ಇತ್ತೀಚೆಗೆ ಭಾರತ ಕ್ರಿಕೆಟ್ ತಂಡದ ಬಹುಚರ್ಚಿತ ಜೋಡಿಗಳಲ್ಲಿ ಒಂದಾದ ಯುಜುವೇಂದ್ರ ಚಹಾಲ್ (Yuzvendra Chahal ) ಮತ್ತು ಧನಶ್ರೀ ವರ್ಮಾ (Dhanashree Verma) ನಡುವೆ ಮನಸ್ತಾಪ ಉಂಟಾಗಿದೆ ಎಂದು ವರದಿಯಾಗಿತ್ತು. ಧನಶ್ರೀ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ‘ಚಹಾಲ್’ ಎಂಬ ಉಪನಾಮವನ್ನು ತೆಗೆದುಹಾಕಿದ್ದರು. ಮತ್ತೊಂದೆಡೆ ಚಹಾಲ್ “ಹೊಸ ಜೀವನವು ಲೋಡ್ ಆಗುತ್ತಿದೆ…” ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದರು. ಇದರೊಂದಿಗೆ ಚಹಾಲ್ ದಾಂಪತ್ಯ ಜೀವನದಲ್ಲಿ ಬಿರುಕುಂಟಾಗಿದೆ. ಇಬ್ಬರೂ ದೂರವಾಗುತ್ತಿದ್ದಾರೆ ಎಂಬಿತ್ಯಾದಿ ಸುದ್ದಿಗಳು ಹರಿದಾಡಿದ್ದವು.
ಈ ಊಹಾಪೋಹಗಳು ಮಹತ್ವ ಪಡೆದುಕೊಳ್ಳುತ್ತಿದ್ದಂತೆ, ನಮ್ಮ ವೈಯುಕ್ತಿಕ ಜೀವನಕ್ಕೆ ಸಂಬಂಧಿಸಿದ ಯಾವುದೇ ರೀತಿಯ ವದಂತಿಗಳನ್ನು ನಂಬಬೇಡಿ ಎಂದು ಚಹಾಲ್ ತಿಳಿಸಿದ್ದರು. ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ, ಸುಳ್ಳು ಸುದ್ದಿಗಳನ್ನು ಹರಬೇಡಿ ಎಂದು ಎಲ್ಲಾ ವದಂತಿಗಳಿಗೆ ಬ್ರೇಕ್ ಹಾಕಿದ್ದರು.
ಇದೀಗ ಧನಶ್ರೀ ವರ್ಮಾ ಕೂಡ ಸುದೀರ್ಘ ಪೋಸ್ಟ್ ಹಾಕುವ ಮೂಲಕ ತಮ್ಮ ವೈಯುಕ್ತಿಕ ಜೀವನದ ಬಗ್ಗೆ ಹರಿದಾಡಿದ್ದ ಸುದ್ದಿಗಳ ಬಗ್ಗೆ ಮೌನ ಮುರಿದಿದ್ದಾರೆ. ಅಲ್ಲದೆ ನಾನು ಚಹಾಲ್ ಈಗಲೂ ಜೊತೆಗಿದ್ದೇವೆ ಎಂದು ತಿಳಿಸಿದ್ದಾರೆ. ಈ ಪೋಸ್ಟ್‌ಗೆ ಖುದ್ದು ಯುಜ್ವೇಂದ್ರ ಚಹಾಲ್ ಮೈ ವುಮನ್ ಎಂದು ಕಾಮೆಂಟ್ ಕೂಡ ಮಾಡಿರುವುದು ವಿಶೇಷ.
ಧನಶ್ರೀ ವರ್ಮಾರ ಇನ್‌ಸ್ಟಾಗ್ರಾಮ್ ಪೋಸ್ಟ್ನ ಸಾರಾಂಶ ಹೀಗಿದೆ..ನಾನು ಚೇತರಿಸಿಕೊಳ್ಳಲು ನಿದ್ರೆ ಮಾಡಬೇಕಾಗಿತ್ತು. ಆದರೂ ತಮಾಷೆಯಾಗಿದೆ, ನಾನು ಇಂದು ತುಂಬಾ ಆತ್ಮವಿಶ್ವಾಸದಿಂದಲೇ ಎದ್ದಿದ್ದೇನೆ. ಕಳೆದ 14 ದಿನಗಳಿಂದ ಏನನ್ನೋ ಹುಡುಕುತ್ತಿದ್ದೆ. ಏಕೆಂದರೆ ನೃತ್ಯ ಮಾಡುವಾಗ ಸಂಭವಿಸಿದ ಮೊಣಕಾಲಿನ ಗಾಯದಿಂದಾಗಿ ನಾನು ಸಂಪೂರ್ಣವಾಗಿ ಆತ್ಮವಿಶ್ವಾಸವನ್ನು ಕಳೆದುಕೊಂಡೆ. ಇದೀಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ. ಸದ್ಯ ನಾನು ನನ್ನ ಹಾಸಿಗೆಯಿಂದ ನನ್ನ ಮಂಚದವರೆಗೆ (ಪ್ರತಿದಿನ ಫಿಸಿಯೋಥೆರಪಿ ಮತ್ತು ರಿಹ್ಯಾಬ್ ಜೊತೆಗೆ) ಮಾತ್ರ ಚಲಿಸಬಲ್ಲೆ. ಈ ವೇಳೆಯೂ ನನಗೆ ನನ್ನ ಪತಿಯ, ನನ್ನ ಕುಟುಂಬ ಮತ್ತು ನನ್ನ ಹತ್ತಿರದ ಸ್ನೇಹಿತರಿಂದ ಅತ್ಯುತ್ತಮ ಬೆಂಬಲ ಸಿಕ್ಕಿದೆ.
ವೈದ್ಯರ ಶಿಫಾರಸಿನಂತೆ, ನಾನು ಜೀವನದಲ್ಲಿ ಮತ್ತೆ ನೃತ್ಯ ಮಾಡಬೇಕಿದ್ದರೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು. ಇಂತಹ ಸಂದರ್ಭದಲ್ಲಿ ನನ್ನ ವೈಯುಕ್ತಿ ಜೀವನದ ಬಗ್ಗೆ ಹಲವರು ಸುಳ್ಳು ಸುದ್ದಿಗಳನ್ನು ಹರಿಬಿಟ್ಟಿದ್ದರು. ನಿಜವಾಗಿಯೂ ಇದು ಅಸಹ್ಯಕರವಾಗಿತ್ತು. ಅಷ್ಟೇ ಅಲ್ಲದೆ ನನಗೆ ತುಂಬಾ ನೋವುಂಟು ಮಾಡಿತ್ತು.
ನಾನು ಕಷ್ಟಪಟ್ಟು ಕೆಲಸ ಮಾಡಿದ್ದೇನೆ ಮತ್ತು ನನ್ನ ಗೌರವವನ್ನು ಗಳಿಸಿದ್ದೇನೆ. ಈ ಗಾಯ ಅಥವಾ ಯಾವುದೇ ಆಧಾರರಹಿತ ವದಂತಿಗಳಿಂದ ನನ್ನನ್ನು ನಾನು ಕುಗ್ಗಲು ಬಿಡುವುದಿಲ್ಲ. ವಾಸ್ತವವಾಗಿ, ಇದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಅಲ್ಲದೆ ನನ್ನನ್ನು ಇನ್ನಷ್ಟು ನಿರ್ಭೀತರನ್ನಾಗಿ ಮಾಡಿದೆ. ಸೆಲೆಬ್ರಿಟಿ ಜೀವನದಲ್ಲಿರುವ ಕೆಲ ವಾಸ್ತವಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯ ನನಗಿದೆ ಎಂದು ನನಗೆ ಈಗ ಖಚಿತವಾಗಿದೆ.
ನನ್ನ ದೌರ್ಬಲ್ಯವನ್ನು ನನ್ನ ಶಕ್ತಿಯನ್ನಾಗಿ ಪರಿವರ್ತಿಸಿದ್ದಕ್ಕಾಗಿ ಮತ್ತು ನನ್ನ ಸಮಗ್ರತೆಯನ್ನು ಮತ್ತಷ್ಟು ಬಲಪಡಿಸಲು ಸಹಾಯ ಮಾಡಿದ್ದಕ್ಕಾಗಿ ಧನ್ಯವಾದಗಳು. ಎಲ್ಲರಿಗೂ ಪ್ರೀತಿ ಮತ್ತು ಸಂತೋಷವನ್ನು ಹಂಚೋಣ..ಇತರೆ ವಿಷಯಗಳನ್ನು ನಿರ್ಲಕ್ಷಿಸೋಣ ಎಂದು ಧನಶ್ರೀ ವರ್ಮಾ ಬರೆದುಕೊಂಡಿದ್ದಾರೆ.
ವಿಶೇಷ ಎಂದರೆ ಚಹಾಲ್ ಅವರ ಸರ್ ನೇಮ್ ತೆಗೆದುಹಾಕಿದ್ದರಿಂದ ಶುರುವಾಗಿದ್ದ ಡೈವೋರ್ಸ್ ವದಂತಿಗೆ ತಮ್ಮ ಪೋಸ್ಟ್ ಕೊನೆಯಲ್ಲಿ DVC (ಧನಶ್ರೀ ವರ್ಮಾ ಚಹಾಲ್) ಬರೆಯುವ ಮೂಲಕ ಧನಶ್ರೀ ಉತ್ತರ ನೀಡಿದ್ದಾರೆ. ಈ ಮೂಲಕ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಮತ್ತೊಂದೆಡೆ ಇದೇ ಪೋಸ್ಟ್‌ಗೆ ಪತಿ ಯುಜ್ವೇಂದ್ರ ಚಹಾಲ್ ಕೂಡ ಮೈ ವುಮನ್ ಕಾಮೆಂಟ್ ಮಾಡುವ ಮೂಲಕ ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ.