Champions Trophy 2025: ಉದ್ಘಾಟನಾ ಸಮಾರಂಭ ರದ್ದು..! ಕ್ರೀಡಾಂಗಣಳೇ ಸಿದ್ಧವಾಗಿಲ್ಲ
Champions Trophy 2025: ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಸಮಾರಂಭವನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಇತರ ಸರಣಿಗಳಲ್ಲಿ ತೊಡಗಿರುವುದು ಮತ್ತು ಲಾಹೋರ್ ಹಾಗೂ ಕರಾಚಿಯ ಕ್ರೀಡಾಂಗಣಗಳ ನವೀಕರಣ ಕಾರ್ಯಗಳು ವಿಳಂಬವಾಗಿರುವುದು ಇದಕ್ಕೆ ಕಾರಣ ಎನ್ನಲಾಗಿದೆ. ಈ ನಿರ್ಧಾರದಿಂದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಾಕಿಸ್ತಾನಕ್ಕೆ ಭೇಟಿ ನೀಡುವುದಿಲ್ಲ ಎಂದು ಖಚಿತವಾಗಿದೆ. ಕ್ರೀಡಾಂಗಣಗಳ ಸಿದ್ಧತೆಯ ಕೊರತೆಯು ಪಿಸಿಬಿಗೆ ದೊಡ್ಡ ಸವಾಲಾಗಿದೆ.

ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಇನ್ನು ಕೇವಲ 3 ವಾರಗಳು ಮಾತ್ರ ಉಳಿದಿವೆ. ಆದಾಗ್ಯೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಲಾಹೋರ್ ಮತ್ತು ಕರಾಚಿಯ ಕ್ರೀಡಾಂಗಣಗಳನ್ನು ಸಮಯಕ್ಕೆ ಸರಿಯಾಗಿ ಸಿದ್ಧಪಡಿಸುತ್ತದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ಇದೆಲ್ಲದರ ನಡುವೆ ಮತ್ತೊಂದು ಅಚ್ಚರಿಯ ಸಂಗತಿಯೊಂದು ಹೊರಬಿದ್ದಿದೆ. ವರದಿಗಳ ಪ್ರಕಾರ, ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಸಮಾರಂಭವನ್ನು ರದ್ದುಗೊಳಿಸಲು ಪಿಸಿಬಿ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಟೂರ್ನಿಗೂ ಮುನ್ನ ಯಾವುದೇ ಪತ್ರಿಕಾಗೋಷ್ಠಿ ಹಾಗೂ ನಾಯಕರ ಅಧಿಕೃತ ಫೋಟೋಶೂಟ್ ಇರುವುದಿಲ್ಲ ಎಂತಲೂ ವರದಿಯಾಗಿದೆ.
ಉದ್ಘಾಟನಾ ಸಮಾರಂಭ ರದ್ದಾಗಲು ಕಾರಣವೇನು?
ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಸಮಾರಂಭ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲು ಪಾಕಿಸ್ತಾನಿ ಮಂಡಳಿ ನಿರ್ಧರಿಸಿದೆ ಎಂದು ಪಾಕಿಸ್ತಾನಿ ಮಾಧ್ಯಮ ವರದಿಗಳು ಹೇಳುತ್ತಿವೆ. ಉಭಯ ತಂಡಗಳು ನಿಗದಿತ ಸಮಯಕ್ಕೆ ಪಾಕಿಸ್ತಾನ ತಲುಪಲು ಸಾಧ್ಯವಾಗದಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಈ ಎರಡು ತಂಡಗಳು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್. ಪ್ರಸ್ತುತ ಶ್ರೀಲಂಕಾ ಮತ್ತು ಭಾರತದಲ್ಲಿ ವಿಭಿನ್ನ ಸರಣಿಗಳಲ್ಲಿ ಈ ಎರಡೂ ತಂಡಗಳು ನಿರತವಾಗಿವೆ. ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವೆ ಟೆಸ್ಟ್ ಸರಣಿ ನಡೆಯುತ್ತಿದ್ದು, ಇದರಲ್ಲಿ ಚಾಂಪಿಯನ್ಸ್ ಟ್ರೋಫಿ ತಂಡದ ಕೆಲವು ಆಟಗಾರರು ಸಹ ಸೇರಿದ್ದಾರೆ. ಇತ್ತ ಇಂಗ್ಲೆಂಡ್ ತಂಡ ಕೂಡ ಪ್ರಸ್ತುತ ಭಾರತದಲ್ಲಿ ಟಿ20 ಸರಣಿಯನ್ನು ಆಡುತ್ತಿದ್ದು, ಆ ನಂತರ ಏಕದಿನ ಸರಣಿಯನ್ನು ಸಹ ಆಡಲಿದೆ.
ಉದ್ಘಾಟನಾ ಸಮಾರಂಭ ಮಾತ್ರವಲ್ಲ, ಪ್ರತಿ ಐಸಿಸಿ ಕಾರ್ಯಕ್ರಮಕ್ಕೂ ಮುನ್ನ ಎಲ್ಲಾ ತಂಡಗಳ ನಾಯಕರ ಪತ್ರಿಕಾಗೋಷ್ಠಿಯೂ ಇರುತ್ತದೆ. ನಂತರ ನಾಯಕರು ಪಂದ್ಯಾವಳಿಯ ಟ್ರೋಫಿಯೊಂದಿಗೆ ಫೋಟೋಶೂಟ್ ಕೂಡ ಮಾಡುತ್ತಾರೆ. ಆದರೆ ಈಗ ಈ ಎಲ್ಲಾ ಕಾರ್ಯಕ್ರಮಗಳು ರದ್ದಾಗುವ ಸಾಧ್ಯತೆಗಳಿವೆ. ಈ ಮೂಲಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಾಕಿಸ್ತಾನಕ್ಕೆ ತೆರಳಲಿದ್ದಾರೆ ಎಂಬ ಊಹಾಪೋಹಗಳಿಗೆ ತೆರೆ ಬಿದ್ದಿದೆ. ವಾಸ್ತವವಾಗಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪತ್ರಿಕಾಗೋಷ್ಠಿಗಾಗಿ ಪಾಕಿಸ್ತಾನಕ್ಕೆ ಹೋಗಬಹುದು ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಈಗ ಈವೆಂಟ್ ಅನ್ನು ರದ್ದುಗೊಳಿಸುವ ಸಾಧ್ಯತೆಗಳಿದ್ದು, ರೋಹಿತ್ ಶರ್ಮಾ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂಬುದು ಖಚಿತವಾಗಿದೆ.
ಕ್ರೀಡಾಂಗಣ ಸಿದ್ಧವಾಗಿಲ್ಲ
ಈ ಹಿನ್ನಡೆಯ ಜೊತೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಕ್ರೀಡಾಂಗಣಗಳು ಸಿದ್ಧವಾಗದೆ ಇರುವುದು ಕೂಡ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ವಾಸ್ತವವಾಗಿ ಚಾಂಪಿಯನ್ಸ್ ಟ್ರೋಫಿಗಾಗಿಯೇ ಪಾಕ್ ಕ್ರಿಕೆಟ್ ಮಂಡಳಿ, ದೇಶದ ಪ್ರಮುಖ ಕ್ರೀಡಾಂಗಣಳಾದ ಲಾಹೋರ್ ಮತ್ತು ಕರಾಚಿಯ ಕ್ರೀಡಾಂಗಣಗಳ ನವೀಕರಣ ಕೆಲಸವನ್ನು ತಿಂಗಳುಗಳ ಹಿಂದೆಯೇ ಆರಂಭಿಸಿತ್ತು. ಆದರೆ ಐಸಿಸಿ ನೀಡಿರುವ ಗಡುವು ಮುಗಿದರೂ ಈ ಎರಡು ಕ್ರೀಡಾಂಗಣಗಳು ಟೂರ್ನಿಗೆ ಸಿದ್ಧವಾಗಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಐಸಿಸಿ ಯಾವ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ