IND vs ENG: ಟೀಂ ಇಂಡಿಯಾಕ್ಕೆ ಟೆನ್ಷನ್ ಶುರು; ಪುಣೆ, ಮುಂಬೈನಲ್ಲಿನ ಪ್ರದರ್ಶನವೇ ಇದಕ್ಕೆ ಕಾರಣ
IND vs ENG: ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 26 ರನ್‌ಗಳ ಸೋಲು ಅನುಭವಿಸಿತು. ಹೀಗಾಗಿ ಪುಣೆ ಮತ್ತು ಮುಂಬೈನಲ್ಲಿ ನಡೆಯುವ ಕೊನೆಯ ಎರಡು ಪಂದ್ಯಗಳು ಟೀಂ ಇಂಡಿಯಾಕ್ಕೆ ನಿರ್ಣಾಯಕವಾಗಿದೆ. ಆದರೆ ಈ ಮೈದಾನಗಳಲ್ಲಿ ಭಾರತದ ಹಿಂದಿನ ದಾಖಲೆಗಳು ಕಳಪೆಯಾಗಿರುವ ಕಾರಣ ಭಾರತ ಯುವ ಪಡೆಗೆ ದೊಡ್ಡ ಸವಾಲು ಎದುರಾಗಿದೆ.

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲೆರಡು ಪಂದ್ಯಗಳನ್ನು ನೀರು ಕುಡಿದಷ್ಟೇ ಸುಲಭವಾಗಿ ಗೆದ್ದುಕೊಂಡಿದ್ದ ಟೀಂ ಇಂಡಿಯಾ, ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಟಿ20ಯಲ್ಲಿ 26 ರನ್‌ಗಳ ಅಂತರದಿಂದ ಸೋಲನುಭವಿಸಿತ್ತು. ಗೆಲುವಿಗೆ 171 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾಕ್ಕೆ ಬ್ಯಾಟ್ಸ್ಮನ್ಗಳ ಕಳಪೆ ಪ್ರದರ್ಶನ ಸೋಲಿನ ಆಘಾತ ನೀಡಿತು. ಇದೀಗ ನಾಲ್ಕನೇ ಮತ್ತು ಐದನೇ ಪಂದ್ಯಕ್ಕೆ ತಯಾರಿ ನಡೆಸಿರುವ ಸೂರ್ಯ ಪಡೆಗೆ ಸರಣಿ ಸೋಲಿನ ಆತಂಕ ಎದುರಾಗಿದೆ. ಇದಕ್ಕೆ ಕಾರಣ ಕೊನೆಯ ಎರಡು ಪಂದ್ಯಗಳು ನಡೆಯುವ ಮೈದಾನದಲ್ಲಿ ತಂಡದ ಕಳಪೆ ಪ್ರದರ್ಶನ.
ಪುಣೆ, ಮುಂಬೈನಲ್ಲಿ ಪ್ರದರ್ಶನ ಅಷ್ಟಕಷ್ಟೆ
ಸದ್ಯ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ 2-1 ಮುನ್ನಡೆ ಸಾಧಿಸಿದೆ. ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಸೋಲನುಭವಿಸದೇ ಇದ್ದಿದ್ದರೆ ಸರಣಿ ಟೀಂ ಇಂಡಿಯಾದ ಕೈಸೇರುತ್ತಿತ್ತು. ಆದರೆ ಮೂರನೇ ಟಿ20ಯಲ್ಲಿ ಇಂಗ್ಲೆಂಡ್ ತಂಡದ ಕೆಳಕ್ರಮಾಂಕದ ಬ್ಯಾಟರ್ಗಳು 20 ರನ್‌ಗಳ ಜೊತೆಯಾಟ ನಡೆಸಲು ಅವಕಾಶ ಮಾಡಿಕೊಟ್ಟಿದ ಭಾರತ ತಂಡಕ್ಕೆ ಕೊನೆಯಲ್ಲಿ 26 ರನ್‌ಗಳ ಸೋಲು ಎದುರಾಗಿತ್ತು. ಒಂದು ವೇಳೆ ಆ ಜೊತೆಯಾಟ ಬರದಿದ್ದರೆ, ಟೀಂ ಇಂಡಿಯಾಕ್ಕೆ ಗುರಿ ಮತ್ತಷ್ಟು ಕಡಿಮೆಯಾಗುತ್ತಿದ್ದರಿಂದ ತಂಡ ಗೆಲ್ಲುವ ಸಾಧ್ಯತೆಗಳು ಹೆಚ್ಚಿರುತ್ತಿದ್ದವು. ಆದರೆ ತನ್ನ ತಪ್ಪಿಗೆ ಸೋಲಿನ ದಂಡ ತೆತ್ತಿರುವ ಟೀಂ ಇಂಡಿಯಾಕ್ಕೆ ಕೊನೆಯ ಎರಡು ಪಂದ್ಯಗಳನ್ನು ಸೋಲುವ ಭೀತಿ ಎದುರಾಗಿದೆ.
ಪುಣೆಯಲ್ಲಿ ಗೆಲುವಿನ ಭರವಸೆ ಫಿಫ್ಟಿ-ಫಿಫ್ಟಿ!
ಪುಣೆಯಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ನಾಲ್ಕನೇ ಟಿ20 ಆಡಬೇಕಿದೆ. ಆದರೆ, ಈ ಮೈದಾನದಲ್ಲಿ ಟೀಂ ಇಂಡಿಯಾದ ದಾಖಲೆ ನೋಡಿದರೆ ಗೆಲುವಿನ ಸಾಧ್ಯತೆಗಳು ತೀರ ಕಡಿಮೆ. ಏಕೆಂದರೆ ಭಾರತ ಇದುವರೆಗೆ ಪುಣೆಯಲ್ಲಿ 4 ಟಿ20 ಪಂದ್ಯಗಳನ್ನು ಆಡಿದ್ದು, 2ರಲ್ಲಿ ಸೋಲು ಕಂಡಿದೆ. ಹೀಗಿರುವಾಗ ಟೀಂ ಇಂಡಿಯಾ ಗೆಲುವಿನ ಬಗ್ಗೆ ಸಂಪೂರ್ಣ ಭರವಸೆ ನೀಡಲು ಸಾಧ್ಯವಿಲ್ಲ. ಅದರಲ್ಲೂ ಹಿಂದೆಂದೂ ಟಿ20 ಪಂದ್ಯ ಆಡದ ರಾಜ್ ಕೋಟ್ನಲ್ಲಿ ಇಂಗ್ಲೆಂಡ್ ತಂಡ ಪಂದ್ಯ ಗೆದ್ದು ಬರುತ್ತಿದೆ.
ಮುಂಬೈನಲ್ಲಿ ಇಂಗ್ಲೆಂಡ್ ಎದುರು ಸೋಲು
ಇದೀಗ ಪುಣೆಯಲ್ಲಿ ನಡೆಯಲಿರುವ ನಾಲ್ಕನೇ ಟಿ20ಯಲ್ಲಿ ಭಾರತ ಗೆಲುವು ಸಾಧಿಸದಿದ್ದರೆ ಸರಣಿ ಗೆಲ್ಲುವ ಆಸೆಯೊಂದಿಗೆ ಸೂರ್ಯ ಪಡೆ ಮುಂಬೈ ಅಂಗಳಕ್ಕೆ ಕಾಲಿಡಲಿದೆ. ಮುಂಬೈನಲ್ಲಿ ನಡೆಯಲಿರುವ 5ನೇ ಟಿ20 ಎರಡೂ ತಂಡಗಳಿಗೆ ನಿರ್ಣಾಯಕವಾಗಲಿದೆ. ಏಕೆಂದರೆ ಪುಣೆಯಲ್ಲೂ ಇಂಗ್ಲೆಂಡ್ ಗೆದ್ದರೆ ಸರಣಿ 2-2ರಲ್ಲಿ ಸಮಬಲವಾಗಲಿದೆ. ಈಗ ಆ ಪರಿಸ್ಥಿತಿಯಲ್ಲಿ ಮುಂಬೈನಲ್ಲಿ ಟೀಂ ಇಂಡಿಯಾ ಗೆಲುವು ದಾಖಲಿಸಲು ಸಾಧ್ಯವೇ? ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಏಕೆಂದರೆ ಮುಂಬೈನ ವಾಂಖೆಡೆ ಮೈದಾನದಲ್ಲಿ ಟೀಂ ಇಂಡಿಯಾ 5 ಟಿ20 ಪಂದ್ಯಗಳನ್ನು ಆಡಿದ್ದು, 3ರಲ್ಲಿ ಗೆದ್ದು 2ರಲ್ಲಿ ಸೋತಿದೆ. ಇದರ ಜೊತೆಗೆ ಇನ್ನೊಂದು ಆತಂಕಕ್ಕಾರಿ ಸಂಗತಿಯೆಂದರೆ, ವಾಂಖೆಡೆಯಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಆಡಿದ ಏಕೈಕ ಪಂದ್ಯದಲ್ಲಿ ಸೋಲನ್ನು ಎದುರಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
