
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 11ನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ನ ಮೊದಲ ದಿನದ ಎರಡನೇ ಪಂದ್ಯದಲ್ಲಿ ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಅಖೀಲ್ ಅಕ್ಕಿನೇನಿ ನಾಯಕತ್ವದ ತೆಲುಗು ವಾರಿಯರ್ಸ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲ ಇನ್ನಿಂಗ್ಸ್ ಆರಂಭಿಸಿರುವ ಕರ್ನಾಟಕ ಬುಲ್ಡೋಜರ್ಸ್ ತಂಡದ ಪರ ಆರಂಭಿಕ ಡಾರ್ಲಿಂಗ್ ಕೃಷ್ಣ ಸ್ಫೋಟಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಕೃಷ್ಣರ ಈ ಸ್ಫೋಟಕ ಆಟದಿಂದಾಗಿ ಕರ್ನಾಟಕ ತಂಡ ಮೊದಲ 10 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 113 ರನ್ ಕಲೆಹಾಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದಿದ್ದ ರಾಜೀವ್ ಹಾಗೂ ಡಾರ್ಲಿಂಗ್ ಕೃಷ್ಣಗೆ ಬೃಹತ್ ಜೊತೆಯಾಟ ನಡೆಸಲು ಸಾಧ್ಯವಾಗಲಿಲ್ಲ. ಸ್ಫೋಟಕ ದಾಂಡಿಗ ರಾಜೀವ್ ಮೊದಲ ಓವರ್ನ ಕೊನೆಯ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚಿತ್ ಔಟಾದರು. ಆ ಬಳಿಕ ಬಂದ ಮತ್ತೊಬ್ಬ ಅನುಭವಿ ಆಲ್ರೌಂಡರ್ ಜಯರಾಂ ಕಾರ್ತಿಕ್ ಕೂಡ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲಿಲ್ಲ. ಹೀಗಾಗಿ ಕರ್ನಾಟಕ ತಂಡ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿತು.
ನಾಲ್ಕನೇ ಕ್ರಮಾಂಕದಲ್ಲಿ ಬಂದ ಮಂಜುನಾಥ್ ಗೌಡ ಕೂಡ ಒಂದಂಕಿಗೆ ಸುಸ್ತಾದರು. ಇದು ತಂಡವನ್ನು ಇನ್ನಷ್ಟು ಒತ್ತಡಕ್ಕೆ ಸಿಲುಕಿಸಿತು. ಹೀಗಾಗಿ ಮೊದಲ ಐದು ಓವರ್ ಮುಗಿದ ತಂಡದ ಮೊತ್ತ ಕೇವಲ 41 ರನ್ಗಳಿದ್ದವು. ಆದರೆ ಆ ಬಳಿಕ ಜೊತೆಯಾದ ಕರಣ್ ಹಾಗೂ ಕೃಷ್ಣ ತಾಳ್ಮೆಯ ಜೊತೆಯಾಟ ಕಟ್ಟಿದರು. 7ನೇ ಓವರ್ನಿಂದ ಹೊಡಿಬಡಿ ಆಟಕ್ಕೆ ಮುಂದಾದ ಕೃಷ್ಣ ಪ್ರತಿ ಓವರ್ನಲ್ಲೂ ಬೌಂಡರಿ ಹಾಗೂ ಸಿಕ್ಸರ್ ಕಲೆಹಾಕಲು ಆರಂಭಿಸಿದರು. ಹೀಗಾಗಿ ಕರ್ನಾಟಕ ತಂಡ 8 ಓವರ್ ಅಂತ್ಯಕ್ಕೆ 86 ರನ್ ಕಲೆಹಾಕಿತು. ಇದೇ ವೇಳೆಗೆ ಕೃಷ್ಣ ಕೂಡ ತಮ್ಮ ಅರ್ಧಶತಕ ಪೂರೈಸಿದರು.
ಕೊನೆಯ 2 ಓವರ್ಗಳಲ್ಲಿ ಇನ್ನಷ್ಟು ಉಗ್ರರೂಪ ತಾಳಿದ ಕೃಷ್ಣ ಕೊನೆಯ 12 ಎಸೆತಗಳಲ್ಲಿ 28 ರನ್ ಕಲೆಹಾಕಿದರು. ಆರಂಭಿಕರಾಗಿ ಕಣಕ್ಕಿಳಿದು ಕೊನೆಯವರೆಗೂ ಅಜೇಯರಾಗಿ ಉಳಿದ ಕೃಷ್ಣ ಕೇವಲ 38 ಎಸೆತಗಳಲ್ಲಿ ಸ್ಫೋಟಕ 80 ರನ್ ಕಲೆಹಾಕಿ ತಂಡವನ್ನು ಮೊದಲ 10 ಓವರ್ಗಳಲ್ಲಿ 113 ರನ್ಗಳಿಗೆ ಕೊಂಡೊಯ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:02 pm, Sat, 8 February 25