Ranji Trophy: ಎರಡಂಕಿ ರನ್ಗಳಿಸಿ ಕೆಎಲ್ ರಾಹುಲ್ ಔಟ್
KL Rahul: ಕೆಎಲ್ ರಾಹುಲ್ ಕೊನೆಯ ಬಾರಿ ಕರ್ನಾಟಕ ಪರ ಕಣಕ್ಕಿಳಿದದ್ದು 2020 ರಲ್ಲಿ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಬಂಗಾಳ ವಿರುದ್ಧ ಬ್ಯಾಟ್ ಬೀಸಿದ್ದ ರಾಹುಲ್ ಮೊದಲ ಇನಿಂಗ್ಸ್ನಲ್ಲಿ 26 ರನ್ ಬಾರಿಸಿದ್ದರು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಇದಾದ ಬಳಿಕ ರಾಹುಲ್ ಮತ್ತೆ ರಣಜಿ ಪಂದ್ಯವಾಡಿರಲಿಲ್ಲ. ಇದೀಗ 4 ವರ್ಷಗಳ ಬಳಿಕ ಕೆಎಲ್ಆರ್ ದೇಶೀಯ ಅಂಗಳದಲ್ಲಿ ಕಾಣಿಸಿಕೊಂಡಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಗ್ರೂಪ್-ಸಿ ಪಂದ್ಯದಲ್ಲಿ ಕಣಕ್ಕಿಳಿದಿರುವ ಕೆಎಲ್ ರಾಹುಲ್ ಕೇವಲ 22 ರನ್ಗಳಿಸಿ ಔಟಾಗಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಹರ್ಯಾಣ ತಂಡದ ನಾಯಕ ಅಂಕಿತ್ ಕುಮಾರ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಅದರಂತೆ ಇನಿಂಗ್ಸ್ ಆರಂಭಿಸಿದ ಕರ್ನಾಟಕ ಪರ ಅನೀಶ್ ಕೆವಿ ಹಾಗೂ ಮಯಾಂಕ್ ಅಗರ್ವಾಲ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ ಕೇವಲ 17 ರನ್ಗಳಿಸಿ ಅನೀಶ್ ವಿಕೆಟ್ ಒಪ್ಪಿಸಿದ್ದಾರೆ.
ಈ ವೇಳೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೆಎಲ್ ರಾಹುಲ್ ನಾಯಕ ಮಯಾಂಕ್ ಅಗರ್ವಾಲ್ ಜೊತೆಗೂಡಿ ಇನಿಂಗ್ಸ್ ಕಟ್ಟುವ ಜವಾಬ್ದಾರಿ ಹೊತ್ತುಕೊಂಡರು. ಅದರಂತೆ ಎಚ್ಚರಿಕೆಯ ಬ್ಯಾಟಿಂಗ್ಗೆ ಒತ್ತು ನೀಡಿದ ರಾಹುಲ್ ರಕ್ಷಣಾತ್ಮಕ ಆಟದೊಂದಿಗೆ ಇನಿಂಗ್ಸ್ ಕಟ್ಟಿದರು.
ಆದರೆ 37 ಎಸೆತಗಳಲ್ಲಿ 4 ಫೋರ್ಗಳೊಂದಿಗೆ 26 ರನ್ ಬಾರಿಸಿದ್ದ ಕೆಎಲ್ ರಾಹುಲ್ ಅವರನ್ನು ಔಟ್ ಮಾಡುವಲ್ಲಿ ಅನ್ಶುಲ್ ಕಂಬೋಜ್ ಯಶಸ್ವಿಯಾಗಿದ್ದಾರೆ. ಇದರೊಂದಿಗೆ 4 ವರ್ಷಗಳ ಬಳಿಕ ರಣಜಿ ಟೂರ್ನಿಗೆ ಮರಳಿದ ರಾಹುಲ್ ಅವರ ಮೊದಲ ಇನಿಂಗ್ಸ್ 26 ರನ್ಗಳೊಂದಿಗೆ ಅಂತ್ಯಗೊಂಡಿದೆ.
ಇದಾಗ್ಯೂ ಮತ್ತೊಂದೆಡೆ ಮಯಾಂಕ್ ಅಗರ್ವಾಲ್ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ್ದು, 135 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 77 ರನ್ ಬಾರಿಸಿದ್ದಾರೆ. ಈ ಅಜೇಯ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡವು 45 ಓವರ್ಗಳ ಮುಕ್ತಾಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 143 ರನ್ ಕಲೆಹಾಕಿದೆ. ಸದ್ಯ ಕ್ರೀಸ್ನಲ್ಲಿ ಮಯಾಂಕ್ ಅಗರ್ವಾಲ್ ಹಾಗೂ ದೇವದತ್ ಪಡಿಕ್ಕಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಕರ್ನಾಟಕ (ಪ್ಲೇಯಿಂಗ್ XI): ಅನೀಶ್ ಕೆವಿ, ಮಯಾಂಕ್ ಅಗರ್ವಾಲ್ (ನಾಯಕ), ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಸ್ಮರಣ್ ರವಿಚಂದ್ರನ್, ಕೃಷ್ಣನ್ ಶ್ರೀಜಿತ್ (ವಿಕೆಟ್ ಕೀಪರ್), ಹಾರ್ದಿಕ್ ರಾಜ್, ಯಶೋವರ್ಧನ್ ಪರಂತಪ್, ಪ್ರಸಿದ್ಧ್ ಕೃಷ್ಣ, ವಾಸುಕಿ ಕೌಶಿಕ್, ವಿಧ್ವತ್ ಕಾವೇರಪ್ಪ.
ಇದನ್ನೂ ಓದಿ: ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ವಿಶೇಷ ದಾಖಲೆ ಬರೆದ ಫಾಫ್ ಡುಪ್ಲೆಸಿಸ್
ಹರ್ಯಾಣ (ಪ್ಲೇಯಿಂಗ್ XI): ಲಕ್ಷ್ಯ ದಲಾಲ್, ಅಂಕಿತ್ ಕುಮಾರ್ (ನಾಯಕ), ಹಿಮಾಂಶು ರಾಣಾ, ನಿಶಾಂತ್ ಸಿಂಧು, ಧೀರು ಸಿಂಗ್, ರೋಹಿತ್ ಪರ್ಮೋದ್ ಶರ್ಮಾ (ವಿಕೆಟ್ ಕೀಪರ್), ಯುವರಾಜ್ ಯೋಗೇಂದರ್ ಸಿಂಗ್, ಜಯಂತ್ ಯಾದವ್, ಅನ್ಶುಲ್ ಕಾಂಬೋಜ್, ಅನುಜ್ ಥಕ್ರಾಲ್, ಅಜಿತ್ ಚಹಲ್.
