ಈ ವರ್ಷಾಂತ್ಯದ ವೇಳೆಗೆ ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ಚರ್ಚೆಯಾದ ವಿಷಯ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ. ಎಲ್ಲರಿಗೂ ತಿಳಿದಿರುವಂತೆ ಏಕದಿನ ನಾಯಕತ್ವದಿಂದ ಕೊಹ್ಲಿಯನ್ನು ಕೆಳಗಿಳಿಸಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡಿತು. ಈ ಬಗ್ಗೆ ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಾಗ ಅನೇಕ ವಿಚಾರಗಳು ಹೊರಬಿದ್ದವು.
ಕೊಹ್ಲಿ ಟಿ20 ನಾಯಕತ್ವದಿಂದ ಕೆಳಗಿಳಿಯುವ ಮುನ್ನ ಖಾಸಗಿಯಾಗಿ ಕರೆ ಮಾಡಿ, ನಾಯಕತ್ವ ತ್ಯಜಿಸದಂತೆ ಕೇಳಿಕೊಂಡಿದ್ದೆ, ಆದ್ರೆ ವಿರಾಟ್ ಒಪ್ಪಲಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿಕೆ ನೀಡಿದ್ದರು. ಆದ್ರೆ ವಿರಾಟ್ ಇದಕ್ಕೆ ತದ್ವಿರುದ್ದ ಹೇಳಿಕೆ ನೀಡುವ ಮೂಲಕ ಆಶ್ಚರ್ಯ ಮೂಡಿಸಿದರು. ಜೊತೆಗೆ ಏಕದಿನ ನಾಯಕತ್ವದಿಂದ ತೆಗೆದುಹಾಕಿದ ಬಗ್ಗೆಯೂ ಕೊಹ್ಲಿ ಅಸಮಾಧಾನ ಹೊರಹಾಕಿದ್ದರು.
ಸದ್ಯ ಬಿಸಿಸಿಐ ಹಾಗೂ ವಿರಾಟ್ ಕೊಹ್ಲಿ ನಡುವಣ ಈ ವಿವಾದದ ಬಗ್ಗೆ ಟೀಮ್ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಮಾತನಾಡಿದ್ದಾರೆ. ಈ ನಾಯಕತ್ವ ವಿಚಾರಕ್ಕೆ ಸಂಬಂಧಿಸಿದಂತೆ ಸೌರವ್ ಗಂಗೂಲಿ ಬಾಯ್ದಿಡಲಿ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
"ವಿರಾಟ್ ಕೊಹ್ಲಿ ತಮ್ಮ ಕಥೆಯ ಒಂದು ಭಾಗವನ್ನು ಹೇಳಿದ್ದಾರೆ. ಅದೇ ರೀತಿ ಮಂಡಳಿಯ ಅಧ್ಯಕ್ಷರು ತಮ್ಮ ಕಥೆಯನ್ನು ಹೇಳುವ ಅಗತ್ಯವಿದೆ. ಉತ್ತಮ ಸಂವಹನದಿಂದ, ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಬಹುದಿತ್ತು'' ಎಂದು ರವಿಶಾಸ್ತ್ರಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದಾರೆ.
ಸದ್ಯ ಟೀಮ್ ಇಂಡಿಯಾ ಕೋಚಿಂಗ್ ಹುದ್ದೆಯಿಂದ ಹೊರ ಬಂದಿರುವ ರವಿ ಶಾಸ್ತ್ರಿ ಇದೀಗ ಐಪಿಎಲ್ನಲ್ಲಿ ಫ್ರಾಂಚೈಸಿ ಒಂದರ ಮೆಂಟರ್ ಹುದ್ದೆ ಅಲಂಕರಿಸುವ ಸಾಧ್ಯತೆ ಇದೆ. ಜೊತೆಗೆ ತಮ್ಮ ನೆಚ್ಚಿನ ಕಾಮೆಂಟರಿ ವೃತ್ತಿ ಬದುಕು ಮರಳಿ ಆರಂಭಿಸುವುದಾಗಿಯೂ ಹೇಳಿಕೊಂಡಿದ್ದಾರೆ.
ಇದೇವೇಳೆ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಬಗ್ಗೆ ಮಾತನಾಡಿದ ರವಿಶಾಸ್ತ್ರಿ, "ತಮ್ಮ ಶಕ್ತಿ ಸಾಮರ್ಥ್ಯ ಸಾಬೀತುಪಡಿಸಲು ಇದಕ್ಕಿಂತ ಒಳ್ಳೆಯ ಸಮಯ ಭಾರತಕ್ಕೆ ಸಿಗುವುದಿಲ್ಲ. ವಿರಾಟ್ ಕೊಹ್ಲಿ ಧೋಷರಹಿತ ನಾಯಕ ಮತ್ತು ಅವರು ತಮ್ಮ ಜೊತೆಗೆ ಪ್ರತಿಭಾನ್ವಿತ ತಂಡವನ್ನು ಹೊಂದಿದ್ದಾರೆ" ಎಂದು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾವು ಭಾರತೀಯರು ಜಯಿಸದ ಭದ್ರಕೋಟೆಯಾಗಿ ಉಳಿದಿದೆ. ನೆನಪಿರಲಿ, ಹರಿಣಗಳು ತವರಿನಲ್ಲಿ ತಮ್ಮದೇ ಆದ ಸಾಮರ್ಥ್ಯ ಹೊಂದಿದ್ದಾರೆ. ಆದರೆ, ಆ ತಂಡವನ್ನು ಸರಿದೂಗಿಸುವ ಸಾಮರ್ಥ್ಯವುಳ್ಳ ಮತ್ತು ತಂತ್ರಗಾರಿಕೆಯನ್ನು ನಾವು ಪಡೆದುಕೊಂಡಿದ್ದೇವೆ. ಎಂದಿನಂತೆ, ನನ್ನ ಬೆಂಬಲ ಟೀಮ್ ಇಂಡಿಯಾ ಯಾವಾಗಲೂ ಇರುತ್ತದೆ – ರವಿಶಾಸ್ತ್ರಿ.
Published On - 8:31 am, Fri, 24 December 21