ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಣ ನಿರ್ಣಾಯಕ ಮೂರನೇ ಟೆಸ್ಟ್ ಪಂದ್ಯಕ್ಕೆ ಇಂದು ಚಾಲನೆ ಸಿಗಲಿದೆ. ಕೇಪ್ ಟೌನ್ನ (Cape Town) ನ್ಯೂಲ್ಯಾಂಡ್ಸ್ ಮೈದಾನ ಈ ರೋಚಕ ಕದನಕ್ಕೆ ಸಾಕ್ಷಿಯಾಗಲಿದೆ. ಸರಣಿ ಸಮಬಲಗೊಂಡಿರುವ ಕಾರಣ ಈ ಪಂದ್ಯದ ಮೇಲೆ ಉಭಯ ತಂಡಗಳ ಕಣ್ಣಿದೆ. ವಿರಾಟ್ ಕೊಹ್ಲಿ (Virat Kohli) ಪಡೆ ಈ ಟೆಸ್ಟ್ ಗೆದ್ದರೆ ಹರಿಣಗಳ ನಾಡಿನಲ್ಲಿ ಇದೇ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆದ್ದು ಇತಿಹಾಸ ಸೃಷ್ಟಿಸಿದಂತಾಗುತ್ತದೆ. ಹಾಗಾದ್ರೆ ಕೇಪ್ ಟೌನ್ ಪಿಚ್ ಯಾರಿಗೆ ಹೆಚ್ಚು ಸಹಕರಿಸಲಿದೆ?, ಇಲ್ಲಿನ ವಾತಾವರಣ ಹೇಗಿದೆ (Weather Report)?, ಪಂದ್ಯದ ಮೊದಲ ದಿನವೇ ಮಳೆರಾಯನ ಕಾಟ ಇದೆಯಾ? ಎಂಬ ಕುರಿತ ಮಾಹಿತಿ ಇಲ್ಲಿದೆ.
ಪಿಚ್ ಹೇಗಿದೆ?:
ನ್ಯೂಲ್ಯಾಂಡ್ಸ್ ಪಿಚ್ ಜೋಹಾನ್ಸ್‌ಬರ್ಗ್‌ಗಿಂತ ಭಿನ್ನವಾಗಿದೆ. ಜೊಹನ್ಸ್‌ಬರ್ಗ್ ಕ್ರೀಡಾಂಗಣ ಬೌಲರ್‌ಗಳಿಗೆ ಬೌನ್ಸ್ ರೂಪದಲ್ಲಿ ಸಾಕಷ್ಟು ನೆರವು ನೀಡಿತು. ಆದರೆ ಇಲ್ಲಿ ಬೌನ್ಸ್ ಇಲ್ಲದಿರುವುದರಿಂದಾಗಿ ಹಾಗೂ ಉತ್ತಮ ಔಟ್‌ಫೀಲ್ಡ್ ಅನ್ನು ಹೊಂದಿರುವ ಕಾರಣದಿಂದಾಗಿ ಬ್ಯಾಟ್ಸ್‌ಮನ್‌ಗಳ ಪಾಲಿಗೆ ಸುಲಭವಾಗಿರಲಿದೆ. ಆದರೆ ಈ ಪಿಚ್‌ನಲ್ಲಿ ಸ್ಪಿನ್ನರ್‌ಗಳು ಹೆಚ್ಚಿನ ನೆಲವು ನೀಡುವ ಸಾಧ್ಯತೆ ಕೂಡ ಇದೆ.
ಮಳೆ ಸಾಧ್ಯತೆ:
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿಯೂ ಮಳೆ ಅಡ್ಡಿಯುಂಟು ಮಾಡುವ ಸಾಧ್ಯತೆಯಿದೆ. ಅದರಲ್ಲೂ ಮೊದಲವೇ ದಿನ ಕೆಲ ಕಾಲ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದೆ. ವಾತಾವರಣದಲ್ಲಿನ ತೇವಾಂಶ ಕೂಡ ಹೆಚ್ಚಾಗಿರಲಿದ್ದು ಇದು ಮಳೆಯ ಸಾಧ್ಯತೆಯನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ. ಆದರೆ ಪಂದ್ಯದ ಫಲಿತಾಂಶಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿಲ್ಲ.
ಕೇಪ್ ಟೌನ್ನಲ್ಲಿ ಭಾರತ:
ಇಂದು ಆರಂಭವಾಗಲಿರುವ ಕೇಪ್ ಟೌನ್ ಮೈದಾನ ಭಾರತಕ್ಕೆ ಇದುವರೆಗೆ ಅದೃಷ್ಟವಾಗಿ ಪರಿಣಮಿಸಿಲ್ಲ. ಈ ಗ್ರೌಂಡ್ ನಲ್ಲಿ ಟೀಮ್ ಇಂಡಿಯಾ ಒಟ್ಟು ಐದು ಟೆಸ್ಟ್ ಪಂದ್ಯಗಳನ್ನು ಆಡಿದ್ದು ಮೂರರಲ್ಲಿ ಸೋಲು ಕಂಡಿದೆ. ಉಳಿದ ಎರಡು ಟೆಸ್ಟ್ ಮ್ಯಾಚ್ ಡ್ರಾನಲ್ಲಿ ಅಂತ್ಯಕಂಡಿದೆ. ಹೌದು, ಕೇಪ್ ಟೌನ್ನ ನ್ಯೂಲ್ಯಾಂಡ್ಸ್ ಮೈದಾನಲ್ಲಿ ಭಾರತ ತಂಡ ಇದುವರೆಗೆ ಒಂದೇ ಒಂದು ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿಲ್ಲ. ಆಡಿದ ಎಲ್ಲ ಪಂದ್ಯ ಡ್ರಾ ಮತ್ತು ಸೋಲು ಕಂಡಿದೆ. ಹೀಗಾಗಿ ಮೂರನೇ ಟೆಸ್ಟ್ನಲ್ಲಿ ಭಾರತಕ್ಕೆ ಕಮ್ಬ್ಯಾಕ್ ಮಾಡಲು ತುಂಬಾನೆ ಕಷ್ಟವಿದೆ.
ಮೂರನೇ ಟೆಸ್ಟ್ಗೆ ಸಂಭಾವ್ಯ ತಂಡ:
ಭಾರತ: ಕೆಎಲ್ ರಾಹುಲ್ (ಉಪ ನಾಯಕ), ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯಾ ರಹಾನೆ, ರಿಷಬ್ ಪಂತ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್/ಇಶಾಂತ್ ಶರ್ಮಾ.
ದಕ್ಷಿಣ ಆಫ್ರಿಕಾ: ಡೀನ್ ಎಲ್ಗರ್ (ನಾಯಕ), ಐಡೆನ್ ಮರ್ಕ್ರಾಮ್, ಕೀಗನ್ ಪೀಟರ್ಸನ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಟೆಂಬಾ ಬವುಮಾ, ಕೈಲ್ ವೆರ್ರೆನ್ (ವಿಕಟ್ ಕೀಪರ್), ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ, ಕೇಶವ್ ಮಹಾರಾಜ, ಲುಂಗಿ ಎನ್ಗಿಡಿ, ಡುವಾನ್ನೆ ಒಲಿವಿಯರ್.