Andre Russell: ಬರೋಬ್ಬರಿ 255 ರನ್: ಅಬ್ಬರ, ಸಿಡಿಲಬ್ಬರ…ಅತೀ ವೇಗದ ಅರ್ಧಶತಕ ಸಿಡಿಸಿದ ಆ್ಯಂಡ್ರೆ ರಸೆಲ್

| Updated By: ಝಾಹಿರ್ ಯೂಸುಫ್

Updated on: Aug 28, 2021 | 3:55 PM

Caribbean Premier League (CPL 2021): ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಸೇಂಟ್ ಲೂಸಿಯಾ ಕಿಂಗ್ಸ್​ ತಂಡ ರನ್​ಗಳಿಸಲು ಪರದಾಡಿದರು.

Andre Russell: ಬರೋಬ್ಬರಿ 255 ರನ್: ಅಬ್ಬರ, ಸಿಡಿಲಬ್ಬರ...ಅತೀ ವೇಗದ ಅರ್ಧಶತಕ ಸಿಡಿಸಿದ ಆ್ಯಂಡ್ರೆ ರಸೆಲ್
Andre Russell
Follow us on

Caribbean Premier League (CPL 2021): ಕೆರಿಬಿಯನ್ ಪ್ರೀಮಿಯರ್ ಲೀಗ್​ 2021 (CPL 2021) ಅಬ್ಬರ ಶುರುವಾಗಿದೆ. ಟಿ20 ಕ್ರಿಕೆಟ್​​ನ ಬಲಿಷ್ಠರ ಸಮಾಗಮ ಎಂಬಂತಿರುವ ಸಿಪಿಎಲ್​ನ 3ನೇ ದಿನದಲ್ಲೇ ಸ್ಪೋಟಕ ಬ್ಯಾಟ್ಸ್​ಮನ್ ಆ್ಯಂಡ್ರೆ ರಸೆಲ್ (Andre Russell )ಹೊಸ ದಾಖಲೆ ಬರೆದಿದ್ದಾರೆ. ವಾರ್ನರ್ ಪಾರ್ಕ್​ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಜಮೈಕಾ ತಲ್ಲವಾಸ್ (Jamaica Tallawahs) ಹಾಗೂ ಸೇಂಟ್ ಲೂಸಿಯಾ ಕಿಂಗ್ಸ್ (Saint Lucia Kings) ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಲೂಸಿಯಾ ಕಿಂಗ್ಸ್ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ತಲ್ಲವಾಸ್​ ತಂಡಕ್ಕೆ ವಾಲ್ಟನ್ (47) ಹಾಗೂ ಕೆನ್ನರ್ ಲೇವಿಸ್ (48) ಉತ್ತಮ ಆರಂಭ ಒದಗಿಸಿದ್ದರು. ಈ ಜೋಡಿ ಮೊದಲ 6 ಓವರ್​ನಲ್ಲಿ 81 ರನ್ ಬಾರಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.

ಆ ಬಳಿಕ ಕ್ರೀಸ್​ಗಿಳಿದ ಯುವ ಬ್ಯಾಟ್ಸ್​ಮನ್​ ಹೈದರ್ ಅಲಿ 45 ರನ್ ಬಾರಿಸಿದರು. ಇನ್ನು ನಾಯಕ ರೋವ್ಮನ್ ಪೊವೆಲ್ 38 ರನ್ ಸಿಡಿಸಿದರು. ಇದಾಗ್ಯೂ ತಂಡದ ಮೊತ್ತ 200ರ ಅಸುಪಾಸಿಗೇರಲಿದೆ ಎಂದು ಊಹಿಸಲಾಗಿತ್ತು. ಆದರೆ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆ್ಯಂಡ್ರೆ ರಸೆಲ್ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಕ್ರೀಸ್​ಗಿಳಿಯುತ್ತಿದ್ದಂತೆ ಸಿಡಿಲಬ್ಬರ ಶುರು ಮಾಡಿದ್ದರು.

ಸೇಂಟ್ ಲೂಸಿಯಾ ತಂಡದ ಪಾಕ್ ವೇಗಿ ವಹಾಬ್ ರಿಯಾಜ್​ರ ಒಂದೇ ಓವರ್‌ನಲ್ಲಿ 32 ರನ್ ಬಾರಿಸಿದರು. ಈ ಓವರ್‌ನಲ್ಲಿ ರಸೆಲ್ ನಾಲ್ಕು ಸಿಕ್ಸರ್ ಮತ್ತು ಒಂದು ಫೋರ್ ಸಿಡಿಸಿದ್ದರು. ಇನ್ನು ಒಟ್ಟು 6 ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ ಆ್ಯಂಡ್ರೆ ರಸೆಲ್ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಕೆರಿಬಿಯನ್ ಪ್ರೀಮಿಯರ್ ಲೀಗ್​ನ ಅತ್ಯಂತ ವೇಗದ ಅರ್ಧಶತಕ ಎಂಬ ದಾಖಲೆಗೆ ಪಾತ್ರವಾಯಿತು. ಈ ಹಿಂದೆ ಜೆಪಿ ಡುಮಿನಿ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದು ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಕೆರಿಬಿಯನ್ ಕಿಂಗ್ ಆ್ಯಂಡ್ರೆ ರಸೆಲ್ ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಇನ್ನು ಈ ಪಂದ್ಯದಲ್ಲಿ ರಸೆಲ್ ಅಜೇಯ 50 ರನ್​ ಬಾರಿಸುವುದರೊಂದಿಗೆ ಜಮೈಕಾ ತಲ್ಲವಾಸ್ ತಂಡದ ಸ್ಕೋರ್ ನಿಗದಿತ 20 ಓವರ್​ನಲ್ಲಿ 5 ವಿಕೆಟ್ ಕಳೆದುಕೊಂಡು 255 ಕ್ಕೆ ಬಂದು ನಿಂತಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಸೇಂಟ್ ಲೂಸಿಯಾ ಕಿಂಗ್ಸ್​ ತಂಡ ರನ್​ಗಳಿಸಲು ಪರದಾಡಿದರು. ಇತ್ತೀಚೆಗೆ ಆರ್​ಸಿಬಿಗೆ ಸೇರ್ಪಡೆಯಾದ ಟಿಮ್ ಡೇವಿಡ್ ಅವರ ಅರ್ಧಶತಕ (28 ಎಸೆತ 56 ರನ್)ದ ಹೊರತಾಗಿ ಯಾವೊಬ್ಬ ಬ್ಯಾಟ್ಸ್​​ಮನ್ ಕೂಡ ಜಮೈಕಾ ಬೌಲರುಗಳ ಮುಂದೆ ನೆಲೆಯೂರಲಿಲ್ಲ. ಪರಿಣಾಮ ಸೇಂಟ್ ಲೂಸಿಯಾ ಕಿಂಗ್ಸ್ 135 ರನ್​ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಜಮೈಕಾ ತಲ್ಲವಾಸ್ 125 ರನ್​ಗಳ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು.

ಇದನ್ನೂ ಓದಿ: T20 ವಿಶ್ವಕಪ್ ಅರ್ಹತಾ​ ಪಂದ್ಯ: 20 ಓವರ್​ನಲ್ಲಿ ಕೇವಲ 32 ರನ್​..!

ಇದನ್ನೂ ಓದಿ: India vs England 3rd test: ಸಿರಾಜ್ ಮೇಲೆ ಚೆಂಡಿನ ದಾಳಿ: ಮುಂದುವರೆದ ಇಂಗ್ಲೆಂಡ್ ಪ್ರೇಕ್ಷಕರ ಪುಂಡಾಟ

ಇದನ್ನೂ ಓದಿ: IPL 2021: ಮಾಜಿ RCB ಆಟಗಾರ, ವಿಶ್ವದ ನಂಬರ್ 1 ಬೌಲರ್ ರಾಜಸ್ಥಾನ್ ರಾಯಲ್ಸ್ ಪಾಲು

ಇದನ್ನೂ ಓದಿ: George Garton: RCB ತಂಡಕ್ಕೆ ಎಂಟ್ರಿ ಕೊಟ್ಟಿರುವ ಜಾರ್ಜ್ ಗಾರ್ಟನ್ ಯಾರು..?

(CPL 2021: Andre Russell Smashes Record-Breaking Fifty)