ಹೆಚ್ಚು ಟೆಸ್ಟ್ ಕ್ರಿಕೆಟ್ ಆಡಿದ್ರೆ ಕೊನೆಗೆ ಸಿಗುವುದು ಚೊಂಬೆ; ಕೊಹ್ಲಿ ಹೇಳಿಕೆಗೆ ರಸೆಲ್ ಟಾಂಗ್
Andre Russell: ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಬಗ್ಗೆ ನೀಡಿರುವ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಆಂಡ್ರೆ ರಸೆಲ್, ಕೊಹ್ಲಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಟೆಸ್ಟ್ ಕ್ರಿಕೆಟ್‌ನ ಆರ್ಥಿಕ ಅಂಶವನ್ನು ಪ್ರಸ್ತಾಪಿಸಿದ್ದಾರೆ. ಭಾರತದಂತಹ ದೇಶಗಳಲ್ಲಿ ಟೆಸ್ಟ್ ಆಟಗಾರರಿಗೆ ಹೆಚ್ಚಿನ ಸಂಭಾವನೆ ಇದೆ ಹಾಗಾಗಿ ಅಲ್ಲಿ ಟೆಸ್ಟ್ ಆಡುವುದರಿಂದ ಯಾವುದೇ ನಷ್ಟವಿಲ್ಲ. ಆದರೆ ವೆಸ್ಟ್ ಇಂಡೀಸ್‌ನಲ್ಲಿ ಅದು ವಿಭಿನ್ನವಾಗಿದೆ ಎಂದಿದ್ದಾರೆ.

ಐಪಿಎಲ್ (IPL 2025) ಮಧ್ಯದಲ್ಲಿ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಹೊಂದುವ ಮೂಲಕ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಆದರೆ ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದ ನಂತರ ಟೆಸ್ಟ್ ಕ್ರಿಕೆಟ್ ಬಗ್ಗೆ ಕೊಹ್ಲಿ ನೀಡಿದ ಹೇಳಿಕೆ ಹೊಸ ಚರ್ಚೆಗೆ ನಾಂದಿ ಹಾಡಿದೆ. ಆರ್‌ಸಿಬಿ (RCB) ಚಾಂಪಿಯನ್ ಆದಾಗ ತುಂಬಾ ಭಾವುಕರಾದ ವಿರಾಟ್ ಕೊಹ್ಲಿ ಇದು ತಮ್ಮ ವೃತ್ತಿಜೀವನದ ಅತ್ಯಂತ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಿದೆ ಎಂದರು. ಮುಂದುವರೆದು ಮಾತನಾಡಿದ ಕೊಹ್ಲಿ, ಆರ್‌ಸಿಬಿ ಮೊದಲ ಬಾರಿಗೆ ಚಾಂಪಿಯನ್ ಆಗುವುದು ನನಗೆ ದೊಡ್ಡ ವಿಷಯ. ಆದರೆ ಈ ಚಾಂಪಿಯನ್ ಕಿರೀಟ ಟೆಸ್ಟ್ ಕ್ರಿಕೆಟ್‌ಗಿಂತ ಐದು ಹಂತ ಕಡಿಮೆ. ನನಗೆ ಟೆಸ್ಟ್ ಆಡುವುದೇ ಹೆಚ್ಚು ಇಷ್ಟ ಎಂದಿದ್ದರು. ಇದೀಗ ಕೊಹ್ಲಿ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಆಂಡ್ರೆ ರಸೆಲ್ (Andre Russell), ಹೆಚ್ಚು ಟೆಸ್ಟ್ ಕ್ರಿಕೆಟ್ ಆಡಿದರೆ ನಿವೃತ್ತಿಯ ನಂತರ ನಮ್ಮ ಬಳಿ ಏನು ಇರುವುದಿಲ್ಲ ಎಂದಿದ್ದಾರೆ.
ಆಂಡ್ರೆ ರಸೆಲ್ ಹೇಳಿದ್ದೇನು?
ವಿರಾಟ್ ಕೊಹ್ಲಿ ಹೇಳಿಕೆಯ ಬಗ್ಗೆ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಆಂಡ್ರೆ ರಸೆಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ‘ವಿರಾಟ್ ಕೊಹ್ಲಿಯಂತಹ ಆಟಗಾರರು ಟೆಸ್ಟ್ ಕ್ರಿಕೆಟ್‌ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ ಏಕೆಂದರೆ ಅವರು ಭಾರತದಂತಹ ದೇಶದಿಂದ ಆಡುತ್ತಾರೆ. ಅಲ್ಲಿನ ಕ್ರಿಕೆಟ್ ಮಂಡಳಿಯು ಟೆಸ್ಟ್ ಆಡುವ ಆಟಗಾರರಿಗೆ ಹೆಚ್ಚಿನ ಹಣವನ್ನು ಪಾವತಿಸುತ್ತದೆ. ಭಾರತ, ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್‌ನಂತಹ ದೇಶಗಳಲ್ಲಿ ಟೆಸ್ಟ್ ಆಟಗಾರರನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಇದು ವೆಸ್ಟ್ ಇಂಡೀಸ್‌ನಂತಹ ದೇಶಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ.
ಹೆಚ್ಚಿನ ಸಂಬಳ ನೀಡುವುದಿಲ್ಲ
ಭಾರತ, ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್ ಕ್ರಿಕೆಟಿಗರಿಗೆ ಟೆಸ್ಟ್ ಕ್ರಿಕೆಟ್ ಆಡಲು ಉತ್ತಮ ಕೇಂದ್ರ ಒಪ್ಪಂದಗಳು ಸಿಗುತ್ತವೆ. ಅಂತಹ ಸವಲತ್ತುಗಳು ಸಿಗುವಾಗ ಈ ಆಟಗಾರರು ಟೆಸ್ಟ್ ಆಡಲು ಬಯಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ನಮ್ಮ ಆಟಗಾರರು 50 ಅಥವಾ 100 ಟೆಸ್ಟ್‌ಗಳನ್ನು ಆಡಿದರೂ, ನಿವೃತ್ತಿಯ ನಂತರ ಅವರ ಬಳಿ ಏನೂ ಉಳಿದಿರುವುದಿಲ್ಲ ಎಂದಿದ್ದಾರೆ. ಅಂದರೆ ರಸೆಲ್ ಪ್ರಕಾರ, ವಿಂಡೀಸ್ ಮಂಡಳಿ ಟೆಸ್ಟ್ ಕ್ರಿಕೆಟ್ ಆಡುವ ಆಟಗಾರರಿಗೆ ಹೆಚ್ಚಿನ ಸಂಬಳ ನೀಡುವುದಿಲ್ಲ. ಹೀಗಾಗಿ ಟೆಸ್ಟ್ ಕ್ರಿಕೆಟ್ ಅನ್ನೇ ನೆಚ್ಚಿ ಕೊಂಡರೆ ಆಟಗಾರನಿಗೆ ಹೆಚ್ಚಿನ ಸಂಪಾದನೆ ಮಾಡಲು ಸಾಧ್ಯವಾಗುವುದಿಲ್ಲ ಎಂಬುದಾಗಿದೆ.
WTC Final 2025: ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ತಂಡವನ್ನು ಹೆಸರಿಸಿದ ಡಿವಿಲಿಯರ್ಸ್- ಫಿಂಚ್
ಕೇವಲ ಒಂದು ಟೆಸ್ಟ್ ಪಂದ್ಯವನ್ನಾಡಿರುವ ರಸೆಲ್
ಆಂಡ್ರೆ ರಸೆಲ್ 2010 ರಲ್ಲಿ ವೆಸ್ಟ್ ಇಂಡೀಸ್ ಪರ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು, ಆದರೆ ಅವರಿಗೆ ಇದುವರೆಗೆ ಕೇವಲ ಒಂದು ಟೆಸ್ಟ್ ಪಂದ್ಯವನ್ನು ಮಾತ್ರ ಆಡಲು ಅವಕಾಶ ಸಿಕ್ಕಿದೆ. ನಾನು ಬಿಳಿ ಚೆಂಡಿಗೆ ಮಾತ್ರ ಫಿಟ್ ಎಂದು ಮಂಡಳಿ ಭಾವಿಸಿದ್ದರಿಂದ ನನ್ನನ್ನು ನೇರವಾಗಿ ಟೆಸ್ಟ್ ತಂಡದಿಂದ ಕೈಬಿಡಲಾಯಿತು. ಟೆಸ್ಟ್ ಕ್ರಿಕೆಟ್ ನನ್ನ ವೃತ್ತಿಜೀವನದ ಪ್ರಮುಖ ಭಾಗವಾಗಿತ್ತು, ಆದರೆ ಕೆಲವರು ನನ್ನನ್ನು ಅದರಿಂದ ದೂರ ತಳ್ಳಿದರು, ಆದರೆ ನನಗೆ ಅದರ ಬಗ್ಗೆ ಯಾವುದೇ ವಿಷಾದವಿಲ್ಲ ಎಂದು ರಸೆಲ್ ಹೇಳಿಕೊಂಡಿದ್ದಾರೆ.
ಆಂಡ್ರೆ ರಸೆಲ್ 2010 ರ ನವೆಂಬರ್ 15 ರಂದು ಶ್ರೀಲಂಕಾ ವಿರುದ್ಧ ತಮ್ಮ ಏಕೈಕ ಟೆಸ್ಟ್ ಪಂದ್ಯವನ್ನು ಆಡಿದ್ದರು. ಈ ಪಂದ್ಯದಲ್ಲಿ ಅವರು ಕೇವಲ ಎರಡು ರನ್ ಗಳಿಸಲಷ್ಟೇ ಶಕ್ತರಾದರು. ಬೌಲಿಂಗ್‌ನಲ್ಲಿ ಕೇವಲ ಒಂದು ವಿಕೆಟ್ ಮಾತ್ರ ಪಡೆದಿದ್ದ ರಸೆಲ್ ಅವರಿಗೆ ಇದರ ನಂತರ ಟೆಸ್ಟ್ ಕ್ರಿಕೆಟ್ ಆಡಲು ಅವಕಾಶ ಸಿಗಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:07 pm, Sat, 7 June 25
