Cheteshwar Pujara: ಆಫ್ರಿಕಾ ವಿರುದ್ಧದ ಅಗ್ನಿಪರೀಕ್ಷೆಗೂ ಮುನ್ನ ಮಹತ್ವದ ಮತುಗಳನ್ನಾಡಿದ ಚೇತೇಶ್ವರ್ ಪೂಜಾರ

| Updated By: Vinay Bhat

Updated on: Dec 24, 2021 | 9:34 AM

India vs South Africa: ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಇಂಡೋ- ಆಫ್ರಿಕಾ ಟೆಸ್ಟ್ ಸರಣಿ ಬಗ್ಗೆ ಮಾತನಾಡಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿನ ವೇಗಿಗಳ ಸ್ನೇಹಿ ಪಿಚ್‌ಗಳಲ್ಲಿ ಟ್ಯಾಕ್ಲಿಂಗ್‌ ಮಾಡಬಲ್ಲ ಸಾಮರ್ಥ್ಯ ಹಾಗೂ ಅನುಭವ ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ತಂಡದ ಬ್ಯಾಟಿಂಗ್‌ ವಿಭಾಗಕ್ಕಿದೆ ಎಂದು ಹೇಳಿದ್ದಾರೆ.

Cheteshwar Pujara: ಆಫ್ರಿಕಾ ವಿರುದ್ಧದ ಅಗ್ನಿಪರೀಕ್ಷೆಗೂ ಮುನ್ನ ಮಹತ್ವದ ಮತುಗಳನ್ನಾಡಿದ ಚೇತೇಶ್ವರ್ ಪೂಜಾರ
Cheteshwar Pujara
Follow us on

ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ (India vs South Africa) ನೆಲಕ್ಕೆ ಕಾಲಿಟ್ಟಿದ್ದು ಚೊಚ್ಚಲ ಟೆಸ್ಟ್ ಸರಣಿ ಜಯಿಸುವ ಮೇಲೆ ಕಣ್ಣಿಟ್ಟಿದೆ. ಈಗಾಗಲೇ ಹರಿಣಗಳ ನಾಡಿನಲ್ಲಿ ಬೀಡುಬಿಟ್ಟಿರುವ ವಿರಾಟ್ ಕೊಹ್ಲಿ (Virat Kohli) ಪಡೆ ಭರ್ಜರಿ ಅಭ್ಯಾಸದಲ್ಲಿ ನಿರತವಾಗಿದೆ. ಇದೇ ಡಿಸೆಂಬರ್ 26 ರಿಂದ ಬಾಕ್ಸಿಂಗ್ ಡೇ (Boxing Day Test) ಮೊದಲ ಟೆಸ್ಟ್ ಪಂದ್ಯ ಶುರುವಾಗಲಿದೆ. ಸಾಕಷ್ಟು ಕಾರಣಗಳಿಂದ ಭಾರತ ತಂಡಕ್ಕೆ ಈ ಟೆಸ್ಟ್ ಸರಣಿ ಮುಖ್ಯವಾಗಿದೆ. ಕಳೆದ 28 ವರ್ಷಗಳಿಂದ ಇಂಡೋ- ಆಫ್ರಿಕಾ (IND vs SA) ಸರಣಿ ನಡೆಯುತ್ತಿದೆ. ಆದರೆ, ಈವರೆಗೆ ಒಮ್ಮೆಯೂ ಆಫ್ರಿಕಾದಲ್ಲಿ ಭಾರತ ಟೆಸ್ಟ್ ಸರಣಿ ಜಯಿಸಿಲ್ಲ. ಹೀಗಾಗಿ ಟೀಮ್ ಇಂಡಿಯಾ (Team India) ಐತಿಹಾಸಿಕ ಸಾಧನೆ ಮಾಡುತ್ತಾ ಎಂಬುದು ನೋಡಬೇಕಿದೆ. ಸದ್ಯ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ (Cheteshwar Pujara) ಇಂಡೋ- ಆಫ್ರಿಕಾ ಟೆಸ್ಟ್ ಸರಣಿ ಬಗ್ಗೆ ಮಾತನಾಡಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿನ ವೇಗಿಗಳ ಸ್ನೇಹಿ ಪಿಚ್‌ಗಳಲ್ಲಿ ಟ್ಯಾಕ್ಲಿಂಗ್‌ ಮಾಡಬಲ್ಲ ಸಾಮರ್ಥ್ಯ ಹಾಗೂ ಅನುಭವ ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ತಂಡದ ಬ್ಯಾಟಿಂಗ್‌ ವಿಭಾಗಕ್ಕಿದೆ ಎಂದು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಚೇತೇಶ್ವರ್‌ ಪೂಜಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ವಿದೇಶಗಳಿಗೆ ಪ್ರವಾಸ ಹೋಗುವಾಗ ಬೌನ್ಸ್ ಮತ್ತು ವೇಗದ ಎಸೆತಗಳಿಗೆ ಇರುವ ಪಿಚ್‌ಗಳಲ್ಲಿ ಆಡುವ ಸಿದ್ಧತೆ ಮಾಡಿಕೊಂಡೇ ತೆರಳುತ್ತೇವೆ. ಇತ್ತೀಚೆಗೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ಗಳಲ್ಲಿ ಟೆಸ್ಟ್ ವಿಜಯ ಸಾಧಿಸಿದರುವುದು ತಂಡದ ಆಟಗಾರರಲ್ಲಿ ಬಹಳಷ್ಟು ಆತ್ಮವಿಶ್ವಾಸ ವೃದ್ಧಿಸುವಂತೆ ಮಾಡಿದೆ” ಎಂದು ಬಿಸಿಸಿಐ ಟ್ವಿಟರ್‌ನಲ್ಲಿ ಹಾಕಿರುವ ವಿಡಿಯೋದಲ್ಲಿ ಪೂಜಾರ ಹೇಳಿದ್ದಾರೆ.

“ಬ್ಯಾಟಿಂಗ್ ಕ್ರಮಾಂಕವು ಸಮತೋಲನವಾಗಿದೆ. ದಕ್ಷಿಣ ಆಫ್ರಿಕಾ ತಂಡದ ಎದುರು ಆಡಿದ ಅನುಭವ ನಮ್ಮಲ್ಲಿ ಬಹಳ ಮಂದಿಗೆ ಇದೆ. ಅವರ ತಂಡದಲ್ಲಿ ಉತ್ತಮ ಬೌಲಿಂಗ್ ಪಡೆ ಇದೆ. ಅವರು ತಮ್ಮ ತವರಿನಲ್ಲಿ ಹೆಚ್ಚು ಪರಿಣಾಮಕಾರಿಯಾಗುವ ಸಾಧ್ಯತೆ ಇದೆ. ಅದಕ್ಕೆ ತಕ್ಕಂತೆ ನಾವು ಕೂಡ ಅಭ್ಯಾಸ ಮಾಡಿದ್ದೇವೆ. ಪ್ರಸ್ತುತ ಭಾರತ ತಂಡದಲ್ಲಿರುವ ಬಹುತೇಕ ಮಂದಿ ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಆಡಿದ ಅನುಭವವನ್ನು ಹೊಂದಿದ್ದಾರೆ. ಹಾಗಾಗಿ ನಮ್ಮದು ಅನುಭವಿಗಳ ತಂಡವಾಗಿದ್ದು, ಇಷ್ಟು ದಿನಗಳಿಂದ ತಯಾರಿ ನಡೆಸುತ್ತಿರುವ ನಮ್ಮಿಂದ ಟೀಮ್ ಮ್ಯಾನೇಜ್‌ಮೆಂಟ್‌ ಏನು ನಿರೀಕ್ಷಿಸುತ್ತಿದೆ ಎಂಬುದು ಗೊತ್ತಿದೆ,” ಎಂದು 33 ವರ್ಷದ ಪೂಜಾರ ಹೇಳಿದ್ದಾರೆ.

ಈ ವರ್ಷಾರಂಭದಲ್ಲಿ ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ತಂಡ ಆಸ್ಟ್ರೇಲಿಯಾ ನೆಲದಲ್ಲಿ 2-1 ಅಂತರದಲ್ಲಿ ಎರಡನೇ ಬಾರಿ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಮುಡಿಗೇರಿಸಿಕೊಂಡಿತ್ತು. ನಂತರ ಆಗಸ್ಟ್‌ ಹಾಗೂ ಸೆಪ್ಟೆಂಬರ್‌ ಅವಧಿಯಲ್ಲಿ ಐದನೇ ಟೆಸ್ಟ್‌ ಮುಂದೂಡಿದ ಹೊರತಾಗಿಯೂ ಭಾರತ ತಂಡ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯಲ್ಲಿ 2-1 ಮುನ್ನಡೆ ಪಡದುಕೊಂಡಿದೆ.

ಭಾರತ – ದ. ಆಫ್ರಿಕಾ ನಡುವಣ ಮೊದಲ ಟೆಸ್ಟ್‌ ಪಂದ್ಯ ಡಿಸೆಂಬರ್ 26 ರಿಂದ 30 ವರೆಗೆ ಸೂಪರ್‌ಸ್ಪೋರ್ಟ್ಸ್ ಪಾರ್ಕ್‌, ಸೆಂಚುರಿಯನ್​ನಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಜನವರಿ 3 ರಿಂದ 7 ವರೆಗೆ ವಾಂಡರರ್ಸ್ ಕ್ರೀಡಾಂಗಣ, ಜೋಹಾನ್ಸ್‌ಬರ್ಗ್​ನಲ್ಲಿ ಮತ್ತು ಅಂತಿಮ ಮೂರನೇ ಟೆಸ್ಟ್ ಪಂದ್ಯ ಜನವರಿ 11 ರಿಂದ 15 ರ ವರೆಗೆ ನ್ಯೂಲ್ಯಾಂಡ್ಸ್, ಕೇಪ್‌ ಟೌನ್​ನಲ್ಲಿ ಆಯೋಜಿಸಲಾಗಿದೆ.

Virat Kohli: ವಿರಾಟ್ ಕೊಹ್ಲಿ ಹಾಗೂ ಬಿಸಿಸಿಐ ವಿವಾದದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ರವಿಶಾಸ್ತ್ರಿ

(Cheteshwar Pujara expressed confidence about India ability to victorious from Test series in South Africa)