ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ (The Hundred) ಟೂರ್ನಮೆಂಟ್‌ನಲ್ಲಿ ಇಂಗ್ಲೆಂಡ್ ತಂಡದ ಬೌಲಿಂಗ್ ಆಲ್ರೌಂಡರ್ ಕ್ರಿಸ್ ಜೋರ್ಡಾನ್ (Chris Jordan) ಸ್ಫೋಟಕ ಬ್ಯಾಟಿಂಗ್ ಮಾಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ದಿ ಹಂಡ್ರೆಡ್ ಲೀಗ್ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಸದರ್ನ್ ಬ್ರೇವ್ ಹಾಗೂ ವೇಲ್ಸ್ ಫೈರ್ (Southern Brave vs Welsh Fire) ತಂಡಗಳು ಮುಖಾಮುಖಿಯಾಗಿದ್ದವು. ಈ ರೋಚಕ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸದರ್ನ್ ಬ್ರೇವ್ ತಂಡ 8 ವಿಕೆಟ್ ಕಳೆದುಕೊಂಡು 147 ರನ್ ಕಲೆಹಾಕಿತು. ತಂಡದ ಪರ ಕ್ರಿಸ್ ಜೋರ್ಡಾನ್ ಅಜೇಯ 70 ರನ್ ಸಿಡಿಸಿದರು. ಇನ್ನು ಈ ಗುರಿ ಬೆನ್ನಟ್ಟಿದ ವೇಲ್ಸ್ ಫೈರ್ ತಂಡ 7 ವಿಕೆಟ್ ಕಳೆದುಕೊಂಡು 145 ರನ್ ಗಳಿಸಲ್ಟೇ ಶಕ್ತವಾಗಿ 2 ರನ್ಗಳಿಂದ ಸೋಲೊಪ್ಪಿಕೊಂಡಿತು. ಈ ಪಂದ್ಯದಲ್ಲಿ ಬಿರುಗಾಳಿ ಬ್ಯಾಟಿಂಗ್ ಮಾಡಿದ ಜೋರ್ಡಾನ್, ತಮ್ಮ ಇನ್ನಿಂಗ್ಸ್ನಲ್ಲಿ 32 ಎಸೆತಗಳನ್ನು ಎದುರಿಸಿ, ಮೂರು ಬೌಂಡರಿ ಹಾಗೂ 7 ಸಿಕ್ಸರ್‌ಗಳ ನೆರವಿನಿಂದ ಅಜೇಯ 70 ರನ್ ಸಿಡಿಸಿದರು. ಜೋರ್ಡಾನ್ ಅವರ ಇನ್ನಿಂಗ್ಸ್‌ನ ಆಧಾರದ ಮೇಲೆ ಮಾತ್ರ ತಂಡ ಉತ್ತಮ ಸ್ಕೋರ್ ಕಲೆಹಾಕಲು ಸಾಧ್ಯವಾಯಿತು. ಇಲ್ಲದಿದ್ದರೆ ಈ ಸದರ್ನ್ ಬ್ರೇವ್ ತಂಡ 100 ರನ್‌ಗಳನ್ನು ದಾಟುವುದು ಕಷ್ಟಕರವಾಗಿತ್ತು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸದರ್ನ್ ಬ್ರೇವ್ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ತಂಡದಲ್ಲಿ ಸ್ಫೋಟಕ ಬ್ಯಾಟರ್ಗಳ ದಂಡೆ ಇದ್ದರು, ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಡೆವೊನ್ ಕಾನ್ವೆ ಕೇವಲ ನಾಲ್ಕು ರನ್ ಗಳಿಸಲಷ್ಟೇ ಶಕ್ತರಾದರು. ಫಿನ್ ಅಲೆನ್ ಅವರ ಇನ್ನಿಂಗ್ಸ್ ಸಹ 21 ರನ್‌ಗಳನ್ನು ಮೀರಲಿಲ್ಲ. ನಾಯಕ ಜೇಮ್ಸ್ ವಿನ್ಸ್ ಕೂಡ ಕೇವಲ 18 ರನ್‌ಗಳ ಕಾಣಿಕೆ ನೀಡಿದರು. ಜಾರ್ಜ್ ಗಾರ್ಟನ್ ಕೂಡ 1 ರನ್‌ಗಳಿಗೆ ಸುಸ್ತಾದರೆ, ಟಿಮ್ ಡೇವಿಡ್‌ನಂತಹ ಬಿರುಸಿನ ಬ್ಯಾಟ್ಸ್‌ಮನ್ ಎರಡು ರನ್‌ಗಳಿಗೆ ಪೆವಿಲಿಯನ್ ಸೇರಿಕೊಂಡರು.
Smriti Mandhana: ದಿ ಹಂಡ್ರೆಡ್ನಲ್ಲಿ ಈ ದಾಖಲೆ ಬರೆದ ಮೊದಲ ಮಹಿಳಾ ಆಟಗಾರ್ತಿ ಸ್ಮೃತಿ ಮಂಧಾನ..!
ಜೇಮ್ಸ್ ಫುಲ್ಲರ್ಗೆ ಖಾತೆ ತೆರೆಯಲೂ ಸಾಧ್ಯವಾಗದೆ ಪೆವಿಲಿಯನ್ ಹಾದಿ ಹಿಡಿದರು. 18 ರನ್ ಗಳಿಸಿ ಲೂಯಿಸ್ ಡಿ ಪ್ಲೋಯ್ ಔಟಾದರೆ, ರೆಹಾನ್ ಅಹ್ಮದ್ ಒಂದು ರನ್ ಮೀರಿ ನಿಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ ಸದರ್ನ್ ಬ್ರೇವ್ ತಂಡ ಕೇವಲ 76 ರನ್‌ಗಳಿಗೆ ತನ್ನ ಎಂಟು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಇದಾದ ನಂತರ ಕ್ರೀಸ್ಗೆ ಬಂದ ತಕ್ಷಣ ಬಿರುಸಿನ ಬ್ಯಾಟಿಂಗ್ ಆರಂಭಿಸಿದ ಜೋರ್ಡಾನ್ ತಂಡವನ್ನು 147 ರನ್‌ಗಳ ಗಡಿ ದಾಟಿಸಿದರು.
ಈ ಪಂದ್ಯದಲ್ಲಿ ವೇಲ್ಸ್ ತಂಡ ಗೆಲುವಿಗಾಗಿ ಹೋರಾಟ ನಡೆಸಿತ್ತಾದರೂ ಕೊನೆಯಲ್ಲಿ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ. 147 ರನ್‌ಗಳ ಗುರಿ ಬೆನ್ನಟ್ಟಿದ ತಂಡ ಮೊದಲ ಓವರ್ನಲ್ಲೇ ಜೋ ಕ್ಲಾರ್ಕ್ ವಿಕೆಟ್ ಕಳೆದುಕೊಂಡಿತು. ಆ ಬಳಿಕ ತಂಡವನ್ನು ಆರಂಭಿಕ ಆಘಾತದಿಂದ ಹೊರತಂದ ಲ್ಯೂಕ್ ವೆಲ್ಸ್ ಮತ್ತು ಸ್ಟೀಫನ್ ಎಸ್ಕಿನಾಜಿ ತಂಡದ ಮೊತ್ತವನ್ನು 47 ರನ್‌ಗಳಿಗೆ ಕೊಂಡೊಯ್ದರು. ಈ ವೇಳೆ 24 ರನ್ ಗಳಿಸಿದ ಲ್ಯೂಕ್ ಔಟಾದರು. ಇದಾದ ಬಳಿಕ ಸ್ಟೀಫನ್ 31 ರನ್ ಗಳಿಸಿ ತಂಡದ ಮೂರನೇ ವಿಕೆಟ್ ಆಗಿ ಔಟಾದರು. ನಾಯಕ ಟಾಮ್ ಅಬೆಲ್ ಕೇವಲ 11 ರನ್ ಗಳಿಸಲಷ್ಟೇ ಶಕ್ತರಾದರು.
ಕೆಳ ಕ್ರಮಾಂಕದಲ್ಲಿ ಗ್ಲೆನ್ ಫಿಲಿಪ್ಸ್ 19 ಎಸೆತಗಳಲ್ಲಿ 22, ಡೇವಿಡ್ ವಿಲ್ಲಿ 19 ಎಸೆತಗಳಲ್ಲಿ 31 ಮತ್ತು ಬೆನ್ ಗ್ರೀನ್ ಒಂಬತ್ತು ಎಸೆತಗಳಲ್ಲಿ 16 ರನ್ ಗಳಿಸಿ ತಂಡದ ಗೆಲುವಿಗೆ ಯತ್ನಿಸಿದರಾದರೂ ಯಶಸ್ವಿಯಾಗಲಿಲ್ಲ. ಸದರ್ನ್ ಪರ ಕ್ರೇಗ್ ಓವರ್ಟನ್, ಟೈಮಲ್ ಮಿಲ್ಸ್ ಮತ್ತು ರೆಹಮಾನ್ ಅಹ್ಮದ್ ತಲಾ ಎರಡು ವಿಕೆಟ್ ಪಡೆದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:19 pm, Sat, 5 August 23