ಸತತ ಕಳಪೆ ಫಾರ್ಮ್ನಿಂದಾಗಿ ಸದ್ಯ ಟೀಮ್ ಇಂಡಿಯಾದಿಂದ (Team India) ಹೊರಬಿದ್ದಿರುವ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ (Cheteshwar Pujara) ಇಂಗ್ಲಿಷ್ ಕೌಂಟಿಯಲ್ಲಿ ಆಡಲಿದ್ದು ಮುಂಬರುವ ಕೌಂಟಿ ಚಾಂಪಿಯನ್ಶಿಪ್ ಮತ್ತು ರಾಯಲ್ ಲಂಡನ್ ವಂಡೇ ಕಪ್ನಲ್ಲಿ ಆಡಲು ಸಸೆಕ್ಸ್ ಕ್ಲಬ್ ಜೊತೆಗೆ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. ಈ ಬಗ್ಗೆ ಕೌಂಟಿ ಪ್ರಕಟನೆ ಹೊರಡಿಸಿದ್ದು, “2022ರ ಋತುವಿನಲ್ಲಿ ಸಸೆಕ್ಸ್ (Sussex) ಪರ ಪ್ರಥಮ ದರ್ಜೆ ಹಾಗೂ ಲಿಸ್ಟ್ ಎ ಪಂದ್ಯಗಳೆರಡರಲ್ಲೂ ಚೇತೇಶ್ವರ್ ಪೂಜಾರ ಆಡಲಿದ್ದಾರೆ. ಆಸ್ಟ್ರೇಲಿಯದ ಟ್ರ್ಯಾವಿಸ್ ಹೆಡ್ ಸ್ಥಾನವನ್ನು ಇವರು ತುಂಬಲಿದ್ದಾರೆ,” ಎಂದು ತಿಳಿಸಿದೆ. ಟ್ರಾವಿಡ್ ಹೆಡ್ ಪ್ರಸ್ತುತ ಪಾಕಿಸ್ತಾನ ವಿರುದ್ಧ ಟೆಸ್ಟ್ ಸರಣಿಯಲ್ಲಿ ತೊಡಗಿದ್ದಾರೆ ಹಾಗೂ ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಸೆಕ್ಸ್ ತಂಡದಿಂದ ತಮ್ಮನ್ನು ಬಿಡುಗಡೆ ಮಾಡುವಂತೆ ಟ್ರಾವಿಸ್ ಹೆಡ್ ಟೀಮ್ ಮ್ಯಾನೇಜ್‌ಮೆಂಟ್‌ಗೆ ಮನವಿ ಸಲ್ಲಿಸಿದ್ದರು. ಹಾಗಾಗಿ ಅವರು ಈ ಬಾರಿ ಕೌಂಟಿ ಕ್ರಿಕೆಟ್‌ಗೆ ಅಲಭ್ಯರಾಗಿದ್ದು ಪೂಜಾರ ಆಯ್ಕೆಯಾಗಿದ್ದಾರೆ.
ಇದಕ್ಕೂ ಮೊದಲು ಪೂಜಾರ ಯಾರ್ಕಶೈರ್ ಹಾಗೂ ನಾಟಿಂಗ್‌ಹ್ಯಾಮ್‌ಶೈರ್ ಪರ ಆಡಿದ್ದರು. 2020ರಲ್ಲಿ ಕೂಡ ಇವರು ಗ್ಲೌಸ್ಟರ್‌ಶೈರ್ ಪರವಾಗಿ 6 ಪಂದ್ಯಗಳನ್ನು ಆಡಲು ಒಪ್ಪಂದ ಮಾಡಿಕೊಂಡಿದ್ದರು. ಆದರೆ ಕೊರೊನಾ ವೈರಸ್ ಕಾರಣದಿಂದಾಗಿ ಈ ಒಪ್ಪಂದ ರದ್ದಾಗಿತ್ತು. ಇದೀಗ ಮತ್ತೊಮ್ಮೆ ಪೂಜಾರ ಕೌಂಟಿ ಕ್ರಿಕೆಟ್‌ನತ್ತ ಚಿತ್ತ ನೆಟ್ಟಿದ್ದಾರೆ. ಈ ಬಾರಿಯ ಐಪಿಎಲ್ ಆವೃತ್ತಿಗಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಚೇತೇಶ್ವರ್ ಪೂಜಾರ ಅವರನ್ನು ಯಾವ ತಂಡ ಕೂಡ ಖರೀದಿಸಿರಲಿಲ್ಲ. ಕಳೆದ ವರ್ಷ ಭಾರತ ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವುದಿದ್ದರೂ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹರಾಜಾಗಿದ್ದ ಕಾರಣ ಕೌಂಟಿ ಕ್ರಿಕೆಟ್‌ನತ್ತ ಪೂಜಾರ ಗಮನಹರಿಸಿರಲಿಲ್ಲ.
Excited to join the Sussex family, and looking forward to contributing to the Club’s success this county season ? https://t.co/FV5X67O2OW
— cheteshwar pujara (@cheteshwar1) March 10, 2022
ಈ ಬಗ್ಗೆ ಪ್ರತಿಕ್ರಿಯಿಸಿದ ಪೂಜಾರ, ಸಸೆಕ್ಸ್ ಪರ ಆಡಲು ಉತ್ಸುಕನಾಗಿದ್ದು, ಇದು ನನ್ನ ಪಾಲಿಗೆ ಗೌರವವಾಗಿದೆ. ಸಸೆಕ್ಸ್ ಕುಟುಂಬಕ್ಕೆ ಸೇರ್ಪಡೆಯಾಗಲು ನಾನು ಎದುರು ನೋಡುತ್ತಿದ್ದೇನೆ. ಕಳೆದ ಹಲವು ವರ್ಷಗಳಿಂದ ನಾನು ಯುಕೆ ಕೌಂಟಿ ಕ್ರಿಕೆಟ್ ಅನ್ನು ನಾನು ಆನಂದಿಸಿದ್ದೇನೆ. ಕ್ಲಬ್ ಯಶಸ್ಸಿಗೆ ಕೊಡುಗೆ ನೀಡಲು ಆಶಿಸುತ್ತೇನೆ,” ಎಂದು ಹೇಳಿದ್ದಾರೆ. ಇದಲ್ಲಿ ಪೂಜಾರ ಮಾತ್ರವಲ್ಲದೆ ಪಾಕಿಸ್ತಾನದ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಮತ್ತು ಆಸ್ಟ್ರೇಲಿಯಾದ ಜೋಶ್ ಫಿಲಿಪ್ಪೆ ಕೂಡ ಸಸೆಕ್ಸ್ ಪರ ಕಣಕ್ಕಿಳಿಯಲಿದ್ದಾರೆ. ಎ. 7 ರಿಂದ ಇಂಗ್ಲಿಷ್ ಕೌಂಟಿ ಋತು ಆರಂಭವಾಗಲಿದ್ದು, ಸಸೆಕ್ಸ್ ತನ್ನ ಮೊದಲ ಪಂದ್ಯವನ್ನು ಎ. 14 ರಂದು ಡರ್ಬಿಶೈರ್ ವಿರುದ್ಧ ಆಡಲಿದೆ. ಸೆಪ್ಟಂಬರ್ ತನಕ ಈ ಸೀಸನ್ ಮುಂದುವರಿಯಲಿದೆ.
ಚೇತೇಶ್ವರ್ ಪೂಜಾರ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಪರವಾಗಿ ಆಯ್ಕೆಯಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಪೂಜಾರ ಫಾರ್ಮ್ ಕಳೆದುಕೊಂಡಿದ್ದು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿಯೂ ನೀರಸ ಪ್ರದರ್ಶನ ನೀಡಿದ್ದರು. ಹೀಗಾಗಿ ಆಯ್ಕೆ ಮಂಡಳಿ ರಣಜಿಯಲ್ಲಿ ಆಡಿ ಫಾರ್ಮ್ ಕಂಡುಕೊಳ್ಳಲು ಆಯ್ಕೆ ಮಂಡಳಿ ಅನುಭವಿ ಆಟಗಾರ ಸೂಚನೆ ನೀಡಿತ್ತು. ಹೀಗಾಗಿ ರಣಜಿ ಟೂರ್ನಿಯಲ್ಲಿಯೂ ಈ ಅನುಭವಿ ಆಟಗಾರ ಕಣಕ್ಕಿಳಿದಿದ್ದರು.