Chirs Gayle: ಪಂಜಾಬ್ ಕಿಂಗ್ಸ್ಗೆ ಬಿಗ್ ಶಾಕ್: ತಂಡದಿಂದ ದಿಢೀರ್ ಹೊರ ನಡೆದ ಕ್ರಿಸ್ ಗೇಲ್, ಯಾಕೆ ಗೊತ್ತಾ?
Chris Gayle leaves bio-bubble: ಪಂಜಾಬ್ ಕಿಂಗ್ಸ್ ತಂಡ ಕ್ರಿಸ್ ಗೇಲ್ ಸತತವಾಗಿ ಬಯೋಬಬಲ್ ವ್ಯಾಪ್ತಿಯಲ್ಲಿರುವುದರಿಂದ ಮಾನಸಿಕ ಚೈತನ್ಯಕ್ಕಾಗಿ ಐಪಿಎಲ್ 2021 ತೊರೆಯುವುದಾಗಿ ತಿಳಿಸಿದ್ದಾರೆ.
ಐಪಿಎಲ್ 2021 (IPL 2021) ಟೂರ್ನಿಯಲ್ಲಿ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡದ ಕೆ. ಎಲ್ ರಾಹುಲ್ (KL Rahul) ನಾಯಕತ್ವದ ಪಂಜಾಬ್ ಕಿಂಗ್ಸ್ಗೆ (Punjab Kings) ಪ್ಲೇ ಆಫ್ ಹಾದಿ ಕಠಿಣವಾಗಿದೆ. ಹೀಗಿರುವಾಗ ತಂಡಕ್ಕೆ ಮತ್ತೊಂದು ದೊಡ್ಡ ಆಘಾತ ಉಂಟಾಗಿದೆ. ಪಂಜಾಬ್ನ ಸ್ಫೋಟಕ ಬ್ಯಾಟ್ಸ್ಮನ್, ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ (Chirs Gayle) ಟೂರ್ನಿಯಿಂದಲೇ ದಿಢೀರ್ ಆಗಿ ಹೊರ ನಡೆದಿದ್ದಾರೆ. ಪ್ಲೇ ಆಫ್ ಪ್ರವೇಶಿಸಲು ಕೂದಲೆಳೆ ಅವಕಾಶ ಹೊಂದಿರುವ ಪಂಜಾಬ್ ಕಿಂಗ್ಸ್ ಇಂದು ಕೋಲ್ಕತ್ತಾ ನೈಟ್ ರೈಡರ್ಸ್ (KKR vs PBKS) ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯವನ್ನು ಆಡಲಿದೆ. ಆದರೆ, ಪಂದ್ಯ ಆರಂಭಕ್ಕೂ ಮುನ್ನ ಗೇಲ್ ತಂಡ ತೊರೆದಿದ್ದಾರೆ. ಈ ಆವೃತ್ತಿಯ ಮುಂದಿನ ಪಂದ್ಯಗಳಿಗೆ ಕ್ರಿಸ್ ಗೇಲ್ ಲಭ್ಯ ಇರುವುದಿಲ್ಲ ಎಂದು ಪಂಜಾಬ್ ತನ್ನ ಟ್ವಿಟ್ಟರ್ ಖಾತೆಯಲ್ಲಿ (Punjab Kings Twitter) ತಿಳಿಸಿದ್ದು, ಬಯೋಬಬಲ್ (Bio Bubble) ಆಯಾಸದಿಂದಾಗಿ ಐಪಿಎಲ್ ತೊರೆದಿದ್ದಾರೆ ಎಂದು ಟ್ವೀಟ್ ಮಾಡಿದೆ.
ಹೌದು, ಸತತವಾಗಿ ಬಯೋಬಬಲ್ ವ್ಯಾಪ್ತಿಯಲ್ಲಿರುವುದರಿಂದ ಮಾನಸಿಕ ಚೈತನ್ಯಕ್ಕಾಗಿ ಗೇಲ್ ಪಂಜಾಬ್ ಕಿಂಗ್ಸ್ ತಂಡ ತೊರೆಯುವುದಾಗಿ ತಿಳಿಸಿದ್ದಾರೆ. ಅಲ್ಲದೆ ಮುಂಬರುವ ಟಿ-20 ವಿಶ್ವಕಪ್‌ಗೆ ಸಜ್ಜಾಗಬೇಕಿದ್ದು, ಹೀಗಾಗಿ ಐಪಿಎಲ್‌ನಿಂದ ಬ್ರೇಕ್ ಪಡೆಯುತ್ತಿರುವೆ ಎಂದು ಗೇಲ್ ಹೇಳಿಕೊಂಡಿದ್ದಾರೆ. ನನಗೆ ಆಡಲು ಅವಕಾಶಕೊಟ್ಟ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಗೆ ಧನ್ಯವಾದಗಳು, ಮುಂದಿನ ಪಂದ್ಯಗಳಲ್ಲಿ ತಂಡಕ್ಕೆ ಶುಭವಾಗಲೆಂದು ಹಾರೈಸುತ್ತೇನೆ ಎಂದು ಗೇಲ್ ಹೇಳಿದ್ದಾರೆ.
? UPDATE ?
Chris Gayle will not be a part of the PBKS squad for the remainder of #IPL2021! #SaddaPunjab #PunjabKings pic.twitter.com/vHfyEeMOOJ
— Punjab Kings (@PunjabKingsIPL) September 30, 2021
“ಕಳೆದ ಕೆಲ ತಿಂಗಳುಗಳಿಂದ ಐಪಿಎಲ್ ಸೇರಿದಂತೆ ವಿವಿಧ ಟೂರ್ನಿಗಳ ಕಠಿಣ ಬಯೋಬಬಲ್‌ನಲ್ಲಿದ್ದೇನೆ. ಸಿಡಬ್ಲ್ಯೂಐ, ಸಿಪಿಎಲ್ ನಂತರ ಐಪಿಎಲ್‌ನ ಬಯೋಬಬಲ್ ಭಾಗವಾಗಿದ್ದೇನೆ. ನಾನೀಗ ಮಾನಸಿಕವಾಗಿ ಸುಧಾರಿಸಿಕೊಳ್ಳುವ ಅಗತ್ಯವಿದೆ. ಮುಂದಿನ ಟಿ-20 ವಿಶ್ವಕಪ್ ನಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ನೆರವಾಗಲು ದುಬೈನಲ್ಲೇ ವಿಶ್ರಾಂತಿ ಪಡೆಯುತ್ತಿದ್ದೇನೆ” ಎಂದು ಕ್ರಿಸ್ ಗೇಲ್ ಹೇಳಿದ್ದಾರೆ.
ಕ್ರಿಸ್ ಗೇಲ್ ಸದ್ಯ ಫಾರ್ಮ್ ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ. ಐಪಿಎಲ್ 2021ರ ಎರಡನೇ ಚರಣದಲ್ಲಿ ಇವರು 2 ಪಂದ್ಯಗಳನ್ನು ಆಡಿದ್ದು ಕೇವಲ 15 ರನ್ ಗಳಿಸಿದ್ದಾರೆ. ಸಿಪಿಎಲ್ 2021 ಗೆದ್ದ ಬಳಿಕ ಅವರು ನೇರವಾಗಿ ಐಪಿಎಲ್ ಸೇರಿಕೊಂಡಿದ್ದರು. ಗೇಲ್ ಅವರ ನಿರ್ಧಾರವನ್ನು ಗೌರವಿಸುವುದಾಗಿ ಪಂಜಾಬ್ ತಂಡದ ಕ್ರಿಕೆಟ್ ಚಟುವಟಿಕೆಗಳ ನಿರ್ದೇಶಕ ಅನಿಲ್ ಕುಂಬ್ಳೆ ತಿಳಿಸಿದ್ದಾರೆ.
ಇನ್ನು ಪಂಜಾಬ್ ತಂಡದ ವಿಚಾರಕ್ಕೆ ಬರುವುದಾದರೆ, ರಾಹುಲ್ ಪಡೆ ಇಂದಿನ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಗೆದ್ದರಷ್ಟೇ ಉಳಿಗಾಲ. ಎಲ್ಲಾದರು ಇಂದಿನ ಪಂದ್ಯ ಸೋತರೆ ಟೂರ್ನಿಯಿಂದ ಹೊರಬೀಳುವುದು ಖಚಿತ. ಪಂಜಾಬ್ ಬಳಗದಲ್ಲಿ ಪ್ರತಿಭಾವಂತರ ದೊಡ್ಡ ದಂಡು ಇದೆ. ಆದರೆ ತಂಡವಾಗಿ ಆಡುವಲ್ಲಿ ಸೋಲುತ್ತಿದೆ. ಸ್ಪಿನ್ನರ್ ರವಿ ಬಿಷ್ಣೋಯಿ ಬಿಟ್ಟರೆ ಉಳಿದ ಬೌಲರ್‌ಗಳಿಂದ ಸ್ಥಿರ ಪ್ರದರ್ಶನ ಮೂಡಿ ಬರುತ್ತಿಲ್ಲ. ಅನುಭವಿ ಮೊಹಮ್ಮದ್ ಶಮಿ, ಏಡನ್ ಮರ್ಕರಮ್ ಮತ್ತು ಹರಪ್ರೀತ್ ಬ್ರಾರ್ ವಿಕೆಟ್ ಕಿತ್ತುವಲ್ಲಿ ಯಶಸ್ವಿಯಾಗುತ್ತಿಲ್ಲ.
ಇನಿಂಗ್ಸ್ ಆರಂಭದ ಹೊಣೆ ನಾಯಕ ರಾಹುಲ್ ಮೇಲೆಯೇ ಇದೆ. ಮನದೀಪ್ ಸಿಂಗ್ ಲಯಕ್ಕೆ ಮರಳಿದರೆ ತಂಡದ ಬ್ಯಾಟಿಂಗ್ ಬಲಗೊಳ್ಳಬಹುದು. ಸದ್ಯಕ್ಕೆ ಪಂಜಾಬ್ ಕಿಂಗ್ಸ್ ಒಟ್ಟು 11 ಪಂದ್ಯಗಳನ್ನು ಆಡಿದ್ದು ಕೇವಲ 4 ಪಂದ್ಯಗಳನ್ನಷ್ಟೆ ಗೆದ್ದಿದೆ. ಏಳು ಪಂದ್ಯಗಳಲ್ಲಿ ಸೋಲುಂಡಿದೆ. ಒಟ್ಟು 8 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ -0.288 ನೆಟ್ರೇಟ್ನೊಂದಿಗೆ ಆರನೇ ಸ್ಥಾನದಲ್ಲಿದೆ.
KKR vs PBKS, IPL 2021: ಇಂದು ಕೋಲ್ಕತ್ತಾಕ್ಕೆ ಪಂಜಾಬ್ ಸವಾಲು: ರಾಹುಲ್ ಪಡೆಗೆ ಗೆದ್ದರಷ್ಟೆ ಉಳಿಗಾಲ
(Chris Gayle has decided to leave the IPL 2021 bio-secure environment Punjab Kings informed before KKR vs PBKS Match)
Published On - 8:13 am, Fri, 1 October 21