Virat Kohli: ಹೀಗಾದ್ರೆ ಮಾತ್ರ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ಮರಳುತ್ತಾರೆ ಎಂದ ಆಸೀಸ್ ಲೆಜೆಂಡ್
Virat Kohli Retirement: ವಿರಾಟ್ ಕೊಹ್ಲಿ ಅವರ ಟೆಸ್ಟ್ ಕ್ರಿಕೆಟ್ ನಿವೃತ್ತಿಯು ಅಭಿಮಾನಿಗಳಿಗೆ ಆಘಾತ ನೀಡಿದೆ. ಆದರೆ, ಮಾಜಿ ಆಸ್ಟ್ರೇಲಿಯಾ ನಾಯಕ ಮೈಕೆಲ್ ಕ್ಲಾರ್ಕ್ ಅವರು ಭಾರತ ಇಂಗ್ಲೆಂಡ್ ವಿರುದ್ಧ ಸೋತರೆ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ಮರಳಬಹುದು ಎಂದು ಹೇಳಿದ್ದಾರೆ. ಆದರೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಹೊರತುಪಡಿಸಿ, ಭಾರತದ ತಂಡವು ತುಂಬಾ ಉತ್ತಮವಾಗಿದ್ದು ಈ ಇಬ್ಬರು ಆಟಗಾರರು ಇಲ್ಲದೆಯೂ ಇಂಗ್ಲೆಂಡ್ ವಿರುದ್ಧ ಗೆಲ್ಲುವ ಸಾಮರ್ಥ್ಯ ತಂಡಕ್ಕಿದೆ ಎಂದು ಕ್ಲಾರ್ಕ್ ಹೇಳಿದ್ದಾರೆ.

ಭಾರತ ತಂಡದ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli) ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ವಿಚಾರ ಎಲ್ಲರಿಗೂ ಗೊತ್ತಿರುವುದೆ. ಆದರೆ ಕೊಹ್ಲಿಯ ಈ ಹಠಾತ್ ನಿರ್ಧಾರ ಎಲ್ಲರನ್ನೂ ಅಚ್ಚರಿಗೊಳಿಸಿದ್ದು ಸುಳ್ಳಲ್ಲ. ಏಕೆಂದರೆ ಇನ್ನು ನಾಲ್ಕೈದು ವರ್ಷ ಟೆಸ್ಟ್ ಕ್ರಿಕೆಟ್ ಆಡುವ ಸಾಮರ್ಥ್ಯ ಹೊಂಡಿರುವ ಕೊಹ್ಲಿ ಇದ್ದಕ್ಕಿದ್ದಂತೆ ನಿವೃತ್ತಿ ಘೋಷಿಸಿದ್ದು, ಅಭಿಮಾನಿಗಳಿಗೆ ಮಾತ್ರವಲ್ಲದೆ ಟೀಂ ಇಂಡಿಯಾಕ್ಕೂ (Team India) ಆಘಾತ ನೀಡಿತ್ತು. ಆರಂಭದಲ್ಲಿ ಕೊಹ್ಲಿಯ ನಿರ್ಧಾರವನ್ನು ಹಿಂಪಡೆಯುವಂತೆ ಮನವಿ ಮಾಡಲಾಗಿದೆ ಎಂದು ಹೇಳಲಾಗುತ್ತಿತ್ತು. ಆದಾಗ್ಯೂ ಕೊಹ್ಲಿ ತಮ್ಮ ನಿರ್ಧಾರವನ್ನು ಬದಲಿಸಲಿಲ್ಲ. ಇದೀಗ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್, ವಿರಾಟ್ ಕೊಹ್ಲಿ ಮತ್ತೆ ಟೆಸ್ಟ್ ಕ್ರಿಕೆಟ್ಗೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತ, ಇಂಗ್ಲೆಂಡ್ನಲ್ಲಿ ಹೀನಾಯ ಪ್ರದರ್ಶನ ನೀಡಿದರೆ, ಕೊಹ್ಲಿ ಖಂಡಿತವಾಗಿಯೂ ಟೆಸ್ಟ್ ಕ್ರಿಕೆಟ್ಗೆ ಮರಳುತ್ತಾರೆ ಎಂದು ಅವರು ಹೇಳಿಕೊಂಡಿದ್ದಾರೆ.
ಮೈಕೆಲ್ ಕ್ಲಾರ್ಕ್ ಹೇಳಿದ್ದೇನು?
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಭಾರತ 5-0 ಅಂತರದಿಂದ ಸೋತರೆ, ವಿರಾಟ್ ಕೊಹ್ಲಿ ತಮ್ಮ ನಿರ್ಧಾರದಿಂದ ಹಿಂದೆ ಸರಿಯಬಹುದು. ವಿರಾಟ್ ಕೊಹ್ಲಿ ಇನ್ನೂ ಟೆಸ್ಟ್ ಕ್ರಿಕೆಟ್ ಅನ್ನು ತುಂಬಾ ಪ್ರೀತಿಸುತ್ತಾರೆ ಮತ್ತು ಈ ಸ್ವರೂಪದ ಬಗ್ಗೆ ಅವರ ಉತ್ಸಾಹ ಅದ್ಭುತವಾಗಿದೆ. ಆದಾಗ್ಯೂ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಹೊರತುಪಡಿಸಿ, ಭಾರತದ ತಂಡವು ತುಂಬಾ ಉತ್ತಮವಾಗಿದ್ದು ಈ ಇಬ್ಬರು ಆಟಗಾರರು ಇಲ್ಲದೆಯೂ ಇಂಗ್ಲೆಂಡ್ ವಿರುದ್ಧ ಗೆಲ್ಲುವ ಸಾಮರ್ಥ್ಯ ತಂಡಕ್ಕಿದೆ ಎಂದು ಕ್ಲಾರ್ಕ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗುವ ಕೆಲವೇ ದಿನಗಳ ಮೊದಲು, ಡ್ಯಾಶಿಂಗ್ ಓಪನರ್ ರೋಹಿತ್ ಶರ್ಮಾ ಕೂಡ ಈ ಸ್ವರೂಪಕ್ಕೆ ವಿದಾಯ ಹೇಳಿದರು. ಈ ಇಬ್ಬರೂ ಆಟಗಾರರು ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, ಎದುರಾಳಿ ತಂಡದ ಬೌಲರ್‌ಗಳ ಮೇಲೆ ಒತ್ತಡ ಹೇರುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದರು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ಗೆ ಮಾತ್ರವಲ್ಲ, 2024 ರ ಐಸಿಸಿ ಟಿ20 ವಿಶ್ವಕಪ್ ಗೆದ್ದ ನಂತರ ಟಿ20 ಸ್ವರೂಪಕ್ಕೆ ವಿದಾಯ ಹೇಳಿದ್ದರು. ಹೀಗಾಗಿ ಈ ಇಬ್ಬರೂ ಆಟಗಾರರು ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಭಾಗವಹಿಸುವುದನ್ನು ಕಾಣಬಹುದು.
ವಿರಾಟ್ ಕೊಹ್ಲಿಯನ್ನು ಬಂಧಿಸಲು ಆಗ್ರಹ; ಸೋಶಿಯಲ್ ಮೀಡಿಯಾದಲ್ಲಿ #ArrestKohli ಟ್ರೆಂಡಿಂಗ್
ಟೆಸ್ಟ್‌ನಲ್ಲಿ ವಿರಾಟ್, ರೋಹಿತ್ ಅಂಕಿಅಂಶಗಳು
ವಿರಾಟ್ ಕೊಹ್ಲಿ ಟೆಸ್ಟ್‌ನಲ್ಲಿ 123 ಪಂದ್ಯಗಳಲ್ಲಿ 46.85 ಸರಾಸರಿ ಮತ್ತು 55.57 ಸ್ಟ್ರೈಕ್ ರೇಟ್‌ನಲ್ಲಿ 9230 ರನ್ ಗಳಿಸಿದ್ದಾರೆ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 30 ಶತಕಗಳು ಮತ್ತು 71 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಅತ್ಯಧಿಕ ವೈಯಕ್ತಿಕ ಸ್ಕೋರ್ 254* ಆಗಿದೆ. ಇನ್ನು ರೋಹಿತ್ ಶರ್ಮಾ ಬಗ್ಗೆ ಮಾತನಾಡಿದರೆ, 67 ಟೆಸ್ಟ್ ಪಂದ್ಯಗಳಲ್ಲಿ 40 ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ 4301 ರನ್‌ಗಳನ್ನು ಗಳಿಸಿದ್ದಾರೆ. ಅವರ ಹೆಸರಿನಲ್ಲಿ 12 ಶತಕಗಳು ಮತ್ತು 18 ಅರ್ಧಶತಕಗಳಿವೆ. ರೋಹಿತ್ ಅವರ ಅತ್ಯಧಿಕ ವೈಯಕ್ತಿಕ ಸ್ಕೋರ್ 212 ರನ್‌ಗಳಾಗಿವೆ.
ಪ್ರಸ್ತುತ, ಟೀಂ ಇಂಡಿಯಾ ಜೂನ್ 20 ರಿಂದ ಪ್ರಾರಂಭವಾಗಲಿರುವ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಾಗಿದೆ. ಮುಂಬರುವ ಟೆಸ್ಟ್ ಸರಣಿಗೆ ಭಾರತ ತನ್ನ ತಂಡವನ್ನು ಸಹ ಪ್ರಕಟಿಸಲಾಗಿದೆ. ಈ ಟೆಸ್ಟ್ ಸರಣಿಯಲ್ಲಿ ಶುಭ್ಮನ್ ಗಿಲ್ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ. ಅಷ್ಟೇ ಅಲ್ಲ, ರಿಷಭ್ ಪಂತ್ ಅವರಿಗೆ ಉಪನಾಯಕನ ಜವಾಬ್ದಾರಿಯನ್ನು ನೀಡಲಾಗಿದೆ. ಇದು ಬಹಳ ರೋಮಾಂಚಕಾರಿ ಸರಣಿಯಾಗಲಿದ್ದು, ಅಭಿಮಾನಿಗಳು ಸಹ ಇದಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
