IND vs SL Test: ಭಾರತ-ಲಂಕಾ ಟೆಸ್ಟ್ಗೆ ಶೇ. 100 ರಷ್ಟು ಪ್ರೇಕ್ಷಕರಿಗೆ ಅವಕಾಶ: ಇಂದೇ ಚಿನ್ನಸ್ವಾಮಿಯಲ್ಲಿ ಟಿಕೆಟ್ ಖರೀದಿಸಿ
IND vs SL Pink Ball Test: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ಹೊನಲು ಬೆಳಕಿನ ಟೆಸ್ಟ್ ಆಗಿದ್ದು ಇದೇ ಮಾರ್ಚ್ 12ರಿಂದ ಶುರುವಾಗಲಿದೆ. ಹೀಗಿರುವಾಗ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ. ಸ್ಟೇಡಿಯಂನ ಶೇಕಡಾ 100ರಷ್ಟು ವೀಕ್ಷಕರಿಗೆ ಅನುಮತಿ ನೀಡಲಿದ್ದೇವೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಭಾರತ ಹಾಗೂ ಶ್ರೀಲಂಕಾ (India vs Sri Lanka) ತಂಡ ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಈಗಾಗಲೇ ಬೆಂಗಳೂರಿಗೆ ಬಂದಿಳಿದಿದ್ದು ಭರ್ಜರಿ ಅಭ್ಯಾಸದಲ್ಲಿ ನಿರತವಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswami Stadium) ನಡೆಯಲಿರುವ ಈ ಪಂದ್ಯ ಹೊನಲು ಬೆಳಕಿನ ಟೆಸ್ಟ್ ಆಗಿದ್ದು ಇದೇ ಮಾರ್ಚ್ 12ರಿಂದ ಶುರುವಾಗಲಿದೆ. ಹೀಗಿರುವಾಗ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ. ಈ ಮೊದಲು ಕೆಎಸ್‌ಸಿಎ (KSCA) ಆಸನ ಸಾಮರ್ಥ್ಯವನ್ನು ಶೇ. 50ಕ್ಕೆ ಸೀಮಿತಗೊಳಿಸಿದ್ದರಿಂದ ಕೆಲವು ಅಭಿಮಾನಿಗಳಿಗೆ ಟಿಕೆಟ್ ಸಿಗಲಿಲ್ಲ. ಸುಮಾರು 10,000 ಟಿಕೆಟ್‌ಗಳಷ್ಟೆ ಸಾರ್ವಜನಿಕರಿಗೆ ಲಭ್ಯವಿತ್ತು. ಉಳಿದವುಗಳನ್ನು ಮಾಜಿ ಆಟಗಾರರು, ಕ್ಲಬ್ ಸದಸ್ಯರು ಇತ್ಯಾದಿಗಳಿಗಾಗಿ ಕಾಯ್ದಿರಿಸಲಾಗಿತ್ತು. ಆದರೀಗ 2 ವರ್ಷಗಳ ನಂತರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಂತರರಾಷ್ಟ್ರೀಯ ಪಂದ್ಯ ನಡೆಯುತ್ತಿದ್ದು, ಸ್ಟೇಡಿಯಂನ ಶೇಕಡಾ 100ರಷ್ಟು ವೀಕ್ಷಕರಿಗೆ ಅನುಮತಿ ನೀಡಲಿದ್ದೇವೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಹೌದು, ಭಾರತ-ಶ್ರೀಲಂಕಾ ನಡುವಿನ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಶೇಕಡಾ ನೂರಕ್ಕೆ ನೂರರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಕೆಎಸ್‌ಸಿಎ ಆಡಳಿತ ಮಂಡಳಿ ನಿರ್ಧರಿಸಿದೆ. ”ಕೆಎಸ್‌ಸಿಎ ಈ ಸುದ್ದಿಯನ್ನು ತಿಳಿಸಲು ತುಂಬಾ ಸಂತೋಷದಾಯಕವಾಗಿದೆ. ಭಾರತ-ಶ್ರೀಲಂಕಾ ಟೆಸ್ಟ್ ಸರಣಿಗೆ ಉತ್ತಮ ಪ್ರೇಕ್ಷಕರ ಬೆಂಬಲ ಸಿಕ್ಕಿದ್ದು, ವೀಕ್ಷಣೆಯ ದೃಷ್ಟಿಯಲ್ಲೂ ಉತ್ತಮ ಬೆಳವಣಿಗೆ ಕಂಡುಬಂದ ಪರಿಣಾಮ, ಬೆಂಗಳೂರಿನಲ್ಲಿ ಮಾರ್ಚ್ 12-16ರವರೆಗೆ ನಡೆಯಲಿರುವ ಟೆಸ್ಟ್ ಪಂದ್ಯದಲ್ಲಿ ಮುಂದಿನ ಯಾವುದೇ ನಿರ್ದಿಷ್ಟ ಆದೇಶ ಬರುವತನಕ ಕೆಎಸ್‌ಸಿಎ ಪೂರ್ಣ ಪ್ರಮಾಣದಲ್ಲಿ ಟಿಕೆಟ್ ಮಾರಾಟ ಮಾಡಲು ನಿರ್ಧರಿಸಿದೆ,” ಎಂದು ಹೇಳಿದೆ.
ಪೇಟಿಎಂ ಕೆಎಸ್‌ಸಿಎ ಅಧಿಕೃತ ಟಿಕೆಟ್ ಪಾಲುದಾರರಾಗಿದ್ದು, ಹೆಚ್ಚುವರಿ ಟಿಕೆಟ್‌ಗಳನ್ನು ಬಾಕ್ಸ್ ಆಫೀಸ್ ಸೇಲ್ ಮೂಲಕ ನೀಡಲಿದೆ. 11 ಮಾರ್ಚ್ 2022 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಟಿಕೆಟ್ ಮಾರಾಟ ಮಾಡಲಿದೆ.
ಟಿಕೆಟ್ ದರ:
ಗ್ರ್ಯಾಂಡ್ ಟೆರೆಸ್: 1,250 ರೂಪಾಯಿ (ಗೇಟ್ ನಂ. 18)
ಇ ಎಕ್ಸಿಕ್ಯೂಟಿವ್, ಎನ್ ಸ್ಟ್ಯಾಂಡ್: 750 ರೂಪಾಯಿ (ಗೇಟ್ ನಂ. 18)
ಡಿ ಕಾರ್ಪೊರೇಟ್, ಎ ಸ್ಟ್ಯಾಂಡ್, ಬಿ ಲೋವರ್ ಮತ್ತು ಬಿ ಅಪ್ಪರ್: 500 ರೂಪಾಯಿ (ಗೇಟ್ ನಂ. 19)
ಜಿ ಅಪ್ಪರ್/ ಜಿ ಲೋವರ್ 1 ಮತ್ತು ಜಿ ಲೋವರ್ 2: 100 ರೂಪಾಯಿ (ಗೇಟ್ ನಂ. 2)
ಬುಧವಾರ ಖಾಸಗಿ ವಿಮಾನದ ಮೂಲಕ ಎರಡೂ ತಂಡಗಳ ಆಟಗಾರರು ಮತ್ತು ಸಿಬ್ಬಂದಿ ಬೆಂಗಳೂರಿಗೆ ಆಗಮಿಸಿದ್ದಾರೆ. ಒಂದು ದಿನ ಹೋಟೆಲ್‌ನಲ್ಲಿ ವಿಶ್ರಾಂತಿ ಪಡೆದಿದ್ದ ಆಟಗಾರರು ಇದೀಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಈ ವೇಳೆ, ಕಟ್ಟುನಿಟ್ಟಾದ ಕೋವಿಡ್ ಬಯೋಬಬಲ್ ನಿಯಮ ಜಾರಿ ಮಾಡಲಾಗಿದೆ ಎಂದು ಕೆಎಸ್‌ಸಿಎ (ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ) ತಿಳಿಸಿದೆ.
ಮೊಹಾಲಿಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಬಳಗ ಇನ್ನಿಂಗ್ಸ್ ಹಾಗೂ 222 ರನ್ಗಳ ಭರ್ಜರಿ ಜಯ ದಾಖಲಿಸಿತ್ತು. ಈ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ಭಾರತ ಮೂರೇ ದಿನಗಳಲ್ಲಿ ಇನ್ನಿಂಗ್ಸ್ ಜಯ ಸಾಧಿಸಿತು. ಪಂದ್ಯ ಮೂರೇ ದಿನದಲ್ಲಿ ಅಂತ್ಯವಾಗಿದ್ದರಿಂದ ಎರಡು ದಿನ ಮೊಹಾಲಿಯಲ್ಲಿಯೇ ಉಳಿದ ಉಭಯ ತಂಡಗಳು, ಅಲ್ಲಿಯೇ ಪಿಂಕ್ ಬಾಲ್ ಬಳಸಿ ಅಭ್ಯಾಸ ಶುರು ಮಾಡಿದ್ದವು. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಕ್ಲೀನ್ ಸ್ವೀಪ್ ಮಾಡಿ ಸರಣಿಯನ್ನು ವಶಕ್ಕೆ ಪಡೆಯಲು ಎದುರು ನೋಡುತ್ತಿದೆ. ಈಗಾಗಲೇ ಸತತ ಗೆಲುವಿನ ಮೂಲಕ ರೋಹಿತ್ ನಾಯಕತ್ವದಲ್ಲಿ ದಾಖಲೆ ಬರೆದಿರುವ ಭಾರತ ಇತಿಹಾಸ ನಿರ್ಮಿಸುತ್ತಾ ಎಂಬುದು ನೋಡಬೇಕಿದೆ.
Shane Warne: ಆಸ್ಟ್ರೇಲಿಯಾ ತಲುಪಿದ ಶೇನ್ ವಾರ್ನ್ ಪಾರ್ಥಿವ ಶರೀರ; ಮಾರ್ಚ್ 30 ರಂದು ಅಂತ್ಯಕ್ರಿಯೆ