ಚೊಚ್ಚಲ ದ್ವಿಶತಕ ಸಿಡಿಸಿ ದಾಖಲೆ ಬರೆದ ಉಸ್ಮಾನ್ ಖ್ವಾಜಾ
Sri Lanka vs Australia: ಆಸ್ಟ್ರೇಲಿಯಾ ಪರ 78 ಟೆಸ್ಟ್ ಪಂದ್ಯಗಳನ್ನಾಡಿರುವ ಉಸ್ಮಾನ್ ಖ್ವಾಜಾ 16 ಶತಕ ಬಾರಿಸಿದ್ದರೂ ಒಮ್ಮೆಯೂ ದ್ವಿಶತಕದ ಗಡಿ ಮುಟ್ಟಲು ಸಾಧ್ಯವಾಗಿರಲಿಲ್ಲ. ಇದೀಗ 14 ವರ್ಷಗಳ ಬಳಿಕ ಉಸ್ಮಾನ್ ಖ್ವಾಜಾ ಚೊಚ್ಚಲ ದ್ವಿಶತಕ ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಡಬಲ್ ಸೆಂಚುರಿಯೊಂದಿಗೆ ಲಂಕಾ ಪಿಚ್ನಲ್ಲಿ ವಿಶೇಷ ದಾಖಲೆಯನ್ನು ಸಹ ಬರೆದಿದ್ದಾರೆ.

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟರ್ ಉಸ್ಮಾನ್ ಖ್ವಾಜಾ ಭರ್ಜರಿ ಡಬಲ್ ಸೆಂಚುರಿ ಸಿಡಿಸಿದ್ದಾರೆ. ಗಾಲೆ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡಿತು. ಆಸೀಸ್ ಪರ ಇನಿಂಗ್ಸ್ ಆರಂಭಿಸಿದ ಉಸ್ಮಾನ್ ಖ್ವಾಜಾ ಹಾಗೂ ಟ್ರಾವಿಸ್ ಹೆಡ್ ಮೊದಲ ವಿಕೆಟ್ಗೆ 92 ರನ್ ಪೇರಿಸಿದರು. ಈ ಹಂತದಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾಗಿ ಹೆಡ್ (57) ಔಟಾದರು.
ಆ ಬಳಿಕ ಬಂದ ಮಾರ್ನಸ್ ಲಾಬುಶೇನ್ (20) ಬೇಗನೆ ನಿರ್ಗಮಿಸಿದರು. ಈ ಹಂತದಲ್ಲಿ ಜೊತೆಗೂಡಿದ ಸ್ಟೀವ್ ಸ್ಮಿತ್ ಹಾಗೂ ಉಸ್ಮಾನ್ ಖ್ವಾಜಾ ಭರ್ಜರಿ ಜೊತೆಯಾಟ ಪ್ರದರ್ಶಿಸಿದರು. ಲಂಕಾ ಬೌಲರ್ಗಳನ್ನು ನಿರಾಯಾಸವಾಗಿ ಎದುರಿಸಿದ ಈ ಜೋಡಿಯು ಮೊದಲ ದಿನದಾಟದಲ್ಲೇ ಶತಕ ಪೂರೈಸಿದರು.
ಇನ್ನು ದ್ವಿತೀಯ ದಿನದಾಟದ ಆರಂಭದಲ್ಲೇ ಸ್ಟೀವ್ ಸ್ಮಿತ್ (141) ವಿಕೆಟ್ ಒಪ್ಪಿಸಿದರು. ಇದಾಗ್ಯೂ ಮತ್ತೊಂದೆಡೆ ಕ್ರೀಸ್ ಕಚ್ಚಿ ಆಡಿದ ಉಸ್ಮಾನ್ ಖ್ವಾಜಾ 290 ಎಸೆತಗಳಲ್ಲಿ ಚೊಚ್ಚಲ ದ್ವಿಶತಕ ಪೂರೈಸಿದರು. ಈ ಮೂಲಕ ಶ್ರೀಲಂಕಾದಲ್ಲಿ ಡಬಲ್ ಸೆಂಚುರಿ ಸಿಡಿಸಿದ ಮೊದಲ ಆಸ್ಟ್ರೇಲಿಯಾ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡರು.
ಈ ದ್ವಿಶತಕದೊಂದಿಗೆ ಬ್ಯಾಟಿಂಗ್ ಮುಂದುವರೆಸಿರುವ ಉಸ್ಮಾನ್ ಖ್ವಾಜಾ (204) ಇದೀಗ ಜೋಶ್ ಇಂಗ್ಲಿಸ್ (44) ಜೊತೆಗೂಡಿ ಇನಿಂಗ್ಸ್ ಕಟ್ಟುತ್ತಿದ್ದಾರೆ. ಭೋಜನ ವಿರಾಮದ ವೇಳೆಗೆ ಆಸ್ಟ್ರೇಲಿಯಾ ತಂಡವು 3 ವಿಕೆಟ್ ಕಳೆದುಕೊಂಡು 475 ರನ್ ಕಲೆಹಾಕಿದೆ.
ಶ್ರೀಲಂಕಾ ಪ್ಲೇಯಿಂಗ್ 11: ದಿಮುತ್ ಕರುಣಾರತ್ನೆ , ಓಷದ ಫೆರ್ನಾಂಡೋ , ದಿನೇಶ್ ಚಾಂಡಿಮಲ್ , ಏಂಜೆಲೊ ಮ್ಯಾಥ್ಯೂಸ್ , ಕಮಿಂದು ಮೆಂಡಿಸ್ , ಧನಂಜಯ ಡಿ ಸಿಲ್ವಾ (ನಾಯಕ) , ಕುಸಾಲ್ ಮೆಂಡಿಸ್ ( ವಿಕೆಟ್ ಕೀಪರ್ ) , ಪ್ರಭಾತ್ ಜಯಸೂರ್ಯ , ನಿಶಾನ್ ಪೀರಿಸ್ , ಜೆಫ್ರಿ ವಾಂಡರ್ಸೆ , ಅಸಿತ ಫೆರ್ನಾಂಡೋ.
ಇದನ್ನೂ ಓದಿ: ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ವಿಶೇಷ ದಾಖಲೆ ಬರೆದ ಫಾಫ್ ಡುಪ್ಲೆಸಿಸ್
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಉಸ್ಮಾನ್ ಖ್ವಾಜಾ , ಟ್ರಾವಿಸ್ ಹೆಡ್ , ಮಾರ್ನಸ್ ಲಾಬುಶೇನ್ , ಸ್ಟೀವನ್ ಸ್ಮಿತ್ (ನಾಯಕ) , ಜೋಶ್ ಇಂಗ್ಲಿಸ್ , ಬ್ಯೂ ವೆಬ್‌ಸ್ಟರ್ , ಅಲೆಕ್ಸ್ ಕ್ಯಾರಿ (ವಾಕ್) , ಮಿಚೆಲ್ ಸ್ಟಾರ್ಕ್ , ಮ್ಯಾಥ್ಯೂ ಕುಹ್ನೆಮನ್ , ನಾಥನ್ ಲಿಯಾನ್ , ಟಾಡ್ ಮರ್ಫಿ.