
ಅಡಿಲೇಡ್ ಟೆಸ್ಟ್‌ನಲ್ಲಿ ಟಾಸ್ ಗೆದ್ದಿರುವ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಆರಂಭಿಸಿದೆ. ಆದರೆ ತಂಡಕ್ಕೆ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಆಘಾತ ಎದುರಾಗಿದೆ. ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ಆರಂಭಿಕ ಯಶಸ್ವಿ ಜೈಸ್ವಾಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಎಸೆದ ಮೊದಲ ಎಸೆತದಲ್ಲೇ ಜೈಸ್ವಾಲ್ ಎಲ್ಬಿ ಬಲೆಗೆ ಬಿದ್ದರು. ಮೊದಲ ಎಸೆತವನ್ನು ಬೌಂಡರಿಗಟ್ಟುವ ಪ್ರಯತ್ನಕ್ಕೆ ಕೈಹಾಕಿದ್ದೆ ಜೈಸ್ವಾಲ್ ವಿಕೆಟ್ ಪತನಕ್ಕೆ ಕಾರಣವಾಯಿತು. ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ವಿಕೆಟ್ ಕಳೆದುಕೊಂಡಿರುವುದರಿಂದ ಟೀಂ ಇಂಡಿಯಾಕ್ಕೆ ಆರಂಭಿಕ ಆಘಾತ ಎದುರಾಗಿದೆ.
ಮೊದಲ ಎಸೆತದಲ್ಲಿ ಔಟಾದ ಕಾರಣ, ಅಡಿಲೇಡ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಇದಕ್ಕೂ ಮುನ್ನ ಅವರು ಪರ್ತ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲೂ ಖಾತೆ ತೆರೆಯದೆ ಔಟಾಗಿದ್ದರು. ಎರಡೂ ಪಂದ್ಯಗಳ ಮೊದಲ ಇನ್ನಿಂಗ್ಸ್‌ನಲ್ಲಿ ಜೈಸ್ವಾಲ್ರನ್ನು ಶೂನ್ಯಕ್ಕೆ ಔಟ್ ಮಾಡುವಲ್ಲಿ ಆಸೀಸ್ ಅನುಭವಿ ವೇಗಿ ಮಿಚೆಲ್ ಸ್ಟಾರ್ಕ್ ಯಶಸ್ವಿಯಾಗಿದ್ದಾರೆ.
FIRST BALL OF THE TEST!
Mitchell Starc sends Adelaide into delirium.#AUSvIND | #PlayOfTheDay | @nrmainsurance pic.twitter.com/pIPwqlX3dJ
— cricket.com.au (@cricketcomau) December 6, 2024
ವಾಸ್ತವವಾಗಿ ಪರ್ತ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಸ್ಟಾರ್ಕ್‌ಗೆ ಶೂನ್ಯಕ್ಕೆ ಔಟಾಗಿದ್ದ ಯಶಸ್ವಿ ಜೈಸ್ವಾಲ್ ಅವರು ಪರ್ತ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕದ ಇನ್ನಿಂಗ್ಸ್ ಆಡಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ ಜೈಸ್ವಾಲ್, ಸ್ಟಾರ್ಕ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದರು. ಈ ವೇಳೆ ಸ್ಟಾರ್ಕ್ರನ್ನು ಸ್ಲೆಡ್ಜ್ ಮಾಡಿ ಜೈಸ್ವಾಲ್ ಸಖತ್ ಸುದ್ದಿಯಾಗಿದ್ದರು. ಆದರೀಗ ಮತ್ತೊಮ್ಮೆ ಜೈಸ್ವಾಲ್ರನ್ನು ಶೂನ್ಯಕ್ಕೆ ಔಟ್ ಮಾಡಿರುವ ಸ್ಟಾರ್ಕ್, ಯುವ ಆಟಗಾರನ ವಿರುದ್ಧ ತಮ್ಮ ಸೇಡು ತೀರಿಸಿಕೊಂಡಿದ್ದಾರೆ.
ಅಡಿಲೇಡ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಜೈಸ್ವಾಲ್ ವಿಕೆಟ್ ಪತನವಾಗುವುದರೊಂದಿಗೆ, ಅಡಿಲೇಡ್‌ನಲ್ಲಿ 4 ವರ್ಷಗಳ ಹಿಂದೆ ನಡೆದಿದ್ದ ಅದೊಂದು ಅವಮಾನಕರ ಘಟನೆ ಮತ್ತೆ ಮರುಕಳಿಸುತ್ತಾ ಎಂಬ ಭಯ ಟೀಂ ಇಂಡಿಯಾ ಅಭಿಮಾನಿಗಳನ್ನು ಕಾಡಲಾರಂಭಿಸಿದೆ. 4 ವರ್ಷಗಳ ಹಿಂದೆ ಅಂದರೆ ಡಿಸೆಂಬರ್ 2020 ರಲ್ಲಿ ಅಡಿಲೇಡ್‌ನಲ್ಲಿ ನಡೆದಿದ್ದ ಮೊದಲ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಭಾರತ ತಂಡವು ಕೇವಲ 36 ರನ್ಗಳಿಗೆ ಆಲೌಟ್ ಆಗಿತ್ತು.
ಆದರೆ ಜೈಸ್ವಾಲ್ ವಿಕೆಟ್ ಪತನದ ಬಳಿಕ ಕ್ರೀಸ್ಗೆ ಬಂದಿರುವ ಶುಭ್‌ಮನ್ ಗಿಲ್, ಸ್ಟಾರ್ಕ್ ಅವರ ಒಂದೇ ಓವರ್ನಲ್ಲಿ ಎರಡು ಬೌಂಡರಿ ಬಾರಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದ್ದಾರೆ. ಗಿಲ್ಗೆ ರಾಹುಲ್ರಿಂದಲೂ ಉತ್ತಮ ಸಾಥ್ ಸಿಕ್ಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ