೋಜಕತ್ವವನ್ನು ನಿರ್ವಹಿಸಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:10 pm, Sat, 24 February 24