Cheteshwar Pujara: ಕೌಂಟಿಯಲ್ಲಿ ಪೂಜಾರ ಹ್ಯಾಟ್ರಿಕ್ ಶತಕ: ಪಾಕ್ ಸ್ಟಾರ್ ಬ್ಯಾಟರ್​ನೊಂದಿಗೆ ಜೊತೆಯಾಟ

Cheteshwar Pujara: ಕೌಂಟಿಯಲ್ಲಿ ಪೂಜಾರ ಹ್ಯಾಟ್ರಿಕ್ ಶತಕ: ಪಾಕ್ ಸ್ಟಾರ್ ಬ್ಯಾಟರ್​ನೊಂದಿಗೆ ಜೊತೆಯಾಟ
Cheteshwar Pujara and mohammad rizwan

Cheteshwar Pujara-Mohammad Rizwan: ಈ ಪಂದ್ಯದ ಪ್ರಮುಖ ಹೈಲೇಟ್ ಪೂಜಾರ ಹಾಗೂ ರಿಜ್ವಾನ್ ಜೊತೆಯಾಟ. ಟ್ವಿಟರ್​ನಲ್ಲಿ ಪಂದ್ಯದ ನಡುವೆ ತೆಗೆದ ಇವರಿಬ್ಬರ ಫೋಟೋ ಸಾಕಷ್ಟು ವೈರಲ್ ಆಗುತ್ತಿದೆ.

TV9kannada Web Team

| Edited By: Vinay Bhat

Apr 30, 2022 | 12:54 PM

ಸತತ ಕಳಪೆ ಫಾರ್ಮ್​​ನಿಂದ ಭಾರತ ಕ್ರಿಕೆಟ್ ತಂಡದಿಂದ ಹೊರಬಿದ್ದಿರುವ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ (Cheteshwar Pujara) ಇದೀಗ ಬೊಂಬಾಟ್ ಆಗಿ ಕಮ್​​ಬ್ಯಾಕ್ ಮಾಡಿದ್ದಾರೆ. ಕೌಂಟಿ ಕ್ರಿಕೆಟ್‌ ಚಾಂಪಿಯನ್‌ಷಿಪ್‌ನಲ್ಲಿ ಸಸೆಕ್ಸ್‌ (Sussex) ತಂಡದ ಪರ ಆಡುತ್ತಿರುವ ಪೂಜಾರ ಹ್ಯಾಟ್ರಿಕ್ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ರನ್ ಗಳಿಸಲು ಸಾಧ್ಯವಾಗದೆ ಭಾರತ ತಂಡದಿಂದ ಹೊರಬಿದ್ದಿದ್ದ ಪೂಜಾರ ರಾಷ್ಟ್ರೀಯ ತಂಡಕ್ಕೆ ಕಮ್​ಬ್ಯಾಕ್​ ಮಾಡುವುದಕ್ಕೆ ಸಾಕಷ್ಟು ಹರಸಹಾಸ ಪಡುತ್ತಿದ್ದಾರೆ. ಈ ಹಿಂದೆ ರಣಜಿ ಟ್ರೋಫಿಯಲ್ಲಿ ಆಡಿದ 2 ಪಂದ್ಯಗಳಲ್ಲಿ 2 ಅರ್ಧಶತಕ ಸಿಡಿಸಿದ್ದ ಪೂಜಾರ ಬಳಿಕ ಕೌಂಟಿ ಕ್ರಿಕೆಟ್​​ನಲ್ಲಿ (County Cricket) ಸಸೆಕ್ಸ್ ಪರ ಚೊಚ್ಚಲ ಪಂದ್ಯದಲ್ಲೇ ಮಿಂಚಿದ್ದರು. ಒಟ್ಟು ಮೂರು ಶತಕ ಬಾರಿಸಿರುವ ಟೆಸ್ಟ್​ ಸ್ಪೆಷಲಿಸ್ಟ್ ಭರ್ಜರಿ ಫಾರ್ಮ್​ ಕಂಡುಕೊಂಡಿದ್ದಾರೆ.

ಇಂಗ್ಲೆಂಡ್​ನ ಹೂವೆ ಕೌಂಟಿ ಗ್ರೌಂಡ್​ನಲ್ಲಿ ನಡೆಯುತ್ತಿರುವ ದರ್ಹಮ್ ವಿರುದ್ಧದ ಪಂದ್ಯದಲ್ಲಿ ಸಸೆಕ್ಸ್ ತಂಡ ಭರ್ಜರಿ ಪ್ರದರ್ಶನ ತೋರುತ್ತಿದೆ. ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್​ ಆರಂಭಿಸಿದ ದರ್ಹಮ್ ತಂಡ 73.5 ಓವರ್​​​ನಲ್ಲಿ ಕೇವಲ 223 ರನ್​​ಗೆ ಆಲೌಟ್ ಆಯಿತು. ಲಿಯಾಮ್ ಟ್ರೆವಸ್ಕಿಸ್ 88 ರನ್ ಬಾರಿಸಿದರೆ ಸೀನ್ ಡಿಕ್ಸನ್ 34 ರನ್ ಗಳಿಸಿದರು. ಸಸೆಕ್ಸ್ ಪರ ಆರೋನ್ ಬಿಯರ್ಡ್ ಹಾಗೂ ಟಾಮ್ ಕ್ಲಾರ್ಕ್ ತಲಾ 3 ವಿಕೆಟ್ ಕಿತ್ತು ಮಿಂಚಿದರು.

IPL 2022 Points Table: ಮೂರನೇ ಸ್ಥಾನಕ್ಕೆ ಜಿಗಿದ ಲಖನೌ: ಪರ್ಪಲ್, ಆರೆಂಜ್ ಯಾರ ಬಳಿಯಿದೆ?

ನಂತರ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಸಸೆಕ್ಸ್ ತಂಡ ಎರಡನೇ ದಿನದಾಟ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 362 ರನ್ ಬಾರಿಸಿದೆ. ಅಲಿಸ್ಟರ್ ಓರ್(27) ಹಾಗೂ ನಾಯಕ ಟಾಮ್ ಹೇನೆಸ್ ಮೊದಲ ವಿಕೆಟ್​​ಗೆ 68 ರನ್​ಗಳ ಉತ್ತಮ ಜೊತೆಯಾಟ ಆಡಿದರು. ನಂತರ ಬಂದ  ಮೋಸನ್ ಕ್ರೇನ್ 13 ರನ್​ಗೆ ಔಟಾದರು. ಈ ಸಂದರ್ಭ ಜೊತೆಯಾದ ಚೇತೇಶ್ವರ್ ಪೂಜಾರ ಹಾಗೂ ಟಾಮ್ ಅಲ್ಸೋಪ್ ಭರ್ಜರಿ ಬ್ಯಾಟಿಂಗ್ ನಡೆಸಿದರು.

ಪೂಜಾರ- ಅಲ್ಸೋಪ್ 4ನೇ ವಿಕೆಟ್​​ಗೆ 99 ರನ್​ಗಳ ಕಾಣಿಕೆ ನೀಡಿದರು. ಅಲ್ಸೋಪ್ 129 ಎಸೆತಗಳಲ್ಲಿ 66 ರನ್​ ಬಾರಿಸಿ ಔಟಾದರು. ನಂತರ ಟಾಮ್ ಕ್ಲಾರ್ಕ್ ಜೊತೆಯಾದ ಪೂಜಾರ ಮತ್ತೊಂದು ಅಮೋಘ ಇನ್ನಿಂಗ್ಸ್​ ಕಟ್ಟಿದರು. ಇವರಿಬ್ಬರು ತಂಡದ ಮೊತ್ತವನ್ನು 300ರ ಗಡಿ ದಾಟಿಸಿದ್ದಲ್ಲದೆ 143 ರನ್​​ಗಳನ್ನು ಕೂಡಿಸಿದರು. ಕ್ಲಾರ್ಕ್ 99 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಔಟಾದರು. ಇದರ ನಡುವೆ ಚೇತೇಶ್ವರ್ ಪೂಜಾರ ಆಕರ್ಷಕ ಶತಕ ಸಿಡಿಸಿ ಮಿಂಚಿದರು.

ಇದೀಗ 6ನೇ ವಿಕೆಟ್​​​ಗೆ ಪೂಜಾರ ಜೊತೆಯಾಗಿರುವ ಪಾಕಿಸ್ತಾನ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಇನ್ನಿಂಗ್ಸ್​ ಕಟ್ಟುತ್ತಿದ್ದಾರೆ. ದಿನದಾಟದ ಅಂತ್ಯಕ್ಕೆ ಸಸೆಕ್ಸ್ ತಂಡ 103 ಓವರ್​​ನಲ್ಲಿ 5 ವಿಕೆಟ್ ಕಳೆದುಕೊಂಡು 362 ರನ್ ಗಳಿಸಿದೆ. ಇನ್ನೂ 139 ರನ್​ಗಳ ಹಿನ್ನಡೆಯಲ್ಲಿದೆ. ಪೂಜಾರ 198 ಎಸೆತಗಳಲ್ಲಿ 128 ರನ್ ಗಳಿಸಿ ಹಾಗೂ ರಿಜ್ವಾನ್ 5 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಈ ಪಂದ್ಯದ ಪ್ರಮುಖ ಹೈಲೇಟ್ ಪೂಜಾರ ಹಾಗೂ ರಿಜ್ವಾನ್ ಜೊತೆಯಾಟ. ಟ್ವಿಟರ್​ನಲ್ಲಿ ಪಂದ್ಯದ ನಡುವೆ ತೆಗೆದ ಇವರಿಬ್ಬರ ಫೋಟೋ ಸಾಕಷ್ಟು ವೈರಲ್ ಆಗುತ್ತಿದೆ. ಬದ್ಧ ವೈರಿಗಳಾದ ಭಾರತ-ಪಾಕಿಸ್ತಾನ ಆಟಗಾರರು ಇದೀಗ ಒಂದೆ ತಂಡದಲ್ಲಿ ಆಡುತ್ತಿರುವುದು ಕಂಡು ಖುಷಿ ಆಗುತ್ತಿದೆ ಎಂದು ಕೆಲವರು ಬರೆದುಕೊಂಡಿದ್ದಾರೆ.

ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada