
ಚಿನ್ನಸ್ವಾಮಿ ಕಾಲ್ತುಳಿತ ದುರಂತ (Chinnaswamy Stadium stampede) ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಆರಂಭದಲ್ಲಿ ಈ ಅವಘಡಕ್ಕೆ ಸರ್ಕಾರವೇ ನೇರ ಹೊಣೆ ಎಂಬ ಆರೋಪ ಕೇಳಿಬಂದಿತ್ತು. ಆ ಬಳಿಕ ಈ ಆರೋಪಗಳಿಗೆ ಸ್ಪಷ್ಟನೇ ನೀಡಿದ್ದ ಸರ್ಕಾರ, ಇದರಲ್ಲಿ ಸರ್ಕಾರದ ಪಾತ್ರವಿಲ್ಲ. ಈ ದುರಂತಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿಕೊಂಡಿತ್ತು. ಅದರಂತೆ ಆರ್ಸಿಬಿ (RCB) ಫ್ರಾಂಚೈಸಿಯ ಕೆಲವು ಅಧಿಕಾರಿಗಳನ್ನು ಬಂಧಿಸಲಾಗಿತ್ತು. ಇದರ ಜೊತೆಗೆ ಈ ದುರಂತದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ಅಧಿಕಾರಿಗಳ ಪಾತ್ರವೂ ಇದೇ ಎಂದು ಸರ್ಕಾರ ತಿಳಿಸಿತ್ತು. ಈ ಆರೋಪದ ಬಳಿಕ ಕೆಎಸ್‌ಸಿಎ ಕಾರ್ಯದರ್ಶಿ ಶಂಕರ್ ಹಾಗೂ ಖಜಾಂಚಿ ಜೈರಾಮ್ ನೈತಿಕ ಹೊಣೆ ಹೊತ್ತು ಶುಕ್ರವಾರ ರಾತ್ರಿ ತಮ್ಮ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು.
ಆ ಬಳಿಕ ಇಂದು ಅಂದರೆ ಜೂನ್ 7 ರಂದು ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್ ಪದಾಧಿಕಾರಿಗಳ ತುರ್ತು ಸಭೆ ಕರೆದಿದ್ದರು. ಸಭೆ ಮುಗಿದ ಬಳಿಕ ಮಾತನಾಡಿದ ರಘುರಾಮ್ ಭಟ್, ‘ಇವತ್ತು ಪದಾಧಿಕಾರಿಗಳ ತುರ್ತು ಸಭೆ ಕರೆಯಲಾಗಿತ್ತು. ಹಿಂದಿನ ದಿನ KSCA ಕಾರ್ಯದರ್ಶಿ ಶಂಕರ್, ಖಜಾಂಚಿ ಜೈರಾಮ್ ರಾಜೀನಾಮೆ ನೀಡಿದ್ದರು. ಅದನ್ನು ಸ್ವೀಕರಸಬೇಕಾ?,ಬೇಡ್ವಾ ಅಂತಾ ಚರ್ಚೆ ನಡೆಯಿತು. ಈ ಚರ್ಚೆಯ ಬಳಿಕ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಆದರೆ ಅವರಿಬ್ಬರ ರಾಜೀನಾಮೆಯಿಂದ ತೆರವಾದ ಜಾಗಕ್ಕೆ ಯಾರನ್ನು ಆಯ್ಕೆ ಮಾಡಲಾಗಿಲ್ಲ.
ಸದ್ಯ ಪ್ರಕರಣ ತನಿಖಾ ಹಂತದಲ್ಲಿದೆ. ಹಾಗಾಗಿ ಘಟನೆ ಬಗ್ಗೆ ಹೆಚ್ಚು ಮಾತಾಡಲು ಆಗಲ್ಲ. ಸಿಐಡಿ ತನಿಖೆಗೆ ಸಂಪೂರ್ಣ ಸಹಕಾರ ನೀಡ್ತೇವೆ. ಮುಂದೆ ಕೂಡ ಕ್ರಿಕೆಟ್ ನಡೆಯಬೇಕು. ಆ ಬಗ್ಗೆ ಕೂಡ ಚರ್ಚೆ ನಡೆಸಲಾಗ್ತಿದೆ. ಸಿಐಡಿ ಅಧಿಕಾರಿಗಳು ಇದುವರೆಗೆ ಬೇಟಿ ಮಾಡಿಲ್ಲ. ಅಲ್ಲದೆ ಸಿಐಡಿ ಅಧಿಕಾರಿಗಳು ನಮಗೆ ಯಾವುದೇ ನೋಟಿಸ್ ಕೂಡ ನೀಡಿಲ್ಲ ಎಂದರು.
ಬೆಂಗಳೂರು ಕಾಲ್ತುಳಿತ: ನೈತಿಕ ಹೊಣೆ ಹೊತ್ತು ಕೆಎಸ್‌ಸಿಎ ಕಾರ್ಯದರ್ಶಿ, ಖಜಾಂಚಿ ರಾಜೀನಾಮೆ
ಈ ಘಟನೆ ಸಂಬಂಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಡಳಿತ ಮಂಡಳಿಯ ನಾಲ್ವರು ಅಧಿಕಾರಿಗಳನ್ನು ಶುಕ್ರವಾರ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಸಂಸ್ಥೆಯು ಹೈಕೋರ್ಟಿಗೆ ರಿಟ್ ಅರ್ಜಿಯನ್ನು ಸಲ್ಲಿಸಿತ್ತು. ಸರ್ಕಾರದ ವಿರುದ್ಧವೇ ಗಂಭೀರ ಆರೋಪಗಳನ್ನು ಮಾಡಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ