ಚಾಂಪಿಯನ್ಸ್ ಟ್ರೋಫಿಯ 8ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ್ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಲಾಹೋರ್ನ ಗದ್ದಾಫಿ ಸ್ಟೇಡಿಯಂನಲ್ಲಿ ಇಂದು (ಫೆ.26) ನಡೆಯಲಿರುವ ಈ ಪಂದ್ಯದಲ್ಲಿ ಸೋತ ತಂಡ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬೀಳಲಿದೆ. ಏಕೆಂದರೆ ಇದಕ್ಕೂ ಮುನ್ನ ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ತಂಡವು 5 ವಿಕೆಟ್ಗಳಿಂದ ಪರಾಜಯಗೊಂಡಿತ್ತು. ಇತ್ತ ಸೌತ್ ಆಫ್ರಿಕಾ ವಿರುದ್ದ ಅಫ್ಘಾನಿಸ್ತಾನ್ 107 ರನ್ಗಳ ಹೀನಾಯ ಸೋಲನುಭವಿಸಿತ್ತು. ಈ ಸೋಲುಗಳೊಂದಿಗೆ ಗ್ರೂಪ್-ಬಿ ಅಂಕ ಪಟ್ಟಿಯಲ್ಲಿ ಉಭಯ ತಂಡಗಳು ಕೊನೆಯ ಎರಡು ಸ್ಥಾನಗಳಲ್ಲಿದೆ.
ಇನ್ನು ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ತಂಡಗಳು ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದೆ. ಉಭಯ ತಂಡಗಳು ಮೊದಲ ಪಂದ್ಯವನ್ನು ಗೆದ್ದು ತಲಾ 2 ಅಂಕಗಳನ್ನು ಪಡೆದುಕೊಂಡರೆ, ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯವು ಮಳೆಯ ಕಾರಣ ರದ್ದಾಗಿದೆ. ಹೀಗಾಗಿ ತಲಾ ಒಂದೊಂದು ಅಂಕಗಳನ್ನು ಹಂಚಿಕೊಂಡಿದೆ.
ಅದರಂತೆ ಇದೀಗ ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ತಲಾ 3 ಅಂಕಗಳನ್ನು ಹೊಂದಿದೆ. ಉಭಯ ತಂಡಗಳಿಗೆ ಇನ್ನೂ ಒಂದು ಪಂದ್ಯಗಳಿದ್ದು, ಈ ಮ್ಯಾಚ್ನಲ್ಲಿ ಗೆಲ್ಲುವ ಮೂಲಕ ಒಟ್ಟು 5 ಅಂಕಗಳನ್ನು ಪಡೆಯಬಹುದು.
ಇತ್ತ ಇಂದಿನ ಪಂದ್ಯದಲ್ಲಿ ಸೋಲುವ ತಂಡ ಕೊನೆಯ ಮ್ಯಾಚ್ನಲ್ಲಿ ಗೆದ್ದರೂ ಕೇವಲ 2 ಅಂಕಗಳನ್ನು ಮಾತ್ರ ಪಡೆಯಲಿದೆ. ಆದರೆ ಅದಾಗಲೇ ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ತಲಾ 3 ಅಂಕಗಳನ್ನು ಹೊಂದಿರುವ ಕಾರಣ ಇಂದು ಸೋಲುವ ತಂಡಕ್ಕೆ ಸೆಮಿಫೈನಲ್ಗೆ ಪ್ರವೇಶಿಸುವ ಅವಕಾಶ ಇರುವುದಿಲ್ಲ.
ಹೀಗಾಗಿ ಇಂದಿನ ಪಂದ್ಯವು ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ್ ತಂಡಗಳಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನ್ನಬಹುದು. ಈ ಪಂದ್ಯದಲ್ಲಿ ಯಾರು ಸೋಲುತ್ತಾರೋ ಅವರ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಅಂತ್ಯಗೊಳ್ಳಲಿದೆ.