PAK vs NZ: ಚಾಂಪಿಯನ್ ಟ್ರೋಫಿಗೆ ಇಂದು ಚಾಲನೆ: ಉದ್ಘಾಟನಾ ಪಂದ್ಯದಲ್ಲಿ ಪಾಕ್-ನ್ಯೂಝಿಲೆಂಡ್ ಮುಖಾಮುಖಿ
Pakistan vs New Zealand: 2025 ರ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನ್ಯೂಝಿಲೆಂಡ್ ಮುಖಾಮುಖಿಯಾಗಲಿವೆ. ಈ ಪಂದ್ಯವು ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ, ಪಂದ್ಯದ ಟಾಸ್ ಮಧ್ಯಾಹ್ನ 2 ಗಂಟೆಗೆ ನಡೆಯಲಿದ್ದು, ಪಂದ್ಯ ಮಧ್ಯಾಹ್ನ 2:30 ಕ್ಕೆ ಆರಂಭವಾಗಲಿದೆ.

ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ ಟ್ರೋಫಿ ಟೂರ್ನಿಯ 9ನೇ ಆವೃತ್ತಿಗೆ ಇಂದು ಚಾಲನೆ ಸಿಗಲಿದೆ. ಮಿನಿ ವಿಶ್ವಕಪ್ ಎಂದೇ ಕರೆಯಲ್ಪಡುವ ಈ ಪಂದ್ಯಾವಳಿಯನ್ನು ಸುಮಾರು ಎಂಟು ವರ್ಷಗಳ ನಂತರ ನಡೆಸಲಾಗುತ್ತಿದೆ. ಐಸಿಸಿ ಈ ಪಂದ್ಯಾವಳಿಯನ್ನು 1998 ರಲ್ಲಿ ಪ್ರಾರಂಭಿಸಿತು. ಚಾಂಪಿಯನ್ಸ್ ಟ್ರೋಫಿಯನ್ನು ಕೊನೆಯ ಬಾರಿಗೆ 2017 ರಲ್ಲಿ ಆಡಲಾಗಿತ್ತು. ಆಗ ಪಾಕಿಸ್ತಾನ ಪ್ರಶಸ್ತಿ ಗೆದ್ದಿತ್ತು. ಈ ಬಾರಿ ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸುತ್ತಿದ್ದು, ಟೂರ್ನಿಯ ಮೊದಲ ಪಂದ್ಯ ಪಾಕಿಸ್ತಾನ ಮತ್ತು ನ್ಯೂಝಿಲೆಂಡ್ ನಡುವೆ ನಡೆಯಲಿದೆ.
2025 ರ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನ್ಯೂಝಿಲೆಂಡ್ ಮುಖಾಮುಖಿಯಾಗಲಿವೆ. ಈ ಪಂದ್ಯವು ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ, ಪಂದ್ಯದ ಟಾಸ್ ಮಧ್ಯಾಹ್ನ 2 ಗಂಟೆಗೆ ನಡೆಯಲಿದ್ದು, ಪಂದ್ಯ ಮಧ್ಯಾಹ್ನ 2:30 ಕ್ಕೆ ಆರಂಭವಾಗಲಿದೆ. ಇತ್ತೀಚೆಗೆ ಪಾಕಿಸ್ತಾನದಲ್ಲಿ ತ್ರಿಕೋನ ಸರಣಿಯನ್ನು ಆಡಲಾಯಿತು, ಇದರಲ್ಲಿ ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ನ್ಯೂಝಿಲೆಂಡ್ ಭಾಗವಹಿಸಿದ್ದವು. ಈ ತ್ರಿಕೋನ ಸರಣಿಯನ್ನು ಕಿವೀಸ್ ತಂಡ ಗೆದ್ದಿತ್ತು.
ಕರಾಚಿ ಪಿಚ್ ವರದಿ:
ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಸೂಕ್ತವಾಗಿದೆ. ಹೈ- ಸ್ಕೋರಿಂಗ್ ಪಂದ್ಯವನ್ನು ಇಲ್ಲಿ ನೋಡಬಹುದು. ಇದೇ ಮೈದಾನದಲ್ಲಿ ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 353 ರನ್‌ಗಳ ಟಾರ್ಗೆಟ್ ಬೆನ್ನಟ್ಟಿತ್ತು. ಚೇಸಿಂಗ್ ತಂಡಕ್ಕೆ ಗೆಲ್ಲುವ ಹೆಚ್ಚಿನ ಅವಕಾಶವಿರುತ್ತದೆ. ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಬಹುದು. ಈ ಮೈದಾನದಲ್ಲಿ ನಡೆದಿರುವ 78 ಏಕದಿನ ಪಂದ್ಯಗಳಲ್ಲಿ, ಮೊದಲು ಬ್ಯಾಟ್ ಮಾಡಿದ ತಂಡ 36 ಬಾರಿ ಗೆದ್ದಿದ್ದರೆ, ನಂತರ ಬ್ಯಾಟ್ ಮಾಡಿದ ತಂಡ 39 ಬಾರಿ ಗೆದ್ದಿದೆ.
ಹವಾಮಾನ ಹೇಗಿರುತ್ತದೆ?
ಕರಾಚಿಯಲ್ಲಿ ಹಗಲಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಬಿಸಿಲಿನಿಂದ ಕೂಡಿರಲಿದೆ. ಹೀಗಾಗಿ ಹವಾಮಾನವು ಪಂದ್ಯಕ್ಕೆ ಅನುಕೂಲಕರವಾಗಿರುತ್ತದೆ. 54% ಆರ್ದ್ರತೆಯೊಂದಿಗೆ 10% ಮಳೆಯಾಗುವ ನಿರೀಕ್ಷೆಯಿದೆ. ಗಾಳಿಯು ಗಂಟೆಗೆ 21 ಕಿ.ಮೀ ವೇಗದಲ್ಲಿ ಬೀಸಲಿದ್ದು, ಹವಾಮಾನವು ಆಹ್ಲಾದಕರವಾಗಿರುತ್ತದೆ.
ಪಾಕಿಸ್ತಾನ ಸಂಭಾವ್ಯ ಪ್ಲೇಯಿಂಗ್ XI ತಂಡ – ಫಖರ್ ಜಮಾನ್, ಬಾಬರ್ ಅಜಮ್, ಸೌದ್ ಶಕೀಲ್, ಮೊಹಮ್ಮದ್ ರಿಜ್ವಾನ್ (ನಾಯಕ ಮತ್ತು ವಿಕೆಟ್ ಕೀಪರ್), ಸಲ್ಮಾನ್ ಆಘಾ, ತಯ್ಯಬ್ ತಾಹಿರ್, ಖುಶ್ದಿಲ್ ಶಾ, ಶಾಹೀನ್ ಅಫ್ರಿದಿ, ನಸೀಮ್ ಶಾ, ಅಬ್ರಾರ್ ಅಹ್ಮದ್ ಮತ್ತು ಹ್ಯಾರಿಸ್ ರೌಫ್.
ನ್ಯೂಝಿಲೆಂಡ್ ಸಂಭಾವ್ಯ ಪ್ಲೇಯಿಂಗ್ XI ತಂಡ – ರಾಚಿನ್ ರವೀಂದ್ರ, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್, ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಮ್ಯಾಟ್ ಹೆನ್ರಿ, ಜಾಕೋಬ್ ಡಫಿ ಮತ್ತು ವಿಲ್ ಒ’ರೂರ್ಕ್.
ಭಾರತದ ಪಂದ್ಯ ಯಾವಾಗ?:
ಫೆಬ್ರವರಿ 20 ರಂದು (ನಾಳೆ) ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ 2ನೇ ಪಂದ್ಯದಲ್ಲಿ ಭಾರತ ತಂಡ ಕಣಕ್ಕಿಳಿಯಲಿದೆ. ಈ ಮ್ಯಾಚ್ನಲ್ಲಿ ಟೀಮ್ ಇಂಡಿಯಾದ ಎದುರಾಳಿ ಬಾಂಗ್ಲಾದೇಶ ತಂಡ. ಈ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ಭಾರತ ತಂಡದ 2ನೇ ಎದುರಾಳಿ ಪಾಕಿಸ್ತಾನ. ಹೈವೋಲ್ಟೇಜ್ ಪೈಪೋಟಿಗೆ ಸಾಕ್ಷಿಯಾಗಲಿರುವ ಈ ಪಂದ್ಯವು ಫೆಬ್ರವರಿ 23 ರಂದು ನಡೆಯಲಿದೆ. ಈ ಪಂದ್ಯ ಕೂಡ ದುಬೈ ಅಂತಾರಾಷ್ಟ್ಟೀಯ ಸ್ಟೇಡಿಯಂನಲ್ಲೇ ಜರುಗಲಿದೆ. ಟೀಮ್ ಇಂಡಿಯಾ ತನ್ನ ಕೊನೆಯ ಲೀಗ್ ಮ್ಯಾಚ್ನಲ್ಲಿ ನ್ಯೂಝಿಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಮಾರ್ಚ್ 2 ರಂದು ದುಬೈನಲ್ಲೇ ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ